ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ದಿನವೂ ರೋಚಕ ಪಂದ್ಯಗಳು ಅಭಿಮಾನಿಗಳನ್ನು ರಂಜಿಸುತ್ತಿದೆ. ಕೆಲ ಆಟಗಾರರ ಅದ್ಭುತ ಪ್ರದರ್ಶನ ಅಭಿಮಾನಿಗಳು ಪಂದ್ಯವನ್ನು ಉಸಿರು ಬಿಗಿಹಿಡಿದು ನೋಡುವಂತೆ ಮಾಡುತ್ತಿದೆ. ಈ ಮೂಲಕ 16ನೇ ಆವೃತ್ತಿಯ ಐಪಿಎಲ್ ಭರಪೂರ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಈ ಭಾರಿಯ ಟೂರ್ನಿ ಸದ್ಯ ಮಧ್ಯಂತರದಲ್ಲಿದ್ದು ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಆಟಗಾರನೋರ್ವನ ಪ್ರದರ್ಶನವನ್ನು ಉಲ್ಲೇಖಿಸಿ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಮಂಗಳವಾರ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮುಂಬೈ ಇಂಡಿಯನ್ಸ್ ಎದುರಿಸಿತ್ತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ ಪರವಾಗಿ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಗ್ರೀನ್ ಅವರ ಈ ಇನ್ನಿಂಗ್ಸ್ ಬಗ್ಗೆ ಮಾತನಾಡಿದ ಕಾಮೆಂಟೇಟರ್ ಆಗಿರುವ ಇರ್ಫಾನ್ ಪಠಾಣ್ ಕ್ಯಾಮರೂನ್ ಗ್ರೀನ್ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಕ್ಯಾಮರೂನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕಳೆದ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಖರೀದಿಸಿತ್ತು. ಆದರೆ ಆರಂಭಿಕ ಕೆಲ ಪಂದ್ಯಗಳಲ್ಲಿ ಗ್ರೀನ್ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡದ ಈ ಆವೃತ್ತಿಯ ಮೊದಲ ಗೆಲುವಿನಲ್ಲಿ ಗ್ರೀನ್ ಮಹತ್ವದ ಪಾತ್ರವಹಿಸಿದ್ದರು. ಇದೀಗ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿಯೂ ಮತ್ತೆ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ ಕ್ಯಾಮರೂನ್ ಗ್ರೀನ್.
"ಕ್ಯಾಮರೂನ್ ಗ್ರೀನ್ ವಿಶ್ವ ಕ್ರಿಕೆಟ್‌ನಲ್ಲಿ ಭವಿಷ್ಯದ ಸೂಪರ್ ಸ್ಟಾರ್ ಎನಿಸಿಕೊಳ್ಳಲಿದ್ದಾರೆ. ಆತನೋರ್ವ ಪ್ರತಿಭಾನ್ವಿತ ಆಟಗಾರನಾಗಿದ್ದು ಆತನಿಂದ ನಾವು ಇನ್ನಷ್ಟು ಹೆಚ್ಚಿನ ಮ್ಯಾಚ್ ವಿನ್ನಿಂಗ್ ಪ್ರದರ್ಶನಗಳನ್ನು ನೋಡಬಹುದಾಗಿದೆ. ಯಾಕೆಂದರೆ ಆರ ಪ್ರತಿ ದಿನವೂ ಆಟದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿಕೊಂಡು ಬರುತ್ತಿದ್ದಾರೆ" ಎಂದಿದ್ದಾರೆ ಇರ್ಫಾನ್ ಪಠಾಣ್.
ಇನ್ನು ಕ್ಯಾಮರೂನ್ ಗ್ರೀನ್ ಅವರ ಈ ಅದ್ಭುತ ಪ್ರದರ್ಶನದ ಬಗ್ಗೆ ಸಚಿನ್ ತೆಂಡೂಲ್ಕರ್ ಕೂಡ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ತಂಡದ ಒಳಿತಿಗಾಗಿ ಕ್ಯಾರೂನ್ ಗ್ರೀನ್ ಅವರು ತಮ್ಮೊಳಗಿನ ಅಹಂ ಬಿಟ್ಟು ಪರಿಸ್ಥಿತಿಗೆ ತಕ್ಕನಾಗಿ ಅಡಿದ್ದಾರೆ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
"ನಾನು ಇವತ್ತು ವಿಶೇಷವಾಗಿದ್ದನ್ನು ಕಲಿತುಕೊಂಡೆ. ಗ್ರೀನ್ ಅವರ ಈ ಇನ್ನಿಂಗ್ಸ್‌ನಿಂದ ನಾವೆಲ್ಲರೂ ಈ ಸಂದೇಶವನ್ನು ಅರ್ಥ ಮಾಡಿಕೊಳ್ಳಬೇಕು. ತಂಡದ ಇತರ ಆಟಗಾರರಂತೆ ಗ್ರೀನ್ ಕೂಡ ಬಾರಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವ ಆಟಗಾರ. ಆದರೆ ಆರಂಭಿಕ ಹಂತ ಅವರಿಗೆ ಬಹಳ ಸವಾಲಿನದ್ದಾಗಿತ್ತು. ಈ ಸಂದರ್ಭದಲ್ಲಿ ಅವರ ಅಹಂ ಅನ್ನು ಆಚೆ ಬರದಂತೆ ನೋಡಿಕೊಂಡರು. ಅಹಂ ಎಂಬುದು ಯಾವಾಗಲೂ ನಮ್ಮಿಂದ ತಪ್ಪು ಕೆಲಸಗಳಿಗೆ ಕಾರಣವಾಗುತ್ತದೆ. ಆದರೆ ಅದನ್ನು ಆತ ಮಾಡಲಿಲ್ಲ" ಎಂದು ಕ್ಯಾಮರೂನ್ ಗ್ರೀನ್ ಬ್ಯಾಟಿಂಗ್ ಬಗ್ಗೆ ಸಚಿನ್ ತೆಂಡೂಲ್ಕರ್ ಕೂಡ ಅದ್ಭುತ ಮಾತುಗಳನ್ನಾಡಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸಾಲು ಸ್ವೀಕರಿಸಿದ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕ್ಯಾಮರೂನ್ ಗ್ರೀನ್ ಅದ್ಭುತ ಆಟ ಪ್ರದರ್ಶಿಸಿದರು. ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಮಾಡಿದ ಗ್ರೀನ್ ಕೊನೆಯವರೆಗೂ ಔಟಾಗದೆ ಉಳಿದು 40 ಎಸೆತಗಳಲ್ಲಿ 64 ರನ್ ಬಾರಿಸಿದರು. ಈ ಬ್ಯಾಟಿಂಗ್‌ನ ಕಾರಣದಿಂದಾಗಿ ಮುಂಬೈ ಇಂಡಿಯನ್ಸ್ ತಂಡ 193 ರನ್‌ಗಳ ಕಠಿಣ ಗುರಿಯನ್ನು ಎದುರಾಳಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ನೀಡಲು ಕಾರಣವಾಯಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 14 ರನ್‌ಗಳ ಅಂತರದ ಗೆಲುವು ಸಾಧಿಸಿದೆ.