ಟ್ರೋಲ್ ಮೆಟೀರಿಯಲ್ ಆಗಬಾರದು; ಓವರ್‌ನಲ್ಲಿ 31 ರನ್ ಚಚ್ಚಿಸಿಕೊಂಡ ಅರ್ಜುನ್ ಬಗ್ಗೆ ಪ್ರೀತಿ ಜಿಂಟಾ ಹೇಳಿದ್ದಿಷ್ಟು

ಸದ್ಯ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದು, ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಎಡವಿದ್ದ ಮುಂಬೈ ಇಂಡಿಯನ್ಸ್ ಸತತವಾಗಿ ಎರಡು ಪಂದ್ಯಗಳಲ್ಲಿ ಸೋತ ಬಳಿಕ ಹ್ಯಾಟ್ರಿಕ್ ಗೆಲುವು ದಾಖಲಿಸಿ ಕಮ್ ಬ್ಯಾಕ್ ಮಾಡಿತು. ಇನ್ನು ಕಳೆದ ಮೂರು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದ ಸದಸ್ಯನಾಗಿರುವ ಅರ್ಜುನ್ ತೆಂಡೂಲ್ಕರ್ ಈ ಬಾರಿಯ ಸೀಸನ್‌ನಲ್ಲಿ ಪದಾರ್ಪಣೆಯನ್ನೂ ಸಹ ಮಾಡಿದ್ದಾರೆ.
ಹೌದು, ಕಳೆದೆರಡು ಸೀಸನ್‌ಗಳಲ್ಲಿ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್‌ಗೆ ಆಡುವ ಅವಕಾಶ ಲಭಿಸಿರಲಿಲ್ಲ. ಆದರೆ ಈ ಬಾರಿಯ ಟೂರ್ನಿಯಲ್ಲಿ ತನ್ನ ನಾಲ್ಕನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿದಿದ್ದ ಮುಂಬೈ ಇಂಡಿಯನ್ಸ್ ತಂಡದ ಆಡುವ ಬಳಗದಲ್ಲಿ ಅರ್ಜುನ್ ತೆಂಡೂಲ್ಕರ್‌ಗೆ ಆಡುವ ಅವಕಾಶ ಲಭಿಸಿತ್ತು.
ವಿಶ್ವ ಕ್ರಿಕೆಟ್‌ನ ಲೆಜೆಂಡರಿ ಆಟಗಾರ ಸಚಿನ್ ಪುತ್ರ ಯಾವ ರೀತಿ ಬೌಲಿಂಗ್ ಮಾಡಲಿದ್ದಾನೆ ಎಂದು ಕ್ರಿಕೆಟ್ ಪ್ರಿಯರು ಎದುರು ನೋಡುತ್ತಿದ್ದರು. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಆ ಪಂದ್ಯದಲ್ಲಿ ಎರಡು ಓವರ್ ಬೌಲಿಂಗ್ ಮಾಡಿ 17 ರನ್ ನೀಡಿದ ಅರ್ಜುನ್ ತೆಂಡೂಲ್ಕರ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ವಿಕೆಟ್ ಖಾತೆ ತೆರೆದರು. ಕೊನೆಯ ಓವರ್‌ನ ಐದನೇ ಎಸೆತದಲ್ಲಿ ಭುವನೇಶ್ವರ್ ಕುಮಾರ್ ವಿಕೆಟ್ ಪಡೆದರು. ಅಲ್ಲದೇ ಕೊನೆಯ ಓವರ್‌ನಲ್ಲಿ ಗೆಲ್ಲಲು 20 ರನ್ ಬೇಕಿದ್ದಾಗ ಅರ್ಜುನ್ ತೆಂಡೂಲ್ಕರ್ ಎದುರಾಳಿಗಳನ್ನು ಗೆಲ್ಲಲು ಬಿಡದ ಹಾಗೆ ಅತ್ಯುತ್ತಮ ಬೌಲಿಂಗ್ ಮಾಡಿದರು ಎಂಬ ಪ್ರಶಂಸೆಯನ್ನೂ ಸಹ ಹಲವರು ವ್ಯಕ್ತಪಡಿಸಿದ್ದರು.
ಹೀಗೆ ಐಪಿಎಲ್‌ನಲ್ಲಿ ಮೊದಲ ವಿಕೆಟ್ ಪಡೆದ ಖುಷಿಯಲ್ಲಿದ್ದ ಅರ್ಜುನ್ ತೆಂಡೂಲ್ಕರ್‌ಗೆ ಮುಂದಿನ ಪಂದ್ಯ ತೀವ್ರ ಹಿನ್ನಡೆಯನ್ನು ಉಂಟು ಮಾಡಿತ್ತು. ಕಳೆದ ಶನಿವಾರ ತವರಿನ ವಾಂಖೆಡೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತನ್ನ ತಂಡವೂ ಸೋತು ಮುಖಭಂಗಕ್ಕೊಳಗಾಗಿತ್ತು ಹಾಗೂ ತಾನೂ ಸಹ ಕೆಟ್ಟ ಪ್ರದರ್ಶನ ನೀಡಿದ್ದರು.

ಹೌದು, ಕಳೆದ ಶನಿವಾರ ಏಪ್ರಿಲ್ 22ರಂದು ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 16ನೇ ಓವರ್ ಬೌಲಿಂಗ್ ಮಾಡಿದ್ದ ಅರ್ಜು್ನ ತೆಂಡೂಲ್ಕರ್ ಸ್ಯಾಮ್ ಕರನ್ ಹಾಗೂ ಹರ್‌ಪ್ರೀತ್ ಸಿಂಗ್ ಅವರಿಂದ ಬೌಂಡರಿಗಳನ್ನು ಚಚ್ಚಿಸಿಕೊಂಡಿದ್ದರು. 6, ವೈಡ್, 4, 1, 4, 6, ನೋಬಾಲ್ 4 ಹಾಗೂ 4 ರನ್ ಹೀಗೆ ಒಟ್ಟು 31 ರನ್‌ಗಳನ್ನು ಅದೊಂದೇ ಓವರ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ತೆತ್ತಿದ್ದರು.
ಅರ್ಜುನ್ ತೆಂಡೂಲ್ಕರ್ ಮಾಡಿದ ಈ ಕಳಪೆ ಓವರ್ ಬಗ್ಗೆ ಹಲವಾರು ಕ್ರಿಕೆಟಿಗರು ಪ್ರತಿಕ್ರಿಯಿಸಿದ್ದರು. ಆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿದಿದ್ದ ಪಂಜಾಬ್ ಕಿಂಗ್ಸ್ ತಂಡದ ಮಾಲೀಕರಾದ ನಟಿ ಪ್ರೀತಿ ಜಿಂಟಾ ಸಹ ಅರ್ಜುನ್ ತೆಂಡೂಲ್ಕರ್ ಪ್ರದರ್ಶನದ ಬಗ್ಗೆ ಮಾತನಾಡಿದ್ದರು.
"ಎಲ್ಲವೂ ಚೆನ್ನಾಗಿ ಸಾಗಲಿದೆ, ಎಲ್ಲವೂ ಚೆನ್ನಾಗಿ ಇರಲಿದೆ ಎಂದು ನಾನು ಭಾವಿಸುತ್ತೇನೆ. ಯುವ ಕ್ರಿಕೆಟಿಗನೋರ್ವನನ್ನು ಆತ ಚಿಕ್ಕ ವಯಸ್ಸಿನಲ್ಲಿ ಚಬ್ಬಿ ಕೆನ್ನೆ ಹೊಂದಿದ್ದಾಗಿನಿಂದಲೂ ನೋಡುತ್ತಾ ಬಂದಿದ್ದೇನೆ. ಆತ ಸಚಿನ್ ತೆಂಡೂಲ್ಕರ್ ಪುತ್ರ ಎಂದು ನಾನು ಈ ಮಾತನ್ನು ಹೇಳುತ್ತಿಲ್ಲ. ಇಂದು ಆತನ ಬಗ್ಗೆ ಬೇಸರವಾಗುತ್ತಿದೆ ಹಾಗೂ ಆತ ಕಮ್‌ಬ್ಯಾಕ್ ಮಾಡುತ್ತಾನೆ ಎಂದು ಭಾವಿಸುತ್ತೇನೆ. ಇದು ಎಲ್ಲರಿಗೂ ಸಂಭವಿಸುವಂತಹದ್ದಾಗಿದ್ದು ಆತ ಟ್ರೋಲ್‌ಗೆ ಒಳಗಾಗಬಾರದು ಎಂದು ಆಶಿಸುತ್ತೇನೆ" ಎಂದು ಪ್ರೀತಿ ಜಿಂಟಾ ಪಂದ್ಯ ಮುಕ್ತಾಯವಾದ ಬಳಿಕ ಮಾತನಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications