
ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಕಾರಣದಿಂದ ಐಪಿಎಲ್‌ನಿಂದ ಹೊರಗುಳಿದ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ನಿತೀಶಾ ರಾಣಾ ಆಯ್ಕೆಯಾಗಿದ್ದಾರೆ. ನಾಯಕನಾಗಿ ತಮ್ಮ ಹೊಸ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಕೆಕೆಆರ್ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಅವರೊಂದಿಗೆ ಕೋಲ್ಕತ್ತಾದ ಪ್ರಸಿದ್ಧ ಕಾಳಿಘಾಟ್ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
2018 ರಿಂದ ಕೆಕೆಆರ್ ತಂಡದ ಸದಸ್ಯರಾಗಿರುವ ನಿತೀಶ್ ರಾಣಾ ಭರವಸೆಯ ಬ್ಯಾಟರ್ ಆಗಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಅಂಗಳದಲ್ಲಿ ಕಠಿಣ ಅಭ್ಯಾಸ ಮಾಡಿರುವ ಕೆಕೆಆರ್ ತಂಡದ ಆಟಗಾರರು, ಗುರುವಾರ ಮೊಹಾಲಿಗೆ ತೆರಳಲಿದ್ದಾರೆ. ಏಪ್ರಿಲ್ 1ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಮೊದಲನೇ ಪಂದ್ಯವನ್ನು ಆಡಲಿದ್ದಾರೆ.
ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ನಿತೀಶ್ ರಾಣಾ ಮತ್ತು ಸುನಿಲ್ ನರೈನ್ ಇಬ್ಬರಲ್ಲಿ ಒಬ್ಬರು ನಾಯಕರಾಗಿ ಆಯ್ಕೆಯಾಗುವ ಬಗ್ಗೆ ನಿರೀಕ್ಷೆ ಮಾಡಲಾಗಿತ್ತು, ಇಂಟರ್ನ್ಯಾಷನಲ್ ಲೀಗ್ ಟಿ20 ನ ಮೊದಲ ಆವೃತ್ತಿಯಲ್ಲಿ, ನರೈನ್ ಅಬುಧಾಬಿ ನೈಟ್ ರೈಡರ್ಸ್ ನಾಯಕರಾಗಿದ್ದರು, ಟೂರ್ಣಿಯಲ್ಲಿ ಒಂದು ಗೆಲುವು ಮತ್ತು ಎಂಟು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದರು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ 12 ಟಿ20 ಪಂದ್ಯಗಳಲ್ಲಿ, ರಾಣಾ ದೆಹಲಿ ತಂಡಕ್ಕೆ ನಾಯಕರಾಗಿದ್ದರು. ರಾಣಾ ಅವರ ನಾಯಕತ್ವದ ಗುಣಗಳನ್ನು ಪರಿಗಣಿಸಿ ಭವಿಷ್ಯದ ಯೋಜನೆಯೊಂದಿಗೆ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಇದುವರೆಗೂ 9 ಐಪಿಎಲ್ ಪಂದ್ಯಗಳನ್ನಾಡಿರುವ ಅವರು, 2,181 ರನ್ ಗಳಿಸಿದ್ದಾರೆ.

ಜವಾಬ್ದಾರಿ ತೆಗೆದುಕೊಳ್ಳಲು ಇಷ್ಟ
ಶ್ರೇಯಸ್ ಅಯ್ಯರ್, ಇಯಾನ್ ಮಾರ್ಗನ್ ಮತ್ತು ದಿನೇಶ್ ಕಾರ್ತಿಕ್ ಅವರ ನಾಯಕತ್ವದಲ್ಲಿ ನಿತೀಶ್ ರಾಣ ಆಡಿದ ಅನುಭವ ಹೊಂದಿದ್ದಾರೆ. ಎಲ್ಲರಿಂದಲೂ ಕಲಿತಿರುವ ರಾಣಾ ಈಗ ತಂಡವನ್ನು ಮುನ್ನಡೆಸಲು ಸಿದ್ಧವಾಗಿದ್ದಾರೆ.
"ನಾನು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ತಂಡವಾಗಿ ನಾವು ಅನುಸರಿಸುತ್ತಿರುವ ನಿರ್ದೇಶನವು ನಮ್ಮ ಗುರಿಯತ್ತ ನಮ್ಮನ್ನು ಕರೆದೊಯ್ಯಬೇಕು. ನಾನು ಯಾರ ನಾಯಕತ್ವ ಶೈಲಿಯನ್ನು ಅನುಸರಿಸುವುದಿಲ್ಲ. ನನ್ನದೇ ಆದ ರೀತಿಯಲ್ಲಿ ನಾಯಕತ್ವವನ್ನು ನಿಭಾಯಿಸಲು ಬಯಸುತ್ತೇನೆ" ಎಂದು ರಾಣಾ ಬುಧವಾರ ಹೇಳಿದ್ದಾರೆ.

ಉತ್ತಮ ಫಾರ್ಮ್‌ನಲ್ಲಿದ್ದ ರಾಣಾ
ನಿತೀಶ್ ರಾಣಾ ಕಳೆದ ಆವೃತ್ತಿಯಲ್ಲಿ 143.82 ಸ್ಟ್ರೈಕ್ ರೇಟ್‌ನೊಂದಿಗೆ 361 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ ನಂತರ ತಂಡದ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಕಳೆದ ಆವೃತ್ತಿಯಲ್ಲಿ ಕೆಕೆಆರ್ ಕಳಪೆ ಪ್ರದರ್ಶನ ನೀಡಿತ್ತು. ಆಡಿದ 14 ಪಂದ್ಯಗಳಲ್ಲಿ 6 ಗೆಲುವು ಮತ್ತು 8 ಸೋಲುಗಳ ಮೂಲಕ 7ನೇ ಸ್ಥಾನ ಪಡೆದುಕೊಂಡಿತ್ತು.
ನಿತೀಶ್ ರಾಣಾ ನಾಯಕನಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ, ಕೆಕೆಆರ್ ಈ ಬಾರಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಭರತ್ ಅರುಣ್ ಬೌಲಿಂಗ್ ಕೋಚ್ ಮತ್ತು ಚಂದ್ರಕಾಂತ್ ಪಂಡಿತ್ ಬ್ರೆಂಡನ್ ಮೆಕಲಮ್ ನಂತರ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಶ್ರೇಯಸ್ ಅಯ್ಯರ್ ಈ ಬಾರಿಯ ಐಪಿಎಲ್‌ನಲ್ಲಿ ಆಡಬಹುದು ಎಂದು ಕೆಕೆಆರ್ ಇನ್ನೂ ನಂಬಿಕೆ ಹೊಂದಿದೆ. ಕೆಲವು ಪಂದ್ಯಗಳಲ್ಲಾದರೂ ಅವರು ಆಡಲು ಫಿಟ್ ಆಗುತ್ತಾರೆ ಎಂದಿರುವ ಫ್ರಾಂಚೈಸಿ, ಅದುವರೆಗೂ ರಾಣಾರನ್ನು ಹಂಗಾಮಿ ನಾಯಕರನ್ನಾಗಿ ನೇಮಿಸಿದೆ. ಏಪ್ರಿಲ್ 8ರವರೆಗೆ ತಂಡಕ್ಕೆ ಶಕೀಬ್ ಅಲ್ ಹಸನ್ ಮತ್ತು ಲಿಟ್ಟನ್ ದಾಸ್ ಅಲಭ್ಯರಾಗಿರುವುದು ದೊಡ್ಡ ಹಿನ್ನಡೆಯಾಗಿದೆ.