LSG vs RCB: ಮೈದಾನದಲ್ಲೇ ಜಗಳವಾಡಿದ ಕೊಹ್ಲಿ- ಗಂಭೀರ್‌ಗೆ ಭಾರೀ ಶಿಕ್ಷೆ; ನವೀನ್‌ಗೂ ದಂಡದ ಬಿಸಿ
ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಲೋ ಸ್ಕೋರಿಂಗ್ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯ ಈ ರೋಚಕ ಸೆಣೆಸಾಟದ ಕಾರಣಕ್ಕೆ ಸುದ್ದಿಯಾಗುವ ಬದಲಿಗೆ ಬೇಡದ ಕಾರಣಕ್ಕೆ ಚರ್ಚೆಯಾಗುತ್ತಿದೆ. ಪಂದ್ಯದ ಮುಕ್ತಾಯದ ಬಳಿಕ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಮಧ್ಯೆ ವಾಕ್ಸಮರ ನಡೆದಿದ್ದು ಅಚ್ಚರಿಗೆ ಕಾರಣವಾಗಿದೆ. ಈ ಮಾತಿನ ಚಕಮಕಿ ಈಗ ಇಬ್ಬರಿಗೂ ಭಾರೀ ದಂಡಕ್ಕೆ ಕಾರಣವಾಗಿದೆ.
ಮಾತಿನ ಚಕಮಕಿ ನಡೆಸಿದ ಕಾರಣಕ್ಕೆ ಗೌತನ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಇಬ್ಬರಿಗೂ ದೊಡ್ಡ ಪ್ರಮಾಣದ ದಂಡ ವಿಧಿಸಲಾಗಿದೆ. ಆರ್‌ಸಿಬಿ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಅವರು ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಪಂದ್ಯದ ಸಂಭಾವನೆಯ ಶೇಕಡಾ 100ರಷ್ಟು ದಂಡದ ವಿಧಿಸಲಾಗಿದೆ.

ಐಪಿಎಲ್ ಮಾಧ್ಯಮ ಪ್ರಕಟಣೆ ಬಿಡುಗಡೆಗೊಳಿಸಿದ್ದು ಇದರಲ್ಲಿ "ಮಿ. ಗಂಭೀರ್ ಅವರು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.21 ಅಡಿಯಲ್ಲಿ ಲೆವೆಲ್-2 ಅಪರಾಧವನ್ನು ಒಪ್ಪಿಕೊಂಡಿದ್ದಾರೆ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ನಂತರ ವಿರಾಟ್ ಕೊಹ್ಲಿ ಕೂಡ ಇದೇ ನಿಯಮದಲ್ಲಿ ಐಪಿಎಲ್ ಶಿಸ್ತನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿಸಿದ್ದು ಪಂದ್ಯದ ಸಂಭಾವನೆಯ ಶೇಕಡಾ 100ರಷ್ಟು ದಂಡದ ಶಿಕ್ಷೆಯನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ನಡೆದ ಘಟನೆಯಿಂದ ಹೊತ್ತಿದ್ದ ಕಿಡಿ
ಅಲ್ಪ ಮೊತ್ತದ ಗುರಿಯನ್ನು ನೀಡಿದ್ದ ಆರ್‌ಸಿಬಿ ತಂಡ ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿತ್ತು. ಈ ಪಂದ್ಯದಲ್ಲಿ ವಿರಾಟ್ ಆಕ್ರಮಣಕಾರಿತನ ಸ್ವಲ್ಪ ಹೆಚ್ಚೇ ಇದ್ದಿದ್ದು ಸ್ಪಷ್ಟವಾಗಿತ್ತು. ಎದುರಾಳಿ ತಂಡದ ವಿಕೆಟ್‌ಗಳು ಉರುಳುತ್ತಿದ್ದಂತೆ ಕೊಹ್ಲಿ ಆಕ್ರಮಣಕಾರಿಯಾಗಿ ಸಂಭ್ರಮಿಸುತ್ತಿದ್ದರು. ಇದಕ್ಕೆ ಕಾರಣವೂ ಇತ್ತು. ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರ್‌ಸಿಬಿ ತಂಡವನ್ನು ಬೆಂಗಳೂರಿನಲ್ಲಿ ಎದುರಿಸಿದ್ದಾಗ ಕೊನೆಯ ಎಸೆತದಲ್ಲಿ ಆರ್‌ಸಿಬಿ ತಂಡವನ್ನು ಎಲ್‌ಎಸ್‌ಜಿ ಮಣಿಸಿತ್ತು. ಆ ಪಂದ್ಯದ ಬಳಿಕ ಎಲ್‌ಎಸ್‌ಜಿ ಮೆಂಟರ್ ಗೌತಮ್ ಗಂಭೀರ್ ಆರ್‌ಸಿಬಿ ಅಭಿಮಾನಿಗಳನ್ನು ಗುಟಿಯಾಗಿಟ್ಟುಕೊಂಡು ಸುಮ್ಮನಿಸುವಂತೆ ಸನ್ನೆಯ ಮೂಲಕ ಸೂಚಿಸಿದ್ದರು. ಈ ವರ್ತನೆ ಸಹಜವಾಗಿಯೇ ವಿರಾಟ್ ಕೊಹ್ಲಿಯನ್ನು ಕೆಣಕುವಂತೆ ಮಾಡಿತ್ತು.
ಬಾಲಿಶತನದಿಂದ ವರ್ತಿಸಿದ ಗೌತಮ್ ಗಂಭೀರ್
ವಿರಾಟ್ ಕೊಹ್ಲಿ ಆಟದಲ್ಲಿ ಆಕ್ರಮಣಕಾರಿ ಮನೋಭಾವದಿಂದ ವರ್ತಿಸುವುದು ಅಭಿಮಾನಿಗಳಿಗೆ ತಿಳಿದೇ ಇದೆ. ಆದರೆ ಪಂದ್ಯದ ಮುಕ್ತಾಯದ ಬಳಿಕ ಗಂಭೀರ್ ಅವರ ಬಾಲಿಶತನದ ವರ್ತನೆ ಅಭಿಮಾನಿಗಳಲ್ಲಿ ಅಚ್ಚರಿಯನ್ನುಂಟು ಮಾಡಿತ್ತು. ಪಂದ್ಯ ಮುಕ್ತಾಯದ ಬಳಿಕ ವಿರಾಟ್ ಕೊಹ್ಲಿ ಎದುರಾಳಿ ತಂಡದ ಆಟಗಾರ ಕೇಲ್ ಮೇಯರ್ಸ್ ಜೊತೆಗೆ ಮಾತನಾಡುತ್ತ ಮೈದಾನದಿಂದ ಹೊರಗಡೆಗೆ ಧಾವಿಸುತ್ತಿದ್ದರೆ ಆಗ ಕೇಲ್ ಮೇಯರ್ಸ್ ಸನಿಹಕ್ಕೆ ಬಂದ ಎಲ್‌ಎಸ್‌ಜಿ ಮೇಂಟರ್ ಗೌತಮ್ ಗಂಭೀರ್ ಕೊಹ್ಲಿಯ ಜೊತೆಗೆ ಮಾತು ಮುಂದುವರಿಸದಂತೆ ತಡೆದು ಮೇಯರ್ಸ್ ಅವರನ್ನು ದೂರಕ್ಕೆ ಎಳೆದೊಯ್ದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ವಾಗ್ವಾದ ಜೋರಾಯಿತು. ಇಬ್ಬರು ಕೂಡ ಪರಸ್ಪರ ಏರುದ್ವನಿಯಲ್ಲಿ ಮಾತನಾಡುತ್ತಿರುವುದು ಸ್ಪಷ್ಟವಾಗಿತ್ತು.
ನವೀನ್ ಉಲ್ ಹಕ್‌ಗೂ ದಂಡದ ಬರೆ
ಇನ್ನು ವಿರಾಟ್ ಕೊಹ್ಲಿ ಹಾಗೂ ಗಂಭೀರ್ ಜೊತೆಗೆ ಎಲ್‌ಎಸ್‌ಜಿ ತಂಡದ ವೇಗದ ಬೌಲರ್ ನವೀನ್ ಉಲ್ ಹಕ್ ಅವರಿಗೂ ಈ ಪಂದ್ಯದ ಬಳಿಕ ದಂಡ ವಿಧಿಸಲಾಗಿದೆ. ನವೀನ್ ಉಲ್ ಹಕ್ ಐಸಿಸಿ ದಂಡ ಸಂಹಿತೆಯ 2.21ನೇ ಆರ್ಟಿಕಲ್ ಅಡಿಯಲ್ಲಿ ಮೊದಲ ಹಂತದ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಐಪಿಎಲ್ ತಿಳಿಸಿದ್ದು ಅವರಿಗೆ ಪಂದ್ಯದ ಸಂಭಾವನೆಯ ಶೇಕಡಾ 50ರಷ್ಟು ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದೆ. ನವೀನ್ ಉಲ್ ಹಕ್ ಕೂಡ ಕೊಹ್ಲಿ ಜೊತೆಗೆ ಪಂದ್ಯದ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಸಿದ್ದರು.
ರೋಚಕ ಗೆಲುವು ಸಾಧಿಸಿದ ಆರ್‌ಸಿಬಿ
ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್ ವಿಭಾಗದಲ್ಲಿ ಹಿನ್ನಡೆ ಅನುಭವಿಸಿತು. ಬ್ಯಾಟಿಂಗ್‌ಗೆ ಸವಾಲೆನಿಸುವ ಪಿಚ್‌ನಲ್ಲಿ ಆರ್‌ಸಿಬಿ ತಂಡದ ಬ್ಯಾಟಿಂಗ್ ವಿಭಾಗ 126 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು. ಆರ್‌ಸಿಬಿ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಮೊದಲ ವಿಕೆಟ್‌ಗೆ 61 ರನ್‌ಗಳಿಸಿದ್ದು ತಂಡ ಈ ಮೊತ್ತವನ್ನು ಗಳಿಸಲು ಕಾರಣವಾಯಿತು. ಉಳಿದಂತೆ ಯಾವುದೇ ಅಟಗಾರನಿಂದಲೂ ಉತ್ತಮ ಪ್ರದರ್ಶನ ಬಾರಲಿಲ್ಲ.
ಆರ್‌ಸಿಬಿ ನೀಡಿದ ಈ ಗುರಿಯನ್ನು ಬೆನ್ನಟ್ಟಿದ ಎಲ್‌ಎಸ್‌ಜಿ ತಂಡ ಆರ್‌ಸಿಬಿಯ ಭರ್ಜರಿ ಬೌಲಿಂಗ್ ದಾಳಿಗೆ ಹಿನ್ನಡೆ ಅನುಭವಿಸಿತು. ಸಂಘಟಿತ ಪ್ರದರ್ಶನ ನೀಡಿದ ಆರ್‌ಸಿಬಿ ಕೇವಲ 108 ರನ್‌ಗೆ ಎಲ್‌ಎಸ್‌ಜಿ ತಂಡವನ್ನು ಆಲವಟ್ ಮಾಡಿದೆ. ಈ ಮೂಲಕ ಟೂರ್ನಿಯಲ್ಲಿ ಐದನೇ ಗೆಲುವು ಸಾಧಿಸಿದೆ ಆರ್‌ಸಿಬಿ. ಈ ಮೂಲಕ ಅಂಕಪಟ್ಟಯಲ್ಲಿ ಐದನೇ ಸ್ಥಾನಕ್ಕೇರಿದೆ ಆರ್‌ಸಿಬಿ ತಂಡ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications