
ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತ ಮುಕ್ತಾಯಗೊಂಡಿದ್ದು, ಸದ್ಯ ಪ್ಲೇಆಫ್ ಸುತ್ತಿನ ಪಂದ್ಯಗಳು ಆರಂಭಗೊಂಡಿವೆ. ಲೀಗ್ ಹಂತದಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಟಾಪ್ 4 ಸ್ಥಾನ ಪಡೆದುಕೊಂಡ ಗುಜರಾತ್ ಟೈಟನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಪ್ಲೇಆಫ್‌ಗೆ ಲಗ್ಗೆ ಇಟ್ಟಿವೆ.
ಈ ಪೈಕಿ ಟಾಪ್ 2 ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ನಿನ್ನೆ ನಡೆದ ( ಮೇ 23 ) ಒಂದನೇ ಕ್ವಾಲಿಫಯರ್ ಪಂದ್ಯದಲ್ಲಿ ಸೆಣಸಾಡಿದವು. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 15 ರನ್‌ಗಳ ಅಂತರದಿಂದ ಹಾಲಿ ಚಾಂಪಿಯನ್ಸ್ ತಂಡವನ್ನು ಸೋಲಿಸಿ ನೇರವಾಗಿ ಫೈನಲ್ ಪ್ರವೇಶಿಸಿದೆ.
ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಹತ್ತನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ಆಡಿರುವ ಒಟ್ಟು 14 ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ 10ನೇ ಬಾರಿಗೆ ಫೈನಲ್ ತಲುಪಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಎಂ ಎಸ್ ಧೋನಿ ಯಶಸ್ವಿ ನಾಯಕತ್ವದಿಂದ ಚೆನ್ನೈ ಸೂಪರ್ ಕಿಂಗ್ಸ್ ಈ ಮಟ್ಟದ ಸಾಧನೆ ಮಾಡಿದ್ದು, ಇಷ್ಟು ಬಾರಿ ಉಳಿದ ಯಾವ ತಂಡವೂ ಸಹ ಫೈನಲ್ ಪಂದ್ಯವನ್ನು ಆಡಿಲ್ಲ.
ಹಾಗಿದ್ದರೆ ಇಷ್ಟು ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಯಾವ ತಂಡಗಳು ಎಷ್ಟು ಬಾರಿ ಫೈನಲ್ ತಲುಪಿವೆ ಹಾಗೂ ಎಷ್ಟು ತಂಡಗಳು ಫೈನಲ್ ತಲುಪಿಲ್ಲ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಅತಿಹೆಚ್ಚು ಬಾರಿ ಫೈನಲ್ ಆಡಿರುವ ತಂಡಗಳು:
* ಚೆನ್ನೈ ಸೂಪರ್ ಕಿಂಗ್ಸ್ ಇಲ್ಲಿಯವರೆಗೂ 10 ಬಾರಿ ಫೈನಲ್ ತಲುಪಿದೆ.
* ಮುಂಬೈ ಇಂಡಿಯನ್ಸ್ ಇಲ್ಲಿಯವರೆಗೂ 6 ಬಾರಿ ಫೈನಲ್ ತಲುಪಿದೆ.
* ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ಬಾರಿ ಫೈನಲ್ ತಲುಪಿದೆ.
* ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಎರಡು ಬಾರಿ ಫೈನಲ್ ತಲುಪಿವೆ.
* ಡೆಕ್ಕನ್ ಚಾರ್ಜರ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ರೈಸಿಂಗ್ ಪುಣೆ ಸೂಪರ್‌ಜಿಯಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ತಲಾ ಒಂದು ಬಾರಿ ಫೈನಲ್ ಆಡಿವೆ.
ಫೈನಲ್ ಪಂದ್ಯವನ್ನು ಒಮ್ಮೆಯೂ ಆಡದಿರುವ ತಂಡಗಳು:
ಲಕ್ನೋ ಸೂಪರ್ ಜೈಂಟ್ಸ್, ಪುಣೆ ವಾರಿಯರ್ಸ್ ಇಂಡಿಯಾ, ಕೊಚ್ಚಿ ಟಸ್ಕರ್ಸ್ ಕೇರಳ ತಂಡಗಳು ಒಮ್ಮೆಯೂ ಸಹ ಪ್ಲೇಆಫ್ ಆಡಿಲ್ಲ.
ಚೆನ್ನೈ ಫೈನಲ್ ತಲುಪಿದ್ದ ಐಪಿಎಲ್ ಆವೃತ್ತಿಗಳು:
* 2008ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು ರನ್ನರ್ ಅಪ್ ಆಗಿತ್ತು.
* 2010ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿತ್ತು.
* 2011ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿತ್ತು.
* 2012ರ ಐಪಿಎಲ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋತು ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು.
* 2013ಐಪಿಎಲ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು.
* 2015ರ ಐಪಿಎಲ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು.
* 2018ರ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿತ್ತು.
* 2019ರ ಐಪಿಎಲ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು.
* 2021ರ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿತ್ತು.
* ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಐಪಿಎಲ್ ತಲುಪಿದೆ.