ಡಿಜಿಟಲ್ ವೇದಿಕೆಯಲ್ಲಿ ಉಚಿತವಾಗಿ ಐಪಿಎಲ್ 2023ರ ಆವೃತ್ತಿಯ ಪಂದ್ಯಗಳನ್ನು ನೋಡಿ ಆನಂದಿಸುತ್ತಿದ್ದ ಅಭಿಮಾನಿಗಳಿಗೆ ದೊಡ್ಡ ಸುದ್ದಿ ಸಿಕ್ಕಿದೆ. ಐಪಿಎಲ್ 2023 ಪಂದ್ಯಾವಳಿ ಮುಗಿಯುವ ಮೊದಲೇ ಬಳಕೆದಾರರಿಗೆ ಶುಲ್ಕ ನಿಗದಿ ಮಾಡಲು ಮುಂದಾಗಿದೆ. ಹೌದು, ಇನ್ಮುಂದೆ ನೀವು ಜಿಯೋ ಸಿನಿಮಾ ನೋಡಬೇಕು ಅಂದ್ರೆ ದುಡ್ಡು ಕೊಡಬೇಕಾಗುತ್ತದೆ.
ಮುಕೇಶ್ ಅಂಬಾನಿ ಒಡೆತನದ ಜಿಯೋ ಸಿನಿಮಾ ಮುಂದಿನ 5 ವರ್ಷಗಳವರೆಗೆ ಐಪಿಎಲ್ ಡಿಜಿಟಲ್ ನೇರಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿದೆ. ಇದಕ್ಕಾಗಿ ಅದು ಬಿಸಿಸಿಗೆ ಬರೋಬ್ಬರಿ 20,500 ಕೋಟಿ ರುಪಾಯಿ ಪಾವತಿ ಮಾಡಿದೆ. ದುಬಾರಿ ಮೊತ್ತ ನೀಡಿದ್ದರೂ, ವೀಕ್ಷಕರಿಗೆ ಉಚಿತವಾಗಿ ಐಪಿಎಲ್ ಪಂದ್ಯಗಳನ್ನು ನೋಡಲು ಅವಕಾಶ ನೀಡಿತ್ತು.

ಐಪಿಎಲ್‌ಗೆ ಮೊದಲು ನಡೆದ ಮಹಿಳಾ ಪ್ರೀಮಿಯರ್ ಲೀಗ್ ಮತ್ತು ಅದಕ್ಕೂ ಮುನ್ನ ನಡೆದ ಫಿಫಾ ವಿಶ್ವಕಪ್ ಪಂದ್ಯಾವಳಿಯನ್ನು ಕೂಡ ಉಚಿತವಾಗಿ ನೋಡಲು ಅವಕಾಶ ನೀಡಿತ್ತು. ಕೋಟ್ಯಂತರ ಬಾರಿ ಅಪ್ಲಿಕೇಶನ್ ಡೌನ್‌ಲೋಡ್ ಆಗುವ ಮೂಲಕ ದಾಖಲೆ ಬರೆದಿದೆ. ಸದ್ಯ ಜಿಯೋ ಸಿನಿಮಾದಲ್ಲಿ ಸಿಎಸ್‌ಕೆ ರಾಜಸ್ಥಾನ ರಾಯಲ್ಸ್ ಪಂದ್ಯದ ಸಮಯದಲ್ಲಿ 2.2 ಕೋಟಿ ಜನ ಪಂದ್ಯ ವೀಕ್ಷಿಸುವ ಮೂಲಕ ದಾಖಲೆ ಬರೆದಿದೆ.
ಮೂಲಗಳ ಪ್ರಕಾರ ಐಪಿಲ್ 2023ರ ಆವೃತ್ತಿ ಮುಗಿಯುವ ಮುನ್ನ ಜಿಯೋ ಸಿನಿಮಾ ವೀಕ್ಷಣೆಗೆ ದರ ನಿಗದಿ ಮಾಡುವ ಸಾಧ್ಯತೆ ಇದೆ. ಡಿಸ್ನಿ + ಹಾಟ್‌ಸ್ಟಾರ್, ಅಮೇಜಾನ್ ಪ್ರೈಮ್ ರೀತಿ ಕಾರ್ಯ ನಿರ್ವಹಿಸಲಿದ್ದು, ನೀವು ಜಿಯೋ ಸಿನಿಮಾ ನೋಡಲು ಚಂದಾದಾರರಾಗಬೇಕಾಗುತ್ತದೆ. ಸದ್ಯಕ್ಕೆ ಯಾವುದೇ ದರ ನಿಗದಿ ಮಾಡಿಲ್ಲವಾದರೂ ಸದ್ಯದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ.

ಐಪಿಎಲ್‌ನ ಡಿಜಿಟಲ್ ಹಕ್ಕುಗಳನ್ನು ಪಡೆಯಲು ಭಾರಿ ಪೈಪೋಟಿ ನಡೆದಿತ್ತು. ಸೋನಿ, ಡಿಸ್ನಿ ಸ್ಟಾರ್ ಅಂತಹ ದಿಗ್ಗಜರು ಹಕ್ಕುಗಳನ್ನು ಪಡೆಯಲು ಪ್ರಯತ್ನಪಟ್ಟರೂ, ವೈಯಾಕಾಮ್ 18 ಭಾರಿ ಮೊತ್ತವನ್ನು ಪಾವತಿ ಮಾಡುವ ನೇರಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿತು. ಮೊದಲ ಬಾರಿಯೇ ಅವರು ನೇರಪ್ರಸಾರದಲ್ಲಿ ಹೊಸ ಕ್ರಾಂತಿ ಮಾಡಿದರು.
ನೋಡುಗರಿಗೆ ವಿವಿಧ ಕ್ಯಾಮೆರಾ ಕೋನಗಳು, 4ಕೆ ಲೈವ್ ಸ್ಟ್ರೀಮಿಂಗ್, 14 ಭಾಷೆಗಳಲ್ಲಿ ವೀಕ್ಷಕ ವಿವರಣೆ ನೀಡುವ ಮೂಲಕ ಹೆಚ್ಚಿನ ಜನರನ್ನು ತಲುಪಿದರು. ಜಿಯೋ ಐಪಿಎಲ್‌ನ ಮೊದಲ ಆವೃತ್ತಿಯಲ್ಲೇ ಭಾರಿ ಗೆಲುವು ಕಂಡಿದೆ, ಮೇ 28ರಂದು ನಡೆಯುವ ಐಪಿಎಲ್ 2023ರ ಫೈನಲ್ ಪಂದ್ಯಕ್ಕೆ ಮುನ್ನ ಜಿಯೋ ಸಿನಿಮಾದ ಹೊಸ ಯೋಜನೆಗಳು ಮತ್ತು ಕ್ರೀಡಾಕೂಟಗಳು ಸೇರಿದಂತೆ ಎಲ್ಲಾ ವಿಭಾಗಗಳಿಗೆ ಬೆಲೆಗಳನ್ನು ಬಿಡುಗಡೆ ಮಾಡುತ್ತದೆ.
ಜಿಯೋ ಸಿನಿಮಾ ವೈಯಾಕಾಂ 18ನ ಮಾಧ್ಯಮ ಮತ್ತು ವಿಷಯ ವ್ಯವಹಾರದ ಅಧ್ಯಕ್ಷರಾದ ಜ್ಯೋತಿ ದೇಶಪಾಂಡೆ ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಆದರೂ, ಸೋನಿ ಲಿವ್, ಡಿಸ್ನಿ+ಹಾಟ್‌ಸ್ಟಾರ್ ಮತ್ತು ಇತರೆ ಡಿಜಿಟಲ್ ವೇದಿಕೆಗಳಿಗಿಂತ ಕಡಿಮೆ ದರದವನ್ನು ನಿಗದಿಪಡಿಸುವುದಾಗಿ ಹೇಳಿದೆ. ಈ ಬಾರಿಯ ಐಪಿಎಲ್ ಪಂದ್ಯಾವಳಿಯನ್ನು ಉಚಿತವಾಗಿ ನೋಡಬಹುದು ಎಂದು ಹೇಳಿದೆ.
ಉಚಿತವಾಗಿ ವೀಕ್ಷಣೆಗೆ ಅವಕಾಶ ಮಾಡಿಕೊಡುವುದರಿಂದ ಭಾರತದ ಒಟಿಟಿ ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಉದ್ಯಮದ ತಜ್ಞರು ಹೇಳಿದ್ದು, ಶುಲ್ಕ ವಿಧಿಸುವಂತೆ ವೈಯಾಕಾಮ್ 18ಗೆ ಒತ್ತಾಯ ಮಾಡಿದ್ದರು. ಆದರೂ ಹೊಸ ಚಂದಾದಾರರನ್ನು ಸೆಳೆಯಲು ಜಿಯೋ ಸಿನಿಮಾವನ್ನು ಉಚಿತವಾಗಿ ನೋಡಲು ಅವಕಾಶ ಮಾಡಿಕೊಡಲಾಗಿತ್ತು.
ಜಿಯೋ ಸಿನಿಮಾ ಕ್ರಿಕೆಟ್, ಫುಟ್ಬಾಲ್ ಮತ್ತು ಇತರೆ ಕ್ರೀಡೆಗಳ ನೇರಪ್ರಸಾರ ಮಾತ್ರವಲ್ಲದೆ ಮನರಂಜನೆ ವಿಭಾಗದಲ್ಲೂ ವಿಸ್ತರಣೆ ಮಾಡಲು ಸಜ್ಜಾಗಿದೆ. ಈಗಾಗಲೇ ಜಿಯೋ ಸಿನಿಮಾದಲ್ಲಿ ಪ್ರಸಾರ ಮಾಡಲು 100 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಟಿವಿ ಸರಣಿಗಳನ್ನು ಪರಿಚಯಿಸಲು ಹೊಸ ಒಪ್ಪಂದಕ್ಕೆ ಸಹಿಹಾಕಿದೆ. ಜಿಯೋ ಸ್ಟುಡಿಯೋಸ್ ಶಾರುಖ್ ಖಾನ್ ಅವರ ಢುಂಕಿ ಮತ್ತು ಅಮಿತಾಬ್ ಬಚ್ಚನ್ ಅಭಿನಯದ ವಿಭಾಗ 84 ರಂತಹ ಹೊಸ ಚಲನಚಿತ್ರಗಳನ್ನು ಸಹ ಬಿಡುಗಡೆ ಮಾಡುತ್ತದೆ. ಹಲವು ಭಾಷೆಗಳಲ್ಲಿ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳನ್ನು ನೋಡಬಹುದಾಗಿದೆ.