ಲಕ್ನೋ ಸೂಪರ್ ಜೈಂಟ್ಸ್ ತಂಡ ಆರ್‌ಸಿಬಿ ತಂಡದ ವಿರುದ್ಧ ಸೋಲು ಅನುಭವಿಸಿದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣೆಸಾಡಲು ಸಜ್ಜಾಗಿದೆ. ಈ ಪಂದ್ಯಕ್ಕೂ ಮುನ್ನ ಲಕ್ನೋ ಪಡೆಗೆ ಮತ್ತೊಂದು ಆಘಾತ ಉಂಟಾಗಿದೆ. ತಂಡದ ಸ್ಟಾರ್ ವೇಗದ ಬೌಲರ್ ಜಯ್‌ದೇವ್ ಉನಾದ್ಕಟ್ ಅಭ್ಯಾಸದ ಸಂದರ್ಭದಲ್ಲಿ ಗಾಯಗೊಂಡಿದ್ದು ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ.
ಅಭ್ಯಾಸ ನಡೆಸುವ ಸಂದರ್ಭದಲ್ಲಿ ಜಯ್‌ದೇವ್ ಉನಾದ್ಕಟ್ ಭುಜದ ನೋವಿಗೆ ತುತ್ತಾಗಿದ್ದಾರೆ. ಹೀಗಾಗಿ ಉಳಿದ ಪಂದ್ಯಗಳಿಗೆ ಆಡಲು ಉನಾದ್ಕಟ್ ಅಸಮರ್ಥರಾಗಿದ್ದು ಟೂರ್ನಿಯಿಂದ ಹೊರಗುಳಿಯುವಂತಾಗಿದೆ. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಆವೃತ್ತಿಯ ಮುಂದಿನ ಪಂದ್ಯಗಳಲ್ಲಿ ಅನುಭವಿ ವೇಗಿಯ ಸೇವೆಯಿಂದ ವಂಚಿತವಾಗಲಿದೆ.

WTC ಫೈನಲ್‌ಗೆ ಲಭ್ಯವಿದ್ದಾರಾ ವೇಗಿ
ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನ ಫೈನಲ್ ಪಂದ್ಯಕ್ಕೆ ಅರ್ಹತೆಯನ್ನು ಸಂಪಾದಿಸಿದ್ದು ಐಪಿಎಲ್ ಟೂರ್ನಿ ಮುಕ್ತಾಯವಾದ ಒಂದೇ ವಾರದಲ್ಲಿ ಈ ಪ್ರತಿಷ್ಠಿತ ಫೈನಲ್ ಪಂದ್ಯ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಈ ಫೈನಲ್ ಪಂದ್ಯಕ್ಕೆ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. 15 ಆಟಗಾರರ ಈ ತಂಡದಲ್ಲಿ ಜಯ್‌ದೇವ್ ಉನಾದ್ಕಟ್ ಕೂಡ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಆ ಟೂರ್ನಿಗೆ ಉನಾದ್ಕಟ್ ಲಭ್ಯತೆಯ ಬಗ್ಗೆ ಪ್ರಶ್ನೆಗಳು ಉಳಿದುಕೊಂಡಿದೆ. ಆದರೆ ಸದ್ಯದ ಮಾಹಿತಿಯ ಪ್ರಕಾರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ವೇಳೆಗೆ ಉನಾದ್ಕಟ್ ಗಾಯದೊಂದ ಚೇತರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ರದರ್ಶನ ಈವರೆಗೆ ಗಮನಾರ್ಹವಾಗಿದೆ. ಆದರೆ ತಂಡದ ಗಾಯದ ಸಮಸ್ಯೆ ಮುಂದಿನ ಪಂದ್ಯಗಳ ಮೇಲೆ ಪೊರಿಣಾಮ ಬಿದ್ದರೆ ಅಚ್ಚರಿಯಿಲ್ಲ. ಯಾಕೆಂದರೆ ಜಯ್‌ದೇವ್ ಉನಾದ್ಕಟ್ ಜೊತೆಗೆ ತಂಡದ ನಾಯಕ ಕೆಎಲ್ ರಾಹುಲ್ ಕೂಡ ಗಾಯಕ್ಕೆ ತುತ್ತಾಗಿರುವುದು ತಿಳಿದೇ ಇದೆ. ಸ್ನಾಯುಸೆಳೆತಕ್ಕೆ ಒಳಗಾಗಿರುವ ಕೆಎಲ್ ರಾಹುಲ್ ಕೂಡ ಟೂರ್ನಿಯ ಮುಂದಿನ ಪಂದ್ಯಗಳಿಗೆ ಲಭ್ಯವಾಗುವ ಬಗ್ಗೆ ಸ್ಪಷ್ಟತೆಯಿಲ್ಲ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು ಆಡಿರುವ 9 ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ನಾಲ್ಕರಲ್ಲಿ ಸೋಲು ಕಂಡಿದೆ. ಹೀಗಾಗಿ 10 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. ಆದರೆ ಕಳೆದ ಪಂದ್ಯದಲ್ಲಿ ಆರ್‌ಸಿಬಿ ತಂಡದ ವಿರುದ್ಧ ತನ್ನ ತವರಿನಲ್ಲಿಯೇ ಆಘಾತಕಾರಿ ರೀತಿಯಲ್ಲಿ ಸೋಲು ಅನುಭವಿಸಿದ್ದು ತಂಡದ ಆತ್ಮವಿಶ್ವಾಸ ಕುಗ್ಗಿಸಿದೆ. ಲೋ ಸ್ಕೋರಿಂಗ್ ಪಂದ್ಯದಲ್ಲಿಯೂ ಆರ್‌ಸಿಬಿ ತಂಡದ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತನ್ನ ತವರಿನಲ್ಲಿಯೇ ಸೋಲಿನ ಮುಖಭಂಗಕ್ಕೆ ಒಳಗಾಗಿತ್ತು.
ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ವಿರುದ್ಧದ ಈ ಪಂದ್ಯ ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ಮೇ 3 ಬುಧವಾರ ಸಂಜೆ ಆಯೋಜನೆಯಾಗಲಿದೆ. ಸಂಜೆ 7:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪಂದ್ಯದ ನೇರಪ್ರಸಾರ ಮಾಡಿದರೆ ಜಿಯೋ ಸಿನಿಮಾದಲ್ಲಿ ಲೈವ್‌ಸ್ಟ್ರೀಮಿಂಗ್ ಮೂಲಕ ವೀಕ್ಷಿಸುವ ಅವಕಾಶವಿದೆ.