IPL 2023: ರಾಜಸ್ಥಾನ್ ವಿರುದ್ಧದ ತಮ್ಮ ಯಶಸ್ವಿ ಬೌಲಿಂಗ್ ಹಿಂದಿನ ಕಾರಣ ಬಿಚ್ಚಿಟ್ಟ ಹರ್ಷಲ್ ಪಟೇಲ್

ನಿನ್ನೆ ( ಏಪ್ರಿಲ್ 23 ) ಭಾನುವಾರ ಎರಡು ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳು ಜರುಗಿದವು. ಮಧ್ಯಾಹ್ನ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಡಿದರೆ, ರಾತ್ರಿ ನಡೆದ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾದವು.
ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಜಯ ಕಂಡವು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯ ರೋಚಕತೆಯಿಂದ ಕೂಡಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಕಲೆಹಾಕಿ 190 ರನ್‌ಗಳ ಗುರಿಯನ್ನು ನೀಡಿತು.
ಈ ಗುರಿಯನ್ನು ಬೆನ್ನತ್ತಲು ಯತ್ನಿಸಿದ ರಾಜಸ್ಥಾನ್ ರಾಯಲ್ಸ್ ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್ ಹಾಗೂ ಧೃವ್ ಜುರೆಲ್ ಭರ್ಜರಿ ಬ್ಯಾಟಿಂಗ್ ಮಾಡಿದರೂ ಸಹ ಗೆಲ್ಲಲಿಲ್ಲ. 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದ ರಾಜಸ್ಥಾನ್ ರಾಯಲ್ಸ್ 7 ರನ್‌ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು.
ಇನ್ನು ಅಂತಿಮ ಓವರ್ ಎಸೆದ ಹರ್ಷಲ್ ಪಟೇಲ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲ್ಲಲು ಬೇಕಿದ್ದ 20 ರನ್ ಬಿಟ್ಟುಕೊಡದೇ ಟೀಕೆಗಳಿಂದ ಪಾರಾದರು. ಗೆಲ್ಲಲು 6 ಎಸೆತಗಳಲ್ಲಿ 20 ರನ್ ಬೇಕಿದ್ದಾಗ ಹರ್ಷಲ್ ಪಟೇಲ್ ಬೌಲಿಂಗ್ ಮಾಡಲು ಮುಂದಾದಾಗ ಬಹುತೇಕರು ಹರ್ಷಲ್ ಪಟೇಲ್ ರನ್ ನೀಡಲಿದ್ದಾರೆ ಎಂದೇ ಊಹಿಸಿದ್ದರು.

ಅದರಂತೆ ಅಶ್ವಿನ್ ಮೊದಲ ಎಸೆತಕ್ಕೆ ಬೌಂಡರಿ, ಎರಡನೇ ಎಸೆತಕ್ಕೆ ಎರಡು ರನ್ ಹಾಗೂ ಮೂರನೇ ಎಸೆತಕ್ಕೆ ಬೌಂಡರಿ ಬಾರಿಸಿದ್ದರು. ಹೀಗೆ ಮೊದಲ ಮೂರು ಎಸೆತಗಳಲ್ಲಿ ಪಟೇಲ್ 10 ರನ್ ನೀಡಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿದ್ದರು. ಆದರೆ ನಾಲ್ಕನೇ ಎಸೆತದಲ್ಲಿ ಅಶ್ವಿನ್ ವಿಕೆಟ್ ಪಡೆದ ಹರ್ಷಲ್ ಪಟೇಲ್ ಐದನೇ ಹಾಗೂ ಆರನೇ ಎಸೆತಗಳಲ್ಲಿ ತಲಾ ಸಿಂಗಲ್ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಅಶ್ವಿನ್ ವಿಕೆಟ್ ಮಾತ್ರವಲ್ಲದೇ ಅದಕ್ಕೂ ಮೊದಲೇ ನೆಲಕಚ್ಚಿ ನಿಂತಿದ್ದ ಯಶಸ್ವಿ ಜೈಸ್ವಾಲ್ ಹಾಗೂ ಸ್ಪೋಟಕ ಆಟಗಾರ ಸಂಜು ಸ್ಯಾಮ್ಸನ್ ಅವರ ವಿಕೆಟ್‌ಗಳನ್ನೂ ಸಹ ಹರ್ಷಲ್ ಪಟೇಲ್ ಪಡೆದಿದ್ದರು. ಹೀಗೆ ಒಟ್ಟು ಮೂರು ವಿಕೆಟ್‌ಗಳನ್ನು ಪಡೆದ ಪಟೇಲ್ ಪಂದ್ಯ ಮುಗಿದ ಬಳಿಕ ಮಾತನಾಡಿದ್ದು ತಮ್ಮ ಬೌಲಿಂಗ್ ಯಶಸ್ವಿಯಾಗಲು ಕಾರಣವೇನು ಎಂಬುದನ್ನು ಬಿಚ್ಚಿಟ್ಟಿದ್ದಾರೆ.
"ತಂಡ ಫಾಫ್ ಡು ಪ್ಲೆಸಿಸ್ ಅನ್ನು ಬ್ಯಾಟ್ಸ್‌ಮನ್ ಆಗಿ ಹಾಗೂ ನನ್ನನ್ನು ಬೌಲರ್ ಆಗಿ ಉಪಯೋಗಿಸಿದ್ದು ದೊಡ್ಡ ಅನುಕೂಲವಾಯಿತು. ಇಬ್ಬರೂ ಸಹ ಗಾಯಕ್ಕೊಳಗಾಗಿರುವ ಕಾರಣ ನನಗೆ ಬ್ಯಾಟಿಂಗ್ ಮಾಡಲಾಗುತ್ತಿರಲಿಲ್ಲ ಹಾಗೂ ಫಾಫ್ ಫೀಲ್ಡಿಂಗ್ ಮಾಡಲಾಗುತ್ತಿರಲಿಲ್ಲ. ಆದರೆ ಇಂಪ್ಯಾಕ್ಟ್ ನಿಯಮ ನಮ್ಮ ಪ್ರಮುಖ ಕ್ಷೇತ್ರಗಳಲ್ಲಿ ಪ್ರದರ್ಶನ ನೀಡಲು ಅನುಕೂಲ ಮಾಡಿಕೊಟ್ಟಿತು" ಎಂದು ಹೇಳಿದ್ದಾರೆ.
ಈ ಮೂಲಕ ತಮ್ಮ ಯಶಸ್ವಿ ಬೌಲಿಂಗ್‌ಗೆ ಇಂಪ್ಯಾಕ್ಟ್ ರೂಲ್ ಕಾರಣ ಎಂದು ಹರ್ಷಲ್ ಪಟೇಲ್ ತಿಳಿಸಿದ್ದು, ಫೀಲ್ಡಿಂಗ್ ಮಾಡುವ ಮುನ್ನ ಹೆಣೆದಿದ್ದ ಮತ್ತೊಂದು ಉಪಾಯವನ್ನೂ ಸಹ ಬಿಚ್ಚಿಟ್ಟರು. "ಚೆಂಡು ಹೊಸತಾಗಿದ್ದಾಗ ಹೊಳೆಯುತ್ತಿರುತ್ತದೆ ಹಾಗೂ ಗಟ್ಟಿಯಾಗಿರುತ್ತದೆ. ಇದರಿಂದ ಸುಲಭವಾಗಿ ರನ್ ಗಳಿಸಬಹುದು. ಅದೇ ರೀತಿ ಚೆಂಡು ಹಳೆಯದಾದಷ್ಟು ಗಟ್ಟಿತನ ಕಳೆದುಕೊಂಡು ಹೊಳಪು ಕಡಿಮೆಯಾಗುತ್ತೆ. ಈ ಸಂದರ್ಭಸದಲ್ಲಿ ಸುಲಭವಾಗಿ ರನ್ ಗಳಿಸುವುದು ಸಾಧ್ಯವಿಲ್ಲ. ಹೀಗಾಗಿ ಫೀಲ್ಡಿಂಗ್ ಮಾಡುವ ಮುನ್ನ ನಡೆದಿದ್ದ ಮಾತುಕತೆಯಲ್ಲಿ ಒಳ್ಳೆಯ ಪಾರ್ಟ್‌ನರ್‌ಶಿಪ್ ಕಟ್ಟಿದರೆ ಆ ಸಂದರ್ಭದಲ್ಲಿ ಸತತವಾಗಿ ಡಾಟ್ ಬಾಲ್‌ಗಳನ್ನು ಹಾಕಿ ಬ್ಯಾಟ್ಸ್‌ಮನ್ ಮೇಲೆ ಒತ್ತಡ ಹೇರುವ ಯೋಜನೆ ಹಾಕಿಕೊಂಡಿದ್ದೆವು" ಎಂದು ಪಟೇಲ್ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications