IPL 2023: ಲಕ್ನೋ ಸೂಪರ್ ಜೈಂಟ್ಸ್‌ಗೆ ದೊಡ್ಡ ಆಘಾತ: ನಾಯಕ ಕೆಎಲ್ ರಾಹುಲ್ ಟೂರ್ನಿಯಿಂದ ಔಟ್!
ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಗಾಯಗೊಂಡಿವುದು ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದೇ ಇದೆ. ಈ ಗಾಯದ ಕಾರಣದಿಂದಾಗಿ ರಾಹುಲ್ ಇದೀಗ ಐಪಿಎಲ್‌ನ ಉಳಿದ ಭಾಗದಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಬೌಂಡರಿ ತಡೆಯುವ ಸಲುವಾಗಿ ಓಡುತ್ತಿದ್ದಾಗ ರಾಹುಲ್ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಕೆಲ ಕಾಲ ರಾಹುಲ್‌ಗೆ ವಿಶ್ರಾಂತಿಯ ಅಗತ್ಯವಿರುವ ಕಾರಣ ಸಂಪೂರ್ಣ ಟೂರ್ನಿಯಿಂದ ಅನಿವಾರ್ಯವಾಗಿ ಹೊರಬಿದ್ದಿದ್ದಾರೆ.
ಆದರೆ ಈ ಸುದ್ದಿಯನ್ನು ಲಕ್ನೋ ಸೂಪರ್‌ಜೈಂಟ್ಸ್ ಫ್ರಾಂಚೈಸಿ ಅಥವಾ ಬಿಸಿಸಿಐ ಈವರೆಗೆ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ರಾಹುಲ್ ಐಪಿಎಲ್‌ನ ಈ ಬಾರಿಯ ಆವೃತ್ತಿಯ ಉಳಿದ ಭಾಗದಲ್ಲಿ ಭಾಗವಹಿಸುವ ಯಾವುದೇ ಸಾಧ್ಯತೆಗಳು ಇಲ್ಲ. ಮಾತ್ರವಲ್ಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿಯೂ ಕೆಎಲ್ ರಾಹುಲ್ ಭಾಗವಹಿಸುವ ಸಾಧ್ಯತೆ ತೀರಾ ಕಡಿಮೆಯಿದೆ ಎನ್ನಲಾಗಿದೆ. ಸ್ಕ್ಯಾನಿಂಗ್ ನಡೆಸಿ ಅದರ ಫಲಿತಾಂಶವನ್ನು ನೋಡಿಕೊಂಡು ಬಿಸಿಸಿಐ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ.

ಲಕ್ನೋ ಸೂಪರ್‌ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯ ಮುಕ್ತಾಯವಾದ ಬಳಿಕ ಮುಂಬೈಗೆ ತೆರಳಿದ್ದು ಅಲ್ಲಿ ಅವರು ಸ್ಕ್ಯಾನಿಂಗ್‌ಗೆ ಒಳಗಾಗಲಿದ್ದಾರೆ. ಸ್ಕ್ಯಾನಿಂಗ್ ವರದಿ ಆಧರಿಸಿ ಬಿಸಿಸಿಐ ಅಧಿಕಾರಿಗಳು ಹಾಗೂ ಎನ್‌ಸಿಎ ವೈದ್ಯರು ಕೆಎಲ್ ರಾಹುಲ್ ವಿಚಾರವಾಗಿ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ.
ಮೂಲಗಳ ಮಾಹಿತಿಯ ಪ್ರಕಾರ ಕೆಎಲ್ ರಾಹುಲ್ ಹ್ಯಾಮ್‌ಸ್ಟ್ರಿಂಜ್ ಗಾಯಕ್ಕೆ ತುತ್ತಾಗಿರುವ ಸಾಧ್ಯತೆಯಿದೆ. ಗಮನಾರ್ಹ ಅಂಶವೆಂದರೆ ಹತ್ತು ತಿಂಗಳ ಹಿಂದೆ ರಾಹುಲ್ ಜರ್ಮನಿಯಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಅವರು ಹಿಂದಿರುಗುವ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹಾಗಿದ್ದರೂ ಅವರು WTC ಫೈನಲ್‌ನಿಂದ ಹೊರಗುಳಿದರೆ ಇಶಾನ್ ಕಿಶನ್ ರಾಹುಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಸದ್ಯ ಇಶಾನ್ ಕಿಶನ್ ಮೀಸಲು ಆಟಗಾರನಾಗಿ ಹೆಸರಿಸಲ್ಪಟ್ಟಿದ್ದಾರೆ.
ಅನುಭವಿ ಆಟಗಾರ ಕೆಎಲ್ ರಾಹುಲ್ ಅವರ ಅಲಭ್ಯತೆಯಲ್ಲಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುಂದಿನ ಪಂದ್ಯಗಳಲ್ಲಿ ಮುನ್ನಡೆಸಲಿದ್ದಾರೆ. ಕಳೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ತಮ್ಮ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ವಹಿಸಿಕೊಂಡಿದ್ದರು.
ಇನ್ನು ಇದಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದ ಅನುಭವಿ ವೇಗಿ ಜಯ್‌ದೇವ್ ಉನಾದ್ಕಟ್ ಅಭ್ಯಾಸ ನಡೆಸುವ ಸಂದರ್ಭದಲ್ಲಿ ಭುಜದ ನೋವಿಗೆ ತುತ್ತಾಗಿದ್ದು ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಆಡಲು ಉನಾದ್ಕಟ್ ಅಸಮರ್ಥರಾಗಿರುವ ಕಾರಣ ಟೂರ್ನಿಯಿಂದ ಹೊರಗುಳಿಯುವಂತಾಗಿದೆ. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಆವೃತ್ತಿಯ ಮುಂದಿನ ಪಂದ್ಯಗಳಲ್ಲಿ ಅನುಭವಿ ವೇಗಿಯ ಸೇವೆಯಿಂದ ವಂಚಿತವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications