ಗುರುವಾರ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಪಡೆ ಸ್ಪೋಟಕ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ. ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಬ್ಯಾಟಿಂಗ್ ಅಬ್ಬರದಿಂದಾಗಿ ಆರ್‌ಆರ್ ತಂಡ 13.1 ಓವರ್‌ಗಳಲ್ಲಿಯೇ 9 ವಿಕೆಟ್‌ಗಳ ಅಂತರದ ಬೃಹತ್ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ 98 ರನ್‌ಗಳಿಸಿ ಅಜೇಯವಾಗುಳಿದರೆ ನಾಯಕ ಸಂಜು ಸ್ಯಾಮ್ಸನ್ 48 ರನ್‌ಗಳಿಸಿ ಅಜೇಯವಾಗುಳಿದರು.
ಆದರೆ ಈ ಪಂದ್ಯದಲ್ಲಿ ಶೂನ್ಯಕ್ಕೆ ರನೌಟ್ ಆಗುವ ಮೂಲಕ ವಿಕೆಟ್ ಕಳೆದುಕೊಂಡ ಜೋಸ್ ಬಟ್ಲರ್ ಪಂದ್ಯದ ಸಂಭಾವನೆಯ ಶೇಕಡಾ 10ರಷ್ಟಯ ದಂಡಕ್ಕೆ ಗುರಿಯಾಗಿದ್ದಾರೆ. ಗುರುವಾರ ರಾತ್ರಿ ಕೊಲಕ್ತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬಟ್ಲರ್ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ ಕಾರಣಕ್ಕೆ 10 ಶೇಕಡಾ ದಂಡ ವಿಧಿಸಲಾಗಿದೆ.

ಈ ಪಂದ್ಯದಲ್ಲಿ ಜೋಸ್ ಬಟ್ಲರ್ ಯಾವುದೇ ರನ್‌ಗಳಿಸದೆ ರನೌಟ್ ಆಗುವ ಮೂಲಕ ಫೆವಿಲಿಯನ್‌ಗೆ ವಾಪಾಸಾಗಿದ್ದರು. ಓಟದಲ್ಲಿ ಗೊಂದಲವುಂಟಾದ ಕಾರಣ ಯಶಸ್ವಿ ಜೈಸ್ವಾಲ್‌ಗೆ ಅವಕಾಶ ನೀಡಿ ಜೋಸ್ ಬಟ್ಲರ್ ತಮ್ಮ ವಿಕೆಟ್ ಕೈಚೆಲ್ಲಿದ್ದರು. ಬಳಿಕ ಜೈಸ್ವಾಲ್ ಕೇವಲ 13 ಎಸೆತಗಳಲ್ಲಿ ರ್ಧಶತಕ ಪೂರ್ಣಗೊಳಿಸಿ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನಿಡಿದ 149 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಆರ್ ತಂಡ 13.1 ಓವರ್‌ಗಳಲ್ಲಿಯೇ 151/1 ರನ್‌ಗಳಿಸುವ ಮೂಲಕ ಪಂದ್ಯದಲ್ಲಿ ಭಾರೀ ಗೆಲುವು ಸಾಧಿಸಿದರು. ಯಶಸ್ವಿ ಜೈಸ್ವಾಲ್ ಅಜೇಯ 98 ರನ್‌ಗಳಿಸಿದರೆ ಸಂಜು ಸ್ಯಾಮ್ಸನ್ 48 ರನ್‌ಗಳಿಸಿದರು. ಇದಕ್ಕೂ ಮುನ್ನ ಬೌಲಿಂಗ್‌ನಲ್ಲಿ ಯುಜುವೇಂದ್ರ ಚಾಹಲ್ 25 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಕೆಕೆಆರ್ ತಂಡಕ್ಕೆ ಆಘಾತ ನಿಡಿದ್ದರು. ಹೀಗಾಗಿ ಕೆಕೆಆರ್ ತಮಡ ಈ ಪಂದ್ಯದಲ್ಲಿ ಕೇವಲ 148 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಗಿತ್ತು.
ಇನ್ನು ಈ ಪಂದ್ಯದಲ್ಲಿ ಜೋಸ್ ಬಟ್ಲರ್‌ಗೆ ದಂಡಿ ವಿಧಿಸಿರುವ ಬಗ್ಗೆ ಐಪಿಎಲ್ ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. "ಇಂಡಿಯನ್ ಪ್ರೀಮಿಯರ್ ಲೀಗ್ 2023ರ 56ನೇ ಪಂದ್ಯ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯದ ಸಂದರ್ಭದಲ್ಲಿ ರಾಜಸ್ಥಾನ್ ರಾಯಲ್ಸ್ ಆಟಗಾರ ಜೋಸ್ ಬಟ್ಲರ್ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಅವರಿಗೆ ಪಂದ್ಯದ ಸಂಭಾವನೆಯ ಶೇಕಡಾ 10ರಷ್ಟು ದಂಡ ವಿಧಿಸಲಾಗಿದೆ"
"ಬಟ್ಲರ್ ಅವರು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2ರ ಅಡಿಯಲ್ಲಿ ಮೊದಲ ಹಂತದ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ನೀತಿ ಸಂಹಿತೆಯ ಹಂತ 1 ಉಲ್ಲಂಘನೆಗಳಿಗೆ ಪಂದ್ಯದ ರೆಫ್ರಿಯ ನಿರ್ಧಾರವೇ ಅಂತಿಮ" ಎಂದು ಐಪಿಎಲ್ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಇನ್ನು ಈ ಪ್ರಕಟಣದಲ್ಲಿ ಜೋಸ್ ಬಟ್ಲರ್ ಯಾವ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ಸ್ಪಷ್ಟವಾಗಿಲ್ಲ. ಆದರೆ ರನೌಟ್ ಆಗಿ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಕಡೆಗೆ ಸಾಗುವ ಸಂದರ್ಭದಲ್ಲಿ ಅಕ್ರೋಶದಿಂದ ಅಸಮಾಧಾನ ವ್ಯಕ್ತಪಡಿಸಿ ಕೆಲ ಮಾತುಗಳನ್ನು ಆಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದೇ ಕಾರಣಕ್ಕೆ ದಂಡನೆಗೆ ಬಟ್ಲರ್ ಒಳಗಾಗಿರುವ ಸಾಧ್ಯತೆಯಿದೆ
ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಹಂತ 1 ಅಪರಾಧಗಳು ಸಾಮಾನ್ಯವಾಗಿ ಕ್ರಿಕೆಟ್ ಉಪಕರಣಗಳು, ಬಟ್ಟೆ, ಂಐದಾನದ ವಸ್ತುಗಳಿಗೆ ಹಾನಿ ಅಥವಾ ಮೌಖಿಕ ನಿಂದನೆ, ಅಂಪೈರ್ ನಿರ್ಧಾರಕ್ಕೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವುದು, ಅಶ್ಲೀಲ, ಆಕ್ಷೇಪಾರ್ಹ, ಅಥವಾ ಅವಮಾನಕರ ಭಾಷೆಯನ್ನು ಬಳಸುವುದು ಅಥವಾ ಅಶ್ಲೀಲ ಸನ್ನೆ ಆಕ್ರಮಣಕಾರಿ ವರ್ತನೆ ಅಥವಾ ಅಪಹಾಸ್ಯದ ವರ್ತನೆಗಳನ್ನು ಒಳಗೊಂಡಿರುತ್ತದೆ.