ಇಂಡಿಯನ್ ಪ್ರೀಮಿಯರ್ ಲೀಗ್ ಶುಕ್ರವಾರದಿಂದ ಆರಂಭವಾಗಿದ್ದು ಕ್ರಿಕೆಟ್ ಅಭಿಮಾನಿಗಳು ಸುದೀರ್ಘ ಕಾಲದಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿದೆ. ಮುಂದಿನ ಎರಡು ತಿಂಗಳ ಕಾಲ ಕ್ರಿಕೆಟ್ ಅಭಿಮಾನಿಗಳೀಗೆ ಭರಪೂರ ಮನರಂಜನೆ ದೊರೆಯುವುದರಲ್ಲಿ ಅನುಮಾನವಿಲ್ಲ. ಈ ಸಂದರ್ಭದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್‌ರೌಂಡರ್ ಆಂಡ್ರೆ ರಸೆಲ್ ವಿರಾಟ್ ಕೊಹ್ಲಿ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಆಂಡ್ರೆ ರಸೆಲ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಆರ್‌ಸಿಬಿ ಅನುಭವಿ ಆಟಗಾರನಿಗೆ ಆರಂಭದಲ್ಲಿಯೇ ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆ ಕುತೂಹಲ ಮೂಡಿಸಿದ್ದು ಕೊಹ್ಲಿ ಮತ್ತು ರಸೆಲ್ ಮುಖಾಮುಖಿಯಲ್ಲಿ ಯಾರಿಗೆ ಮೇಲುಗೈ ದೊರೆಯಲಿದೆ ಎಂದು ಕಾತರಿಸುವಂತೆ ಮಾಡಿದೆ.

ಅಂದಹಾಗೆ ವಿರಾಟ್ ಕೊಹ್ಲಿ ಕಳೆದ ಎರಡ್ಮೂರು ಐಪಿಎಲ್ ಆವೃತ್ತಿಯಲ್ಲಿ ಹೇಳಿಕೊಳ್ಳುವಂತಾ ಪ್ರದರ್ಶನ ನೀಡಲು ವಿಫಲವಾಗಿದ್ದರು. ಎಲ್ಲಾ ಮಾದರಿಯಲ್ಲಿಯೂ ಫಾರ್ಮ್ ಕಳೆದುಕೊಂಡಿದ್ದ ಕೊಹ್ಲಿ ಐಪಿಎಲ್‌ನಲ್ಲಿಯೂ ವೈಫಲ್ಯತೆ ಕಂಡಿದ್ದರು. ಆದರೆ ಈ ಬಾರಿ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿದ್ದು ಐಪಿಎಲ್‌ನಲ್ಲಿಯೂ ಅಬ್ಬರಿಸುವ ವಿಶ್ವಾಸ ಮೂಡಿಸಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಸಾಕಷ್ಟು ದಾಖಲೆಗಳನ್ನು ಹೊಂದಿದ್ದು ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿಯೇ ಇದೆ. ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ 7000 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಆಗುವ ಎಲ್ಲಾ ಅವಕಾಶಗಳನ್ನು ಕೂಡ ಕೊಹ್ಲಿ ಹೊಂದಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಒಂದೇ ತಾಣದಲ್ಲಿ 2000ಕ್ಕೂ ಅಧಿಕ ರನ್‌ಗಳಿಸಿದ ಏಕೈಕ ಬ್ಯಾಟರ್ ಎಂಬ ದಾಖಲೆ ಕೂಡ ಕೊಹ್ಲಿ ಹೊಂದಿದ್ಉ ಬೆಂಗಳುರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವರು 2000ಕ್ಕೂ ಅಧಿಕ ರನ್‌ಗಳಿಸಿದ ಸಾಧನೆ ಮಾಡಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಒಂದು ಆವೃತ್ತಿಯಲ್ಲಿ ಅತ್ಯಂತ ಹೆಚ್ಚು ರನ್‌ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಕೂಡ ತಮ್ಮ ಹೆಸರಿನಲ್ಲಿಯೇ ಹೊಂದಿದ್ದಾರೆ. 2016ರಲ್ಲಿ ತಮ್ಮ ಅತ್ಯುನ್ನತ ಫಾರ್ಮ್‌ನಲ್ಲಿದ್ದ ವಿರಾಟ್ ಕೊಹ್ಲಿ ಆ ಆವೃತ್ತಿಯಲ್ಲಿ ಬರೊಬ್ಬರಿ 973 ರನ್‌ಗಳನ್ನು ಗಳಿಸಿದ್ದರು. ಒಂದೇ ಆವೃತ್ತಿಯಲ್ಲಿ ಕೊಹ್ಲಿ ನಾಲ್ಕು ಶತಕಗಳನ್ನು ಕೂಡ ಸಿಡಿಸಿದ ಸಾಧನೆ ಮಾಡಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ವಿರಾಟ್ ಕೊಹ್ಲಿ ಎಲ್ಲಾ ಎದುರಾಳಿ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದ್ದು ಅದೇ ಹಿನ್ನೆಲೆಯಲ್ಲಿ ಆಂಡ್ರೆ ರಸೆಲ್ ಕೂಡ ಈ ಇಂಗಿತ ವ್ಯಕ್ತಪಡಿಸಿದ್ದಾರೆ.
ಐಪಿಎಲ್‌ನಲ್ಲಿ ಯಾವ ಓರ್ವ ಆಟಗಾರನ ವಿಕೆಟ್ ಪಡೆಯಬೇಕು ಎಂದು ನೀವು ಬಯಸುತ್ತಿದ್ದೀರಿ ಎಂದು ಆಂಡ್ರೆ ರಸೆಲ್‌ಗೆ ಕೇಳಲಾಯಿತು. ಈ ಸಂದರ್ಭದಲ್ಲಿ ವೆಸ್ಟ್ ಇಂಡೀಸ್‌ನ ಸ್ಟಾರ್ ಆಟಗಾರ ರಸೆಲ್ ಸ್ವಲ್ಪವೂ ಯೋಚಿಸದೆ ನೇರವಾಗಿ ವಿರಾಟ್ ಕೊಹ್ಲಿ ಹೆಸರನ್ನು ಹೇಳಿದ್ದಾರೆ. ಈ ಮೂಲಕ ಕೊಹ್ಲಿ ವಿಕೆಟ್ ಅಮೂಲ್ಯವಾಗಿದ್ದು ಎಂಬುದನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಶ್ರೇಯಸ್ ಐಯ್ಯರ್ ಅವರ ಅಲಭ್ಯತೆಯಲ್ಲಿ ಕಣಕ್ಕಿಳಿಯುತ್ತಿದೆ. ಹೀಗಾಗಿ ನಿತೀಶ್ ರಾಣಾಗೆ ಕೆಕೆಆರ್ ತಂಡದ ನಾಯಕತ್ವದ ಜವಾಬ್ಧಾರಿ ದೊರೆತಿದ್ದು ತಂಡ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಇನ್ನು ಕೆಕೆಆರ್ ತಂಡ ಈ ಆಔಋತ್ತಿಯ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಿದೆ.