IPL 2023: ಆರ್‌ಸಿಬಿ ತಂಡಕ್ಕೆ ಗಾಯಾಳುಗಳದ್ದೇ ಸಮಸ್ಯೆ: ಮೊದಲ ಪಂದ್ಯಕ್ಕೆ ಹೇಗಿರಲಿದೆ ಬಲಿಷ್ಠ ಪ್ಲೇಯಿಂಗ್ ಇಲೆವೆನ್

ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಗೆ ಇನ್ನೂ ಮೂರು ದಿನಗಳಷ್ಟೇ ಬಾಕಿ ಇದೆ. ಈಗಾಗಲೇ ಎಲ್ಲಾ ತಂಡಗಳು ಮಹತ್ವದ ಟೂರ್ನಿಗೆ ಸಕಲ ಸಿದ್ಧತೆ ಮಾಡಿಕೊಂಡಿವೆ. ಎಲ್ಲಾ ಆಟಗಾರರು ತಂಡಗಳನ್ನು ಸೇರಿಕೊಂಡಿದ್ದು ಅಭ್ಯಾಸ ಮಾಡುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಈಗಾಗಲೇ ಸಿದ್ಧತೆ ಆರಂಭಿಸಿದೆ. ಭಾನುವಾರ ತಂಡದ ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ. ಕಾರ್ಯಕ್ರಮದಲ್ಲಿ ತಂಡದ ಮಾಜಿ ಆಟಗಾರರಾದ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್‌ಗೆ ಹಾಲ್ ಆಫ್ ಫೇಮ್ ಗೌರವ ನೀಡಲಾಗಿದೆ.
ಮಾರ್ಚ್ 31 ರಂದು ಐಪಿಎಲ್‌ಗೆ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಸೆಣೆಸಲಿದೆ. ಚಿನ್ನಸ್ವಾಮಿ ಅಂಗಳದಲ್ಲಿ ಈ ಪಂದ್ಯ ನಡೆಯಲಿದೆ.
ಈ ಬಾರಿ ಇಂಪ್ಯಾಕ್ಟ್ ಪ್ಲೇಯರ್ ಎನ್ನುವ ನಿಯಮ ಜಾರಿಯಾಗುತ್ತಿರುವುದರಿಂದ ಪಂದ್ಯಗಳು ಮತ್ತಷ್ಟು ಕುತೂಹಲಕಾರಿಯಾಗಲಿವೆ. ಹೊಸ ನಿಯಮದ ಪ್ರಕಾರ ಆಟದ ಮಧ್ಯದಲ್ಲಿ ಒಬ್ಬ ಆಟಗಾರನನ್ನು ಬದಲಾವಣೆ ಮಾಡಲು ಅವಕಾಶ ಸಿಗಲಿದೆ. ಬದಲೀ ಆಟಗಾರ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಕೂಡ ಅನುಮತಿ ನೀಡಲಾಗಿದೆ.
ಆರ್ ಸಿಬಿ ತಂಡದಲ್ಲಿ ಜೋಶ್ ಹೇಜಲ್‌ವುಡ್, ರಜತ್ ಪಾಟಿದಾರ್ ಫಿಟ್ ಆಗಿಲ್ಲವೆಂದು ಹೇಳಿಲ್ಲವಾಗಿದ್ದು, ಇವರಿಬ್ಬರೂ ಐಪಿಎಲ್‌ನ ಮೊದಲಾರ್ಧದ ಪಂದ್ಯಗಳಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಪ್ರಮುಖ ಸ್ಪಿನ್ನರ್ ವನಿಂದು ಹಸರಂಗ ಕೂಡ ಏಪ್ರಿಲ್ 8ರ ನಂತರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಪ್ರಮುಖ ಆಟಗಾರರ ಅಲಭ್ಯತೆ ನಡುವೆ ಮೊದಲನೇ ಪಂದ್ಯಕ್ಕೆ ಆರ್ ಸಿಬಿ ತಂಡದ ಆಡುವ ಬಳಗ ಹೇಗಿರುತ್ತದೆ ಎನ್ನುವುದು ಕೂಡ ಮುಖ್ಯವಾಗುತ್ತದೆ.

ಮೈಕೆಲ್ ಬ್ರೇಸ್‌ವೆಲ್‌ಗೆ ಅವಕಾಶ
ವಿಲ್‌ಜ್ಯಾಕ್ಸ್ ಗಾಯಗೊಂಡು ಐಪಿಎಲ್‌ನಿಂದ ಹೊರಬಿದ್ದ ನಂತರ ಅವರ ಬದಲಾಗಿ ಆರ್ ಸಿಬಿ ನ್ಯೂಜಿಲೆಂಡ್‌ನ ಸ್ಫೋಟಕ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್‌ರನ್ನು ಆಯ್ಕೆ ಮಾಡಿಕೊಂಡಿದೆ. ವನಿಂದು ಹಸರಂಗ ಅನುಪಸ್ಥಿತಿಯಲ್ಲಿ ಮೈಕೆಲ್ ಬ್ರೇಸ್‌ವೆಲ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.
ಮೈಕೆಲ್ ಬ್ರೇಸ್‌ವೆಲ್ ಸ್ಫೋಟಕ ಬ್ಯಾಟಿಂಗ್ ಜೊತೆಗೆ 4 ಓವರ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಸ್ಪಿನ್ನರ್ ಆಗಿದ್ದಾರೆ. ಅಲ್ಲದೆ ಮ್ಯಾಕ್ಸ್‌ವೆಲ್ ಕೂಡ ಇರುವುದರಿಂದ ಇಬ್ಬರೂ ಎರಡು ಓವರ್ ಮಾಡಿದರೂ ತಂಡಕ್ಕೆ ಅನುಕೂಲವಾಗುತ್ತದೆ.

ಬೌಲಿಂಗ್ ವಿಭಾಗದಲ್ಲಿ ಕೂಡ ಆಯ್ಕೆ
ಜೋಶ್ ಹೇಜಲ್‌ವುಡ್ ಬದಲಾಗಿ ಇಂಗ್ಲೆಂಡ್‌ನ ಎಡಗೈ ವೇಗದ ಬೌಲರ್ ರೀಸ್ ಟೋಪ್ಲಿ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಬ್ಯಾಟಿಂಗ್ ಆಯ್ಕೆ ಬೇಕೆಂದರೆ ಆರ್ ಸಿಬಿ ಡೇವಿಡ್ ವಿಲ್ಲೇ ಅವರನ್ನು ಆಡಿಸಲು ಯೋಜಿಸಬಹುದು. ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್ ಎಡಗೈ ವೇಗಿಗಳಿಗೆ ಔಟಾಗಿರುವ ಇತಿಹಾಸ ಇರುವ ಕಾರಣ ರೀಸ್ ಟೋಪ್ಲಿ ಉತ್ತಮ ಆಯ್ಕೆಯಾಗಲಿದ್ದಾರೆ.
ರಜತ್ ಪಾಟಿದಾರ್ ಬದಲಿಗೆ ಅನುಜ್ ರಾವತ್ ಅಥವಾ ಮಹಿಪಾಲ್ ಲೋಮ್ರೋರ್ ಆಡುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ಫಾಫ್ ಡುಪ್ಲೆಸಿಸ್ ಜೊತೆಗೆ ಇನ್ನಿಂಗ್ಸ್ ಆರಂಭಿಸಿದರೆ ಅನುಜ್ ರಾವತ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.
ಮುಂಬೈ ವಿರುದ್ಧದ ಪಂದ್ಯಕ್ಕೆ ಆರ್ ಸಿಬಿ ಸಂಭಾವ್ಯ ಆಡುವ ಬಳಗ: ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ (ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮೈಕೆಲ್ ಬ್ರೇಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಆಕಾಶ್ ದೀಪ್/ ಸಿದ್ಧಾರ್ಥ್ ಕೌಲ್.
ಇಂಪ್ಯಾಕ್ಟ್ ಪ್ಲೇಯರ್: ಮಹಿಪಾಲ್ ಲೊಮ್ರೊರ್, ಅವಿನಾಶ್ ಸಿಂಗ್, ಸುಯಾಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications