IPL 2023 LSG Vs PBKS: ಸಿಕಂದರ್ ರಾಜಾ, ಶಾರುಖ್ ಖಾನ್ ಅಬ್ಬರ: ಪಂಜಾಬ್ ಕಿಂಗ್ಸ್‌ಗೆ 2 ವಿಕೆಟ್‌ಗಳ ರೋಚಕ ಜಯ
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯ 21ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ 19.3 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಸಿಕಂದರ್ ರಾಜಾ ಅರ್ಧಶತಕ ಗಳಿಸಿ ಮಿಂಚಿದರೆ, ಶಾರೂಖ್ ಖಾನ್ ಕೊನೆಯಲ್ಲಿ ಅಬ್ಬರಿಸಿ ಗೆಲುವು ತಂದುಕೊಟ್ಟರು.
ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸಾಧಾರಣ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಾಯಕ ಕೆಎಲ್ ರಾಹುಲ್ 56 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್ ಸಹಿತ 74 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಆರಂಭಿಕ ಬ್ಯಾಟರ್ ಕೈಲ್ ಮೇಯರ್ಸ್ 23 ಎಸೆತಗಳಲ್ಲಿ 29 ರನ್ ಗಳಿಸಿದರು. ದೀಪಕ್ ಹೂಡಾ 2 ರನ್ ಗಳಿಸಿ ಔಟಾಗುವ ಮೂಲಕ ವೈಫಲ್ಯವನ್ನು ಮುಂದುವರೆಸಿದರು. ಕೃನಾಲ್ ಪಾಂಡ್ಯ 18 ರನ್ ಗಳಿಸಿ ಔಟಾದರು.

ಆರ್ ಸಿಬಿ ವಿರುದ್ಧ ಅಬ್ಬರಿಸಿದ್ದ ನಿಕೋಲಸ್ ಪೂರನ್ ಪಂಜಾಬ್ ವಿರುದ್ಧ ಮೊದಲನೇ ಎಸೆತದಲ್ಲೇ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ಮಾರ್ಕಸ್ ಸ್ಟೊಯಿನಿಸ್ 15 ರನ್ ಗಳಿಸಿದರೆ, ಬದೋನಿ ಅಜೇಯ 5 ಮತ್ತು ಕೃಷ್ಣಪ್ಪ ಗೌತಮ್ ಕೇವಲ 1 ರನ್ ಗಳಿಸಿದರು. ಪಂಜಾಬ್ ಕಿಂಗ್ಸ್ ನಾಯಕ ಸ್ಯಾಮ್ ಕರನ್ ಮೂರು ವಿಕೆಟ್ ಪಡೆದರೆ, ಕಗಿಸೊ ರಬಾಡ ಎರಡು ವಿಕೆಟ್ ಪಡೆದರು.ಹಪ್ರೀತ್ ಬ್ರಾರ್, ಅರ್ಷದೀಪ್ ಸಿಂಗ್ ಮತ್ತು ಸಿಕಂದರ್ ರಾಜಾ ತಲಾ ಒಂದು ವಿಕೆಟ್ ಪಡೆದರು.

ಸಿಕಂದರ್ ರಾಜಾ, ಶಾರೂಖ್ ಖಾನ್ ಆಸರೆ
160 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು. ಅಥರ್ವ ತೈಡೆ ಶೂನ್ಯಕ್ಕೆ ಔಟಾದರೆ, ಪ್ರಭ್‌ಶಿಮ್ರಾನ್ ಸಿಂಗ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮ್ಯಾಥ್ಯೂ ಶಾರ್ಟ್ 22 ಎಸೆತಗಳಲ್ಲಿ 34 ರನ್ ಗಳಿಸಿದರು. ಹಪ್ರೀತ್ ಸಿಂಗ್ ಭಾಟಿಯಾ 22 ರನ್ ಗಳಿಸಿದರು. ನಂತರ ಬಂದ ಸಿಕಂದರ್ ರಾಜಾ ತಂಡಕ್ಕೆ ಆಸರೆಯಾದರು.
ಆರಂಭದಲ್ಲಿ ಎಚ್ಚರಿಕೆಯಿಂದ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ಅವರು ನಂತರ ಬೌಂಡರಿ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ಸಮೀಪ ತಂದರು. 41 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ಸಹಿತ 57 ರನ್ ಗಳಿಸಿ ಔಟಾದರು. ರಾಜಾ ಔಟಾಗುತ್ತಿದ್ದಂತೆ ಪಂಜಾಬ್ ಮತ್ತೆ ಒತ್ತಡಕ್ಕೆ ಸಿಲುಕಿತು, ಶಾರೂಖ್ ಖಾನ್ 10 ಎಸೆತಗಳಲ್ಲಿ 1 ಬೌಂಡರಿ 2 ಸಿಕ್ಸರ್ ನೆರವಿನಿಂದ 23 ರನ್ ಗಳಿಸುವ ಮೂಲಕ ಇನ್ನು ಮೂರು ಎಸೆತ ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟರು.
ಸಿಕಂದರ್ ರಾಜಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅರ್ಧಶತಕ ಗಳಿಸಿದ ಮೊದಲ ಜಿಂಬಾಬ್ವೆ ಆಟಗಾರ ಎನಿಸಿಕೊಂಡರು. ತಮ್ಮ ಅತ್ಯುತ್ತಮ ಇನ್ನಿಂಗ್ಸ್‌ಗಾಗಿ ಅವರು ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಗೆಲುವಿನ ಮೂಲಕ ಪಂಜಾಬ್ ಕಿಂಗ್ಸ್ 6 ಅಂಕಗಳೊಂದಿಗೆ 4ನೇ ಸ್ಥಾನಕ್ಕೆ ಜಿಗಿತ ಕಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications