ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯು ಹಲವು ವಿಶೇಷತೆಗಳನ್ನು ಹೊಂದಿದೆ. ಹಲವು ಹೊಸ ನಿಯಮಗಳು ಜಾರಿಯಾಗುವ ಮೂಲಕ ಪಂದ್ಯದ ರೋಚಕತೆ ಮತ್ತಷ್ಟು ಹೆಚ್ಚಾಗಿದೆ. ಇನ್ನು ಇದೇ ಮೊದಲ ಬಾರಿಗೆ ದೇಶದ 12 ಕ್ರೀಡಾಂಗಣಗಳಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜನೆ ಮಾಡಲಾಗಿದೆ. ರಾಜಸ್ಥಾನ ರಾಯಲ್ಸ್ ತಂಡ ತನ್ನ ಎರಡನೇ ತವರಿನ ಅಂಗಳವನ್ನಾಗಿ ಗುವಾಹಟಿಯ ಬರ್ಸಾಪರ ಕ್ರೀಡಾಂಗಣವನ್ನು ಆಯ್ಕೆ ಮಾಡಿಕೊಂಡಿದೆ. ಏಪ್ರಿಲ್ 4ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆಡಿದರೆ, ಏಪ್ರಿಲ್ 8ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಸೆಣೆಸಲಿದೆ.
ಇದು ಈ ವರ್ಷ ಮಾಡಿರುವ ನಿರ್ಧಾರವೇನು ಅಲ್ಲ, 2020ರಲ್ಲೇ ಇಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕದ ಬಳಿಕ ಈ ಯೋಜನೆಯನ್ನು ಕೈಬಿಡಲಾಯಿತು. ಆ ವರ್ಷ ಐಪಿಎಲ್ ಟೂರ್ನಿಯನ್ನು ದುಬೈಗೆ ಸ್ಥಳಾಂತಿರಸಲಾಯಿತು. ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಮೊದಲಿನಿಂದಲೂ ಗುವಾಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಶ್ರಮಿಸಿತ್ತು, ಈ ಬಾರಿ ಅದರ ಕನಸು ನನಸಾಗಿದೆ.

ಈಶಾನ್ಯ ರಾಜ್ಯಗಳಲ್ಲಿ ಕ್ರಿಕೆಟ್ ಅನ್ನು ಹೆಚ್ಚು ಜನಪ್ರಿಯಗೊಳಿಸುವ ಉದ್ದೇಶದಿಂದ ಈ ಬಾರಿ 2 ಐಪಿಎಲ್ ಪಂದ್ಯಗಳನ್ನು ಗುವಾಹಟಿಯಲ್ಲಿ ಆಯೋಜಿಸಲಾಗಿದೆ. ಈ ಬಾರಿಯ ಯಶಸ್ಸನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ದೇಶದ ವಿವಿಧ ಕ್ರೀಡಾಂಗಣಗಳಲ್ಲಿ ಕೂಡ ಐಪಿಎಲ್ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆ ಇದೆ. ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಕೂಡ ಬೇರೆ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನಾಡಲು ಉತ್ಸುಕವಾಗಿರುವುದರಿಂದ ಗುವಾಹಟಿಯಲ್ಲಿ ಎರಡನೇ ಹೋಮ್ ಗ್ರೌಂಡ್ ಮಾಡಿಕೊಂಡು ಆಡಲು ಸಜ್ಜಾಗಿದೆ.

ಬರ್ಸಾಪರ ಕ್ರೀಡಾಂಗಣದಲ್ಲಿ ಮೊದಲ ಐಪಿಎಲ್ ಪಂದ್ಯ
ಇದರೊಂದಿಗೆ ರಾಜಸ್ಥಾನ ರಾಯಲ್ಸ್ ತಂಡ ಈಶಾನ್ಯ ರಾಜ್ಯಗಳಲ್ಲಿ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಳ್ಳಲು ಉತ್ತಮ ಅವಕಾಶವನ್ನು ಹೊಂದಿದೆ. ಏಪ್ರಿಲ್ 4 ರಂದು ಬರ್ಸಾಪರ ಕ್ರೀಡಾಂಗಣದಲ್ಲಿ ಮೊದಲ ಐಪಿಎಲ್ ಪಂದ್ಯ ನಡೆಯಲಿದೆ. ರಾಜಸ್ಥಾನ ರಾಯಲ್ಸ್ ತಂಡ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ರಾಜಸ್ಥಾನ ರಾಯಲ್ಸ್ ಮೊದಲನೇ ಪಂದ್ಯದಲ್ಲೇ ಹೈದರಾಬಾದ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದ್ದು, ಎರಡನೇ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ.
ಪಂಜಾಬ್ ಕಿಂಗ್ಸ್ ತಂಡ ಕೂಡ ತವರಿನಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 7 ರನ್‌ಗಳಿಂದ ಸೋಲಿಸುವ ಮೂಲಕ ಗೆಲುವಿನ ಖಾತೆಯನ್ನು ಆರಂಭಿಸಿದೆ. ಎರಡನೇ ಪಂದ್ಯದಲ್ಲೂ ಗೆಲುವಿನ ಓಟವನ್ನು ಮುಂದುವರೆಸುವ ವಿಶ್ವಾಸವಿದೆ. ಎರಡೂ ತಂಡಗಳು ಮೊದಲ ಬಾರಿಗೆ ಬರ್ಸಾಪರ ಕ್ರೀಡಾಂಗಣದಲ್ಲಿ ಆಡುತ್ತಿರುವುದರಿಂದ ಪಂದ್ಯ ಆಸಕ್ತಿದಾಯಕವಾಗಿರಲಿದೆ. ಸ್ಫೋಟಕ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ರಾಜಸ್ಥಾನ ತಂಡವನ್ನು ಪಂಜಾಬ್ಸಿಂಹಗಳು ಹೇಗೆ ಕಟ್ಟಿಹಾಕಲಿವೆ ಎಂದು ಕಾದು ನೋಡಬೇಕಿದೆ.

ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದ ಜೋಸ್ ಬಟ್ಲರ್ ಉತ್ತಮ ಫಾರ್ಮ್ ಅನ್ನು ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಕೂಡ ಉತ್ತಮ ಫಾರ್ಮ್‌ನಲ್ಲಿರುವುದು ತಂಡದ ವಿಶ್ವಾಸವನ್ನು ಹೆಚ್ಚಿಸಿದೆ. ಪಂಜಾಬ್ ಕಿಂಗ್ಸ್ ಪಡೆ ಗೆಲುವು ಸಾಧಿಸಬೇಕಾದರೆ ಈ ಮೂವರು ಬ್ಯಾಟರ್ ಗಳನ್ನು ಕಡಿಮೆ ಮೊತ್ತಕ್ಕೆ ಔಟ್ ಮಾಡಲು ರಣತಂತ್ರ ರೂಪಿಸಬೇಕಾಗುತ್ತದೆ. ಅರ್ಷದೀಪ್ ಸಿಂಗ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ.
ಪಿಚ್ ವರದಿ : ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿನ ಪಿಚ್ ಸಮತೋಲನದ ಟ್ರ್ಯಾಕ್ ಆಗಿದೆ. ಹೊಸ-ಚೆಂಡಿನಲ್ಲಿ ಬೌಲ್ ಮಾಡಿದಾಗ ಬೌಲರ್‌ಗಳಿಗೆ ಹೆಚ್ಚಿನ ನೆರವು ಸಿಗಲಿದೆ, ಆರಂಭದಲ್ಲಿ ಬ್ಯಾಟರ್ ಗಳು ಎಚ್ಚರಿಕೆಯಿಂದ ಆಡಿದರೆ ನಂತರ ಸುಲಭವಾಗಿ ರನ್ ಗಳಿಸಬಹುದಾಗಿದೆ. 40 ಸಾವಿರಕ್ಕೂ ಹೆಚ್ಚು ಆಸನ ಸಾಮರ್ಥ್ಯವನ್ನು ಹೊಂದಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸುವ ಸಾಧ್ಯತೆ ಇದೆ.