ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ದದ ಪಂದ್ಯಕ್ಕೆ ಮುನ್ನವೇ ಪಂಜಾಬ್ ಕಿಂಗ್ಸ್ ತಂಡಕ್ಕೆ ಸಂತಸದ ಸುದ್ದಿ ಸಿಕ್ಕಿದೆ. ಸ್ಫೋಟಕ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಭಾರತಕ್ಕೆ ಬಂದಿದ್ದು, ತಂಡವನ್ನು ಸೇರಿಕೊಂಡಿದ್ದಾರೆ. ಲಿವಿಂಗ್‌ಸ್ಟೋನ್ ತಂಡವನ್ನು ಸೇರಿಕೊಂಡಿರುವುದು ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಬಲವನ್ನು ಹೆಚ್ಚಿಸಿದೆ.
2022ರಲ್ಲಿ ಮೊಣಕಾಲು ಗಾಯಕ್ಕೆ ಒಳಗಾದ ನಂತರ ಲಿಯಾಮ್ ಲಿವಿಂಗ್‌ಸ್ಟೋನ್ ಕ್ರಿಕೆಟ್‌ನಿಂದ ಹೊರಗುಳಿದಿದ್ದರು. ಪಾಕಿಸ್ತಾನದ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆಯಾದ ಅವರು ಗಾಯದ ಕಾರಣ ಅನಿವಾರ್ಯವಾಗಿ ಹೊರಗುಳಿಯಬೇಕಾಯಿತು. ಐಪಿಎಲ್ ಆರಂಭಕ್ಕೆ ಮುನ್ನವೇ ಫಿಟ್ ಆಗುವ ಬಗ್ಗೆ ವಿಶ್ವಾಸದಲ್ಲಿದ್ದರೂ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅವರಿಗೆ ನಿರಾಪೇಕ್ಷಣ ಪತ್ರ ನೀಡಿರಲಿಲ್ಲ.

ಇಸಿಬಿಯಿಂದ ಎನ್‌ಒಸಿ ಸಿಗದ ಕಾರಣ ಅವರು ಐಪಿಎಲ್‌ನ ಆರಂಭದ ಪಂದ್ಯಗಳನ್ನು ಕಳೆದುಕೊಂಡರು. ಏಪ್ರಿಲ್ 11ರಂದು ಭಾರತಕ್ಕೆ ಆಗಮಿಸಿರುವ ಅವರು ತಂಡವನ್ನು ಸೇರಿಕೊಂಡಿದ್ದು, ಗುರುವಾರ ನಡೆಯಲಿರುವ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೆ ಲಭ್ಯರಾಗಿದ್ದಾರೆ. ಪಂಜಾಬ್ ಕಿಂಗ್ಸ್ ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದಿದ್ದು, ಒಂದು ಪಂದ್ಯದಲ್ಲಿ ಸೋಲು ಕಂಡಿದೆ.
ಹೈದರಾಬಾದ್‌ನಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಶೀಖರ್ ಧವನ್ 99 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ ಗಳು ಸಂಪೂರ್ಣವಾಗಿ ವಿಫಲವಾಗಿದ್ದರು. ಲಿವಿಂಗ್‌ಸ್ಟೋನ್ ಆಗಮನದದಿಂದ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ಬರಲಿದೆ. ಅಲ್ಲದೆ ಸ್ಪಿನ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದು, ಬೌಲಿಂಗ್‌ನಲ್ಲೂ ತಂಡಕ್ಕೆ ಕೊಡುಗೆ ನೀಡಲಿದ್ದಾರೆ.
𝐀𝐧𝐝 𝐭𝐡𝐚𝐭’𝐬 𝐭𝐡𝐞 𝐛𝐨𝐭𝐭𝐨𝐦 𝐥𝐢𝐧𝐞… @liaml4893 𝐢𝐬 𝐡𝐞𝐫𝐞! 🔥🤩#JazbaHaiPunjabi #SaddaPunjab #PunjabKings #TATAIPL pic.twitter.com/SCuXGEYw9a
— Punjab Kings (@PunjabKingsIPL) April 10, 2023
ಮೊಣಕಾಲು ನೋವಿಗೆ ಇಂಜೆಕ್ಷನ್
ಮೊಣಕಾಲು ನೋವಿನಿಂದ ಬಳಲುತ್ತಿದ್ದ ಅವರು ಕಳೆದ ವಾರ ಅದಕ್ಕೆ ಚುಚ್ಚುಮದ್ದು ಪಡೆದಿದ್ದಾಗಿ ಹೇಳಿದ್ದರು. ಚುಚ್ಚುಮದ್ದು ಪಡೆದ ನಂತರ ವೇಗವಾಗಿ ಮೊಣಕಾಲು ಗಾಯದಿಂದ ಚೇತರಿಸಿಕೊಂಡಿದ್ದು, ಭಾರತಕ್ಕೆ ಇನ್ನೆರಡು ದಿನದಲ್ಲಿ ಹೋಗುವುದಾಗಿ ಲಂಕಾಶೈರ್ ಕ್ರಿಕೆಟ್ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಾಹಿತಿ ನೀಡಿದ್ದರು. ಅದರಂತೆಯೇ ಅವರು ಎನ್‌ಒಸಿ ಪಡೆದುಕೊಂಡಿದ್ದು ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
ತಂಡದ ಸ್ಫೋಟಕ ಆಟಗಾರನಾಗಿ ಪಂಜಾಬ್ ಕಿಂಗ್ಸ್ ಕೂಡ ಭರ್ಜರಿ ಸ್ವಾಗತ ನೀಡಿದೆ. ಲಿವಿಂಗ್‌ಸ್ಟೋನ್ ಹೋಟೆಲ್‌ಗೆ ಆಗಮಿಸಿರುವ ವಿಡಿಯೋವನ್ನು ತಂಡದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. ಬಲಗೈ ಸ್ಫೋಟಕ ಬ್ಯಾಟರ್ ಏಕಾಂಗಿಯಾಗಿ ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿರುವ ಆಟಗಾರ. ಕಳೆದ ಬಾರಿಯೇ ಅವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
ಕಳೆದ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ
ಲಿಯಾಮ್ ಲಿವಿಂಗ್‌ಸ್ಟೋನ್ ಕಳೆದ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. 14 ಪಂದ್ಯಗಳಲ್ಲಿ 36.42 ಸರಾಸರಿ ಮತ್ತು 182.08 ಸ್ಟ್ರೈಕ್‌ರೇಟ್‌ನಲ್ಲಿ 437 ರನ್ ಗಳಿಸಿದ್ದರು. 12 ಇನ್ನಿಂಗ್ಸ್‌ಗಳಲ್ಲಿ 6 ವಿಕೆಟ್ ಕೂಡ ಪಡೆದುಕೊಂಡಿದ್ದರು. ಅದೇ ಪ್ರದರ್ಶನವನ್ನು ಈ ಬಾರಿಯ ಐಪಿಎಲ್‌ನಲ್ಲಿ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.
ಲಿಯಾಮ್ ಲಿವಿಂಗ್‌ಸ್ಟೋನ್ ತಂಡದಲ್ಲಿ ಸ್ಥಾನ ಪಡೆಯಲು ಸಿಕಂದರ್ ರಾಝಾ ತಮ್ಮ ಜಾಗ ಬಿಟ್ಟುಕೊಡುವ ಸಾಧ್ಯತೆ ಹೆಚ್ಚಾಗಿದೆ. ಮೂರು ಪಂದ್ಯಗಳಲ್ಲಿ ಅವರು ಅವಕಾಶ ಪಡೆದಿದ್ದರು, ಬ್ಯಾಟಿಂಗ್ ಅಥವಾ ಬೌಲಿಂಗ್‌ನಲ್ಲಿ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಿಲ್ಲ. ಮೂರು ಪಂದ್ಯಗಳಲ್ಲಿ ಒಂದು ವಿಕೆಟ್ ಮಾತ್ರ ಪಡೆದುಕೊಂಡಿದ್ದಾರೆ. ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದೆ.