ಫಿಟ್‌ನೆಸ್ ಸಮಸ್ಯೆಗಳಿಂದಾಗಿ ಐಪಿಎಲ್ 2023ಕ್ಕೆ ಲಿಯಾಮ್ ಲಿವಿಂಗ್‌ಸ್ಟೋನ್ ಆಗಮನ ಮತ್ತಷ್ಟು ವಿಳಂಬವಾಗಿದೆ. ಅವರು ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲದ ಕಾರಣ ಭಾರತಕ್ಕೆ ಬರುವುದು ವಿಳಂವಾಗಿದೆ. ಏಪ್ರಿಲ್ ಮಧ್ಯದಲ್ಲಿ ಅವರು ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ (ಇಸಿಬಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಪಂದ್ಯಾವಳಿಯ ಆರಂಭಕ್ಕೆ ಮುನ್ನ ಪಂಜಾಬ್ ಕಿಂಗ್ಸ್‌ನ ಎರಡನ ಪಂದ್ಯದಿಂದ ಲಿವಿಂಗ್‌ಸ್ಟೋನ್ ಲಭ್ಯವಿರುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಗುವಾಹಟಿಯಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಅವರು ಅಲಭ್ಯರಾಗಿದ್ದರು. ಪ್ರಮುಖ ಆಲ್‌ರೌಂಡರ್ ಇಲ್ಲದೆಯೂ ಪಂಜಾಬ್ ಕಿಂಗ್ಸ್ ಎರಡು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮೊದಲನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 7 ರನ್‌ಗಳಿಂದ ಗೆದ್ದಿದ್ದರೆ, ಎರಡನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿತ್ತು.

"ಲಿಯಾಮ್ ಲಿವಿಂಗ್‌ಸ್ಟೋನ್ ಅವರು ಇನ್ನೂ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಓಲ್ಡ್ ಟ್ರಾಫರ್ಡ್‌ನಲ್ಲಿ ತಮ್ಮ ಪುನರ್ವಸತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಏಪ್ರಿಲ್ 15ರ ನಂತರ ಅವರು ಭಾರತಕ್ಕೆ ಪ್ರಯಾಣ ಮಾಡಲಿದ್ದಾರೆ. ಆದರೂ ಅದು ಲಿವಿಂಗ್‌ಸ್ಟೋನ್ ಅವರ ಫಿಟ್‌ನೆಸ್ ಅನ್ನು ಅವಲಂಬಿಸಿರುತ್ತದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಕ್ರಿಕ್‌ಬುಜ್ ವರದಿ ಮಾಡಿದೆ.
ಟಿ20 ವಿಶ್ವಕಪ್ ಬಳಿಕ ಗಾಯಗೊಂಡಿದ್ದ ಲಿವಿಂಗ್‌ಸ್ಟೋನ್
ಲಿವಿಂಗ್‌ಸ್ಟೋನ್ 2022ರಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಮೆಲ್ಬೋರ್ನ್ ಕ್ರಿಕೆಟ್ ಅಂಗಳದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ಅಜೇಯರಾಗಿ ಉಳಿದರು, ಮತ್ತೊಂದು ತುದಿಯಲ್ಲಿ ಬೆನ್‌ಸ್ಟೋಕ್ಸ್ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯವನ್ನು ಗೆಲ್ಲಿಸಿದ್ದರು. ಡಿಸೆಂಬರ್ ನಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಅವರು ಮೊಣಕಾಲಿನ ಗಾಯದಿಂದಾಗಿ ಹೊರಗುಳಿಯಬೇಕಾಯಿತು.

2023ರ ಮಿನಿ ಹರಾಜಿಗೆ ಮುನ್ನ ಪಂಜಾಬ್ ಕಿಂಗ್ಸ್ ತಂಡ 11.5 ಕೋಟಿ ರುಪಾಯಿಗಳನ್ನು ನೀಡಿ ಲಿವಿಂಗ್‌ಸ್ಟೋನ್‌ರನ್ನು ರಿಟೈನ್ ಮಾಡಿಕೊಂಡಿತ್ತು. ಕಳೆದ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು, 14 ಪಂದ್ಯಗಳಲ್ಲಿ 36.42 ರ ಸರಾಸರಿ ಮತ್ತು 182.08 ರ ಸ್ಟ್ರೈಕ್ ರೇಟ್‌ನಲ್ಲಿ 437 ರನ್‌ಗಳನ್ನು ಗಳಿಸಿದ್ದರು. ಈ ಬಾರಿಯ ಆವೃತ್ತಿಯಲ್ಲಿ ಕೂಡ ಅವರು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
ತಲೆನೋವಾದ ಆಟಗಾರರ ಗಾಯದ ಸಮಸ್ಯೆ
2023ರ ಐಪಿಎಲ್ ಆರಂಭಕ್ಕೆ ಮುನ್ನ ತಂಡದ ಸ್ಫೋಟಕ ಬ್ಯಾಟರ್ ಜಾನಿ ಬೈರ್‌ಸ್ಟೋವ್ ಗಾಯದ ಸಮಸ್ಯೆಯಿಂದಾಗಿ ಹೊರಬಿದ್ದಿದ್ದರು. ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳಲು ವಿಫಲವಾದ ನಂತರ ಅವರ ಬದಲಾಗಿ ಆಸ್ಟ್ರೇಲಿಯಾದ ಮ್ಯಾಥ್ಯೂ ಶಾರ್ಟ್‌ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಅಲ್ಲದೆ ತಂಡದ ವೇಗದ ಬೌಲರ್ ಕಗಿಸೊ ರಬಾಡ ಕೂಡ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು.