RCB vs LSG: ರೋಚಕ ಪಂದ್ಯದಲ್ಲಿ 1 ವಿಕೆಟ್‌ನಿಂದ ಗೆದ್ದ ಲಕ್ನೋ ಸೂಪರ್ ಜೈಂಟ್ಸ್
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 1 ವಿಕೆಟ್‌ನ ರೋಚಕ ಜಯ ಸಾಧಿಸಿದೆ. 213 ರನ್‌ಗಳ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ಕೊನೆಯ ಎಸೆತದಲ್ಲಿ ಒಂದು ರನ್ ಪಡೆಯುವ ಮೂಲಕ ಗೆಲುವು ಸಾಧಿಸಿತು. ನಿಕೋಲಸ್ ಪೂರನ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅಬ್ಬರದ ಬ್ಯಾಟಿಂಗ್ ಮೂಲಕ ಮಿಂಚಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಉತ್ತಮ ಆರಂಭ ಒದಗಿಸಿದರು. ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 4 ಬೌಂಡರಿ 4 ಸಿಕ್ಸರ್ ಸಹಿತ 61 ರನ್ ಗಳಿಸಿ ಔಟಾದರು. ಈ ಜೋಡಿ ಮೊದಲನೇ ವಿಕೆಟ್‌ಗೆ 11.3 ಓವರ್ ಗಳಲ್ಲಿ 96 ರನ್ ಕಲೆಹಾಕಿತು.

ನಾಯಕನ ಆಟವಾಡಿದ ಫಾಫ್ ಡುಪ್ಲೆಸಿಸ್ 46 ಎಸೆತಗಳಲ್ಲಿ 5 ಬೌಂಡರಿ 5 ಸಿಕ್ಸರ್ ಸಹಿತ ಅಜೇಯ 79 ರನ್ ಗಳಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 29 ಎಸೆತಗಳಲ್ಲಿ 3 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್ ಸಹಿತ 59 ರನ್ ಗಳಿಸಿದರು. ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 212 ರನ್ ಕಲೆಹಾಕಿತು.

ಸ್ಟೊಯಿನಿಸ್, ಪೂರನ್ ಅಬ್ಬರ
ಬೃಹತ್ ಮೊತ್ತವನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ಮೊದಲ ಓವರ್ ನಲ್ಲೇ ಪ್ರಮುಖ ಬ್ಯಾಟರ್ ಕೈಲ್ ಮೇಯರ್ಸ್ ವಿಕೆಟ್ ಕಳೆದುಕೊಂಡ ಆಘಾತ ಅನುಭವಿಸಿತು. ಸಿರಾಜ್ ಮೊದಲನೇ ಓವರ್ ನಲ್ಲೇ ವಿಕೆಟ್ ಪಡೆದರು. ದೀಪಕ್ ಹೂಡಾ 9 ರನ್ ಗಳಿಸಿ ಔಟಾದರೆ, ಕೃನಾಲ್ ಪಾಂಡ್ಯ ಯಾವುದೇ ರನ್ ಗಳಿಸದೆ ವಿಕೆಟ್ ಒಪ್ಪಿಸಿದರು. ಎಡಗೈ ವೇಗಿ ವೇಯ್ನ್ ಪಾರ್ನೆಲ್ ಕೂಡ 2 ವಿಕೆಟ್ ಪಡೆದುಕೊಂಡರು.
ನಂತರ ಬಂದ ಮಾರ್ಕಸ್ ಸ್ಟೋಯಿನಸ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. 30 ಎಸೆತಗಳಲ್ಲಿ 6 ಬೌಂಡರಿ 5 ಸಿಕ್ಸರ್ ಸಹಿತ 65 ರನ್ ಗಳಿಸಿ ಔಟಾದರು. ನಂತರ ಬಂದ ನಿಕೋಲಸ್ ಪೂರನ್ ಚಿನ್ನಸ್ವಾಮಿ ಅಂಗಳದಲ್ಲಿ ಬೌಂಡರಿಗಳ ಸುರಿಮಳೈಗದರು. ಆರ್ ಸಿಬಿ ಬೌಲರ್ ಗಳನ್ನು ಹಿಗ್ಗಾ ಮಗ್ಗಾ ಜಾಡಿಸಿದ ಅವರು ಕೇವಲ 19 ಎಸೆತಗಳಲ್ಲಿ 4 ಬೌಂಡರಿ 7 ಸಿಕ್ಸರ್ ಸಹಿತ 62 ರನ್ ಗಳಿಸಿದರು.
ಪೂರನ್ ಔಟಾಗುತ್ತಿದ್ದಂತೆ ಮತ್ತೆ ಆರ್ ಸಿಬಿ ಗೆಲ್ಲುವ ಭರವಸೆ ಮೂಡಿಸಿದರು ಆಯುಷ್ ಬದೋನಿ ಉತ್ತಮವಾಗಿ ಆಡಿದರು. ಅವರು ಕೂಡ 19ನೇ ಓವರ್ ನಲ್ಲಿ ಸಿಕ್ಸರ್ ಸಿಡಿಸಿದರು ಬ್ಯಾಟ್ ವಿಕೆಟ್‌ಗೆ ತಗುಲಿ ಹಿಟ್ ವಿಕೆಟ್ ಆದರು. ಕೊನೆಯ ಓವರ್ ನಲ್ಲಿ ಗೆಲುವಿಗೆ 5 ರನ್ ಬೇಕಿದ್ದಾಗ ಮಾರ್ಕ್‌ವುಡ್ ಬೌಲ್ಡ್ ಆದರು. ರವಿ ಬಿಷ್ಣೋಯ್ ಮೊದಲ ಎಸೆತದಲ್ಲೇ 2 ರನ್ ಗಳಿಸಿ ಸ್ಕೋರ್ ಸಮಗೊಳಿಸಿದರು. ಗೆಲುವಿಗೆ ಕೊನೆಯ ಎಸೆತದಲ್ಲಿ ಒಂದು ರನ್ ಬೇಕಿದ್ದಾಗ, ಚೆಂಡು ಬ್ಯಾಟರ್ ತಪ್ಪಿಸಿ ಹಿಂದೆ ಹೋದರೂ, ಒಂದು ರನ್ ಓಡುವ ಮೂಲಕ ಲಕ್ನೋ ರೋಚಕ ಗೆಲುವು ಪಡೆದುಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications