IPL 2023: ಮುಂದಿನ ಐಪಿಎಲ್‌ನಿಂದ ಧೋನಿ ಆಟಗಾರನಲ್ಲ, ಕೋಚ್? ನಿವೃತ್ತಿ ಬಗ್ಗೆ ಧೋನಿ ಹೇಳಿದ್ದಿಷ್ಟು!

ನಿನ್ನೆ ( ಮೇ 23 ) ಚೆನ್ನೈನ ಎಂಎ ಚಿದಂಬರಂ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಒಂದನೇ ಕ್ವಾಲಿಫಯರ್ ಪಂದ್ಯ ಜರುಗಿತು.
ಲೀಗ್ ಹಂತದಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನಗಳನ್ನು ಪಡೆದುಕೊಂಡಿದ್ದ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕ್ವಾಲಿಫಯರ್ ಪಂದ್ಯಕ್ಕೆ ಅರ್ಹತೆಯನ್ನು ಪಡೆದುಕೊಂಡು ಕಣಕ್ಕಿಳಿದಿದ್ದವು. ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿ ಫೈನಲ್ ಪಂದ್ಯವನ್ನು ಪ್ರವೇಶಿಸಿತು ಹಾಗೂ ಗುಜರಾತ್ ಟೈಟನ್ಸ್ ಸೋತು ಎರಡನೇ ಕ್ವಾಲಿಫಯರ್ ಪಂದ್ಯವನ್ನಾಡಲು ಸಜ್ಜಾಗಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿ ಗುಜರಾತ್ ಟೈಟನ್ಸ್ ತಂಡಕ್ಕೆ ಗೆಲ್ಲಲು 173 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಗುಜರಾತ್ ಟೈಟನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ದಾಳಿಗೆ ಮಣಿದು 20 ಓವರ್‌ಗಳಲ್ಲಿ 157 ರನ್‌ಗಳಿಗೆ ಆಲ್‌ಔಟ್ ಆಗಿ 15 ರನ್‌ಗಳ ಅಂತರದ ಸೋಲನ್ನು ಅನುಭವಿಸಿತು.
ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ತನ್ನ 14 ಐಪಿಎಲ್ ಆವೃತ್ತಿಗಳ ಪೈಕಿ ಹತ್ತನೇ ಬಾರಿಗೆ ಫೈನಲ್ ಪ್ರವೇಶಿಸಿದೆ.
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯೇ ಎಂ ಎಸ್ ಧೋನಿ ಪಾಲಿನ ಕೊನೆಯ ಐಪಿಎಲ್ ಟೂರ್ನಿ ಎಂಬ ಸುದ್ದಿ ಕಳೆದ ವರ್ಷದಿಂದಲೇ ಆರಂಭವಾಗಿತ್ತು. ಹೌದು, ಧೋನಿ ಈ ಬಾರಿಯ ಐಪಿಎಲ್ ಟೂರ್ನಿ ಎಂ ಎಸ್ ಧೋನಿ ಆಡಲಿರುವ ಕೊನೆಯ ಐಪಿಎಲ್ ಟೂರ್ನಿ ಎಂಬ ಸುದ್ದಿ ಸದ್ಯಕ್ಕೆ ಸರಿಯಾದ ಉತ್ತರ ಸಿಗದ ಕುತೂಹಲಕಾರಿ ಪ್ರಶ್ನೆಯಾಗಿ ಉಳಿದುಬಿಟ್ಟಿದೆ.
ನಿನ್ನೆ ನಡೆದ ಪಂದ್ಯ ಮುಕ್ತಾಯವಾದ ಬಳಿಕವೂ ಸಹ ಎಂಎಸ್ ಧೋನಿ ಈ ಕುರಿತು ಪ್ರತಿಕ್ರಿಯಿಸಿದ್ದು, ಇಲ್ಲಿಯೂ ಸಹ ಸ್ಪಷ್ಟವಾದ ಉತ್ತರ ನೀಡದೆಯೇ ಅಭಿಮಾನಿಗಳು ಮತ್ತಷ್ಟು ತಲೆ ಕೆಡಿಸಿಕೊಳ್ಳುವ ಹಾಗೆ ಮಾಡಿದ್ದಾರೆ. ಮೊದಲಿಗೆ ತಮ್ಮ ತಂಡ ಗೆದ್ದು ಫೈನಲ್‌ಗೇರಿದ್ದರ ಬಗ್ಗೆ ಮಾತನಾಡಿದ ಎಂಎಸ್ ಧೋನಿ ಮೊದಲೆಲ್ಲಾ ಎಂಟು ತಂಡಗಳ ನಡುವೆ ಪೈಪೋಟಿ ಇರುತ್ತಿತ್ತು, ಈಗ ಹತ್ತು ತಂಡಗಳ ನಡುವೆ ಪೈಪೋಟಿ. ಇದು ಮತ್ತೊಂದು ಫೈನಲ್ ಅಷ್ಟೇ ಎಂದು ನಾನು ಹೇಳುವುದಿಲ್ಲ. ಇದು ಎರಡು ತಿಂಗಳ ಪರಿಶ್ರಮದ ಫಲ. ಪ್ರತಿಯೊಬ್ಬರೂ ಕೊಡುಗೆ ನೀಡಿದ್ದಾರೆ ಎಂದರು.
ಗುಜರಾತ್ ಟೈಟನ್ಸ್ ಚೆನ್ನಾಗಿ ಪೈಪೋಟಿ ನೀಡಿತು. ಜಡೇಜಾ ಬೌಲಿಂಗ್ ಪಂದ್ಯವನ್ನು ಬದಲಾಯಿಸಿತು. ಮೊಯಿನ್ ಅಲಿ ಜತೆ ಆತನ ಜತೆಯಾಟವನ್ನು ಮರೆಯುವ ಹಾಗಿಲ್ಲ. ವೇಗಿಗಳನ್ನು ನಾವು ಸಾಕಷ್ಟು ಹುರಿದುಂಬಿಸಿದೆವು. ಪದೇಪದೇ ಫೀಲ್ಡಿಂಗ್ ಬದಲಾಯಿಸುವ ನಾನು ಓರ್ವ ಕಿರಿಕಿರಿ ಮಾಡುವ ನಾಯಕ ಎನಿಸಬಹುದು. ಪ್ರತಿಯೊಬ್ಬರಿಗೂ ನನ್ನ ಮೇಲೆ ಕಣ್ಣಿಟ್ಟಿರಿ ಎಂದು ಹೇಳುತ್ತಿರುತ್ತೇನೆ ಎಂದ ಧೋನಿ ಕೊನೆಯಲ್ಲಿ ನಿವೃತ್ತಿ ಬಗ್ಗೆ ಮಾತನಾಡಿದರು.
ನನಗೆ ಗೊತ್ತಿಲ್ಲ, ಅದರ ಬಗ್ಗೆ ತೀರ್ಮಾನ ಕೈಗೊಳ್ಳಲು ನನಗಿನ್ನೂ 8ರಿಂದ 9 ತಿಂಗಳ ಸಮಯವಿದೆ. ಈಗ ಅದರ ತಲೆನೋವು ಏಕೆ? ನಾನು ಯಾವಾಗಲೂ ಚೆನ್ನೈ ಸೂಪರ್ ಕಿಂಗ್ಸ್ ಪರ ಇರುತ್ತೇನೆ, ಅದು ಆಡುವಾಗಾದರೂ ಸರಿ ಅಥವಾ ತಂಡದಿಂದ ಹೊರಗಿದ್ದಾದರೂ ಸರಿ ಎಂದು ಧೋನಿ ತಿಳಿಸಿದ್ದಾರೆ. ಈ ಮೂಲಕ ಧೋನಿ ಇನ್ನೂ ಎಂಟರಿಂದ ಒಂಬತ್ತು ತಿಂಗಳ ಸಮಯವಿದ್ದು, ಆಟಗಾರನಾಗಿ ಇರ್ತೀನೋ ಅಥವಾ ಕೋಚ್ ಆಗಿ ಇರ್ತೀನೋ ಗೊತ್ತಿಲ್ಲ, ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿಯೇ ಇರುತ್ತೇನೆ ಎಂದು ಪರೋಕ್ಷವಾಗಿ ಇದೇ ತನ್ನ ಕೊನೆಯ ಐಪಿಎಲ್ ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications