IPL 2023: ಮುಂಬೈ ವಿರುದ್ಧ ಸೋತ ಬಳಿಕವೂ ಆರ್‌ಸಿಬಿಗೆ ಇದೆ ಪ್ಲೇಆಫ್ ಪ್ರವೇಶಿಸಲು ದಾರಿ; ಈ ರೀತಿ ಗೆಲ್ಲಲೇಬೇಕು!

ಸದ್ಯ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಗಿಯುವ ಸಮಯ ಹತ್ತಿರ ಬರುತ್ತಿದ್ದು, ಯಾವ ತಂಡಗಳು ಪ್ಲೇಆಫ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ ಎಂಬ ಕುತೂಹಲ ಹಾಗೂ ಚರ್ಚೆಗಳು ಹೆಚ್ಚಾಗಿವೆ.
ಇನ್ನು ಟೂರ್ನಿಯ ಮೊದಲಾರ್ಧ ಮುಕ್ತಾಯವಾಗುವ ಸಮಯಕ್ಕೆ ಈ ನಾಲ್ಕು ತಂಡಗಳು ಪ್ಲೇಆಫ್ ಪ್ರವೇಶಿಸಲಿವೆ ಎಂದು ಗುರುತಿಸಿಕೊಂಡಿದ್ದ ತಂಡಗಳ ಪೈಕಿ ಕೆಲ ತಂಡಗಳು ಊಹೆಯಂತೆ ಪ್ಲೇಆಫ್ ಸುತ್ತಿನತ್ತ ಹೆಜ್ಜೆ ಇಟ್ಟಿದ್ದರೆ, ಇನ್ನೂ ಕೆಲ ತಂಡಗಳು ಊಹಿಸಿದ್ದಕ್ಕೆ ವಿರುದ್ಧವಾಗಿ ಪ್ರದರ್ಶನ ನೀಡಿ ಪ್ಲೇಆಫ್ ಪ್ರವೇಶಿಸುವ ಸಾಧ್ಯತೆಗಳಿಂದ ದೂರ ಸರಿಯುತ್ತಿವೆ.
ಅಂತಹ ತಂಡವೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಟೂರ್ನಿಯಲ್ಲಿ ತನ್ನ ಮೊದಲ ಲೀಗ್ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಿ ಮುಂಬೈ ನೀಡಿದ್ದ 172 ರನ್‌ಗಳ ಗುರಿಯನ್ನು ಕೇವಲ 16.2 ಓವರ್‌ಗಳಲ್ಲಿ ಮುಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್‌ಗಳ ಅಬ್ಬರದ ಗೆಲುವಿನೊಂದಿಗೆ ಶುಭಾರಂಭ ಮಾಡಿತ್ತು.
ಆದರೆ ಮುಂಬೈ ಇಂಡಿಯನ್ಸ್ ತಂಡವನ್ನು ಎರಡನೇ ಬಾರಿಗೆ ಈ ಬಾರಿಯ ಐಪಿಎಲ್‌ನಲ್ಲಿ ನಿನ್ನೆ ( ಮೇ 9 ) ನಡೆದ ಲೀಗ್ ಹಂತದ 54ನೇ ಪಂದ್ಯದಲ್ಲಿ ಎದುರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯವಾಗಿ ಸೋತು ಪ್ಲೇಆಫ್ ರೇಸ್‌ನಿಂದ ಒಂದು ಹೆಜ್ಜೆ ಹಿಂದೆ ಸರಿದಿದೆ.
ಹೌದು, ವಾಂಖೆಡೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ 200 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ 16.3 ಓವರ್‌ಗಳಲ್ಲಿಯೇ 4 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ಮೂರನೇ ಸ್ಥಾನಕ್ಕೆ ಏರಿಕೆ ಕಂಡರೆ ಆರನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಏಳನೇ ಸ್ಥಾನಕ್ಕೆ ಕುಸಿತ ಕಂಡಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿಕೊಂಡಿದೆ.
ಟೂರ್ನಿಯಲ್ಲಿ ಈಗಾಗಲೇ ಒಟ್ಟು 11 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ಪಂದ್ಯಗಳಲ್ಲಿ ಗೆದ್ದು 6 ಪಂದ್ಯಗಳಲ್ಲಿ ಸೋತಿದ್ದು 10 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ರೀತಿಯೇ ಪ್ಲೇಆಫ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಲಕ್ನೋ ಸೂಪರ್ ಜೈಂಟ್ಸ್, ರಾಜಸ್ಥಾನ್ ರಾಯಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳೂ ಸಹ ಪೈಪೋಟಿ ನಡೆಸುತ್ತಿದ್ದು, ಈ ತಂಡಗಳನ್ನು ಹಿಂದಿಕ್ಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಲೂ ಸಹ ಪ್ಲೇಆಫ್ ಪ್ರವೇಶಿಸಲು ಮಾರ್ಗವೊಂದಿದೆ.
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟಾಪ್ 2 ಸ್ಥಾನಗಳನ್ನು ಪಡೆದುಕೊಳ್ಳುವುದು ಅಸಾಧ್ಯವಾಗಿದ್ದು, ಉಳಿದ ಸ್ಥಾನಗಳನ್ನಾದರೂ ಪಡೆದುಕೊಂಡು ಪ್ಲೇಆಫ್ ಪ್ರವೇಶಿಸಬೇಕೆಂದರೆ ಉಳಿದ ತನ್ನ ಮುಂದಿನ 3 ಪಂದ್ಯಗಳನ್ನು ಗೆಲ್ಲಬೇಕಿದೆ.
ಹೀಗಿದ್ದರೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪೈಪೋಟಿ ಎದುರಾಗುವ ಸಾಧ್ಯತೆಗಳಿದ್ದು, ಉತ್ತಮ ನೆಟ್ ರನ್ ರೇಟ್ ಅನ್ನು ಪಡೆದುಕೊಂಡಾಗ ಮಾತ್ರ ಆರ್‌ಸಿಬಿ ಯಶಸ್ವಿಯಾಗಿ ಪ್ಲೇಆಫ್ ಪ್ರವೇಶಿಸಲಿದೆ. ಒಟ್ಟಾರೆಯಾಗಿ ಉಳಿದ ಮೂರು ಪಂದ್ಯಗಳನ್ನು ಆರ್‌ಸಿಬಿ ಒಳ್ಳೆಯ ನೆಟ್ ರನ್ ರೇಟ್‌ನೊಂದಿಗೆ ಗೆಲ್ಲುವುದೊಂದೇ ಪ್ಲೇಆಫ್ ಮಾರ್ಗವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications