IPL 2023: ಫಾಫ್ ಡುಪ್ಲೆಸಿಸ್ ಬದಲು ಕೊಹ್ಲಿ ಮತ್ತೆ ಆರ್‌ಸಿಬಿ ನಾಯಕನಾಗಿದ್ದೇಕೆ?
ಪ್ರಸ್ತುತ ನಡೆಯುತ್ತಿರುವ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 2 ಪಂದ್ಯಗಳು ಇಂದು ( ಏಪ್ರಿಲ್ 20 ) ಜರುಗಲಿವೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದು, ಸಂಜೆ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಡಲಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಈ ಪಂದ್ಯ ಟೂರ್ನಿಯ 27ನೇ ಪಂದ್ಯವಾಗಿದ್ದು, ಈ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಷಿಯೇಷನ್ ಐಎಸ್ ಬಿಂದ್ರಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

ಇನ್ನು ಇತ್ತಂಡಗಳ ನಡುವಿನ ಈ ಪಂದ್ಯ ಹಲವಾರು ಬದಲಾವಣೆಗಳಿಗೆ ಕಾರಣವಾಗಿದೆ. ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಎರಡೂ ತಂಡಗಳ ನಾಯಕರ ಬದಲಾವಣೆಯಾಗಿದೆ. ಶಿಖರ್ ಧವನ್ ಬದಲಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಸ್ಯಾಮ್ ಕರನ್ ಮುನ್ನಡೆಸುತ್ತಿದ್ದರೆ, ಫಾಫ್ ಡು ಪ್ಲೆಸಿಸ್ ಬದಲಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದಾರೆ.
ಇನ್ನು ಶಿಖರ್ ಧವನ್ ಹಾಗೂ ಫಾಫ್ ಡು ಪ್ಲೆಸಿಸ್ ಇಬ್ಬರೂ ಸಹ ಗಾಯದ ಸಮಸ್ಯೆಗೊಳಗಾಗಿರುವ ಕಾರಣ ಇಂದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಶಿಖರ್ ಧವನ್ ಸಂಪೂರ್ಣ ಪಂದ್ಯದಿಂದ ಹೊರಗುಳಿದಿದ್ದರೆ, ಫಾಫ್ ಡು ಪ್ಲೆಸಿಸ್ ವಿಜಯ್ ಕುಮಾರ್ ವೈಶಾಖ್ ಬದಲಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಲಿದ್ದು, ಬ್ಯಾಟಿಂಗ್ ಮಾಡಲಿದ್ದಾರೆ. ಆದರೆ ಫೀಲ್ಡಿಂಗ್‌ನಲ್ಲಿ ಹೊರಗುಳಿದು ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. ಹೌದು, ಕಳೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೊಳಗಾಗಿದ್ದ ಫಾಫ್ ಡು ಪ್ಲೆಸಿಸ್ ವಿಶ್ರಾಂತಿಯ ಕಾರಣದಿಂದಾಗಿ ನಾಯಕತ್ವದಿಂದ ಹಿಂದೆ ಸರಿದಿದ್ದು, ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟ್ ಬೀಸಲಿದ್ದಾರೆ.

ಟಾಸ್ ಆದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ಫಾಫ್ ಡುಪ್ಲೆಸಿಸ್ ಗಾಯಕ್ಕೊಳಗಾಗಿರುವ ವಿಷಯ ಬಿಚ್ಚಿಟ್ಟಿದ್ದು, ಫೀಲ್ಡಿಂಗ್ ಮಾಡಲಾಗದ ಕಾರಣ ವಿಜಯ್‌ಕುಮಾರ್ ವೈಶಾಖ್ ಬದಲಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ ನಾವು ಬಯಸಿದ್ದೇ ನಮಗೆ ಲಭಿಸಿದೆ, ನಾವು ಮೊದಲು ಬ್ಯಾಟಿಂಗ್ ಮಾಡಬೇಕೆಂದು ಯೋಜಿಸಿದ್ದೆವು ಎಂದೂ ಸಹ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡದ ನಾಯಕ ಸ್ಯಾಮ್ ಕರನ್ ಸಹ ಮಾತನಾಡಿದ್ದು, ಕಳೆದ ಪಂದ್ಯದಂತೆ ಈ ಪಂದ್ಯದಲ್ಲಿಯೂ ಮೊದಲು ಬೌಲಿಂಗ್ ಮಾಡುವ ಆಯ್ಕೆ ಉತ್ತಮ ಎಂದಿದ್ದು, ಶಿಖರ್ ಧವನ್ ಈ ದಿನ ಕಣಕ್ಕಿಳಿಯುತ್ತಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಅಲ್ಲದೇ ಲಿಯಾಮ್ ಲಿವಿಂಗ್‌ಸ್ಟನ್ ತಂಡಕ್ಕೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮೂಲಕ 2022ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೂ ಮುನ್ನ ನಾಯಕತ್ವವನ್ನು ತ್ಯಜಿಸಿದ್ದ ವಿರಾಟ್ ಕೊಹ್ಲಿ ಇದೀಗ ಪುನಃ ತಂಡದ ನಾಯಕತ್ವದ ಜವಾಬ್ದಾರಿಯನ್ನು ಹೊರುತ್ತಿದ್ದಾರೆ. ಇನ್ನು ಪಂದ್ಯದಲ್ಲಿ ಕಣಕ್ಕಿಳಿದಿರುವ ಆಡುವ ಬಳಗಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..
ಆಡುವ ಬಳಗಗಳು:
ರಾಯಲ್ ಚಾಲೆಂಜರ್ಸ್ ಆಡುವ ಬಳಗ: ವಿರಾಟ್ ಕೊಹ್ಲಿ(ನಾಯಕ), ಫಾಫ್ ಡು ಪ್ಲೆಸಿಸ್, ಮಹಿಪಾಲ್ ಲೋಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ವನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ ಮತ್ತು ಮೊಹಮ್ಮದ್ ಸಿರಾಜ್
ಪಂಜಾಬ್ ಕಿಂಗ್ಸ್ ಆಡುವ ಬಳಗ: ಅಥರ್ವ ಥೈದೆ, ಮ್ಯಾಥ್ಯೂ ಶಾರ್ಟ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕುರಾನ್(ನಾಯಕ), ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ರಾಹುಲ್ ಚಾಹರ್ ಹಾಗೂ ಅರ್ಶ್‌ದೀಪ್ ಸಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications