
ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 63ನೇ ಪಂದ್ಯ ಇಂದು ( ಮೇ 16 ) ನಡೆಯುತ್ತಿದ್ದು, ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿವೆ.
ಈ ಪಂದ್ಯ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನ ಕ್ರಿಕೆಟ್ ಸ್ಟೇಡಿಯಂನಲ್ಲಿ ಜರುಗುತ್ತಿದ್ದು, ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡು ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಮಾರ್ಕಸ್ ಸ್ಟಾಯಿನಿಸ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕಿ ಎದುರಾಳಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 178 ರನ್‌ಗಳ ಗುರಿಯನ್ನು ನೀಡಿತ್ತು.
ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲಗೊಂಡ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿತು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ 5 ರನ್‌ಗಳ ರೋಚಕ ಗೆಲುವು ಕಂಡಿದೆ.ಗೆಲುವು ಕಂಡಿದೆ.
ಲಕ್ನೋ ಸೂಪರ್ ಜೈಂಟ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕ ಆಟಗಾರರಾಗಿ ದೀಪಕ್ ಹೂಡಾ ಹಾಗೂ ಕ್ವಿಂಟನ್ ಡಿ ಕಾಕ್ ಕಣಕ್ಕಿಳಿದಿದ್ದರು. ದೀಪಕ್ ಹೂಡಾ 5 ರನ್ ಗಳಿಸಿದರೆ, ಕ್ವಿಂಟನ್ ಡಿ ಕಾಕ್ 16 ರನ್ ಗಳಿಸಿದರು. ಇನ್ನುಳಿದಂತೆ ಪ್ರೇರಕ್ ಮಂಕಾಡ್ ಗೋಲ್ಡನ್ ಡಕ್ಔಟ್ ಆದರೆ, ನಾಯಕ ಕೃನಾಲ್ ಪಾಂಡ್ಯ 49 ರನ್, ನಿಕೋಲಸ್ ಪೂರನ್ ಅಜೇಯ 8 ರನ್ ಹಾಗೂ ಮಾರ್ಕಸ್ ಸ್ಟಾಯಿನಿಸ್ 47 ಎಸೆತಗಳಲ್ಲಿ 4 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ ಅಜೇಯ 89 ರನ್ ಗಳಿಸಿದರು.
ಮುಂಬೈ ಇಂಡಿಯನ್ಸ್ ತಂಡದ ಪರ ಜೇಸನ್ ಬೆಹ್ರೆಂಡ್ರಾಫ್ 2 ವಿಕೆಟ್, ಪಿಯೂಷ್ ಚಾವ್ಲಾ 1 ವಿಕೆಟ್ ಪಡೆದರು.
ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್: ಲಕ್ನೋ ಸೂಪರ್ ಜೈಂಟ್ಸ್ ತಂಡ ನೀಡಿದ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ಆರಂಭಿಕ ಆಟಗಾರರಾಗಿ ಇಶಾನ್ ಕಿಶನ್ ಹಾಗೂ ರೋಹಿತ್ ಶರ್ಮಾ ಕಣಕ್ಕಿಳಿದರು. ಇಶಾನ್ ಕಿಶನ್ 39 ಎಸೆತಗಳಲ್ಲಿ 59 ರನ್ ಗಳಿಸಿದರೆ, ರೋಹಿತ್ ಶರ್ಮಾ 25 ಎಸೆತಗಳಲ್ಲಿ 37 ರನ್ ಗಳಿಸಿದರು. ಇನ್ನುಳಿದಂತೆ ಸೂರ್ಯಕುಮಾರ್ ಯಾದವ್ 7, ನೇಹಲ್ ವಾಧೇರಾ 16, ವಿಷ್ಣು ವಿನೋದ್ 2 ರನ್, ಕ್ಯಾಮರೂನ್ ಗ್ರೀನ್ ಅಜೇಯ 4 ಹಾಗೂ ಟಿಮ್ ಡೇವಿಡ್ 19 ಎಸೆತಗಳಲ್ಲಿ ಅಜೇಯ 32 ರನ್ ಕಲೆಹಾಕಿದರು.
ಹೀಗೆ ಒಂದೆಡೆ ಟಿಮ್ ಡೇವಿಡ್ ಏಕಾಂಗಿ ಹೋರಾಟ ನಡೆಸಿದರೆ ಮತ್ತೊಂದೆಡೆ ಸರಿಯಾದ ಸಾಥ್ ಸಿಗದ ಕಾರಣ ಗೆಲುವಿನ ಅಂಚಿಗೆ ಬಂದು ಮುಂಬೈ ಇಂಡಿಯನ್ಸ್ ಸೋತಿದೆ. ಇನ್ನು ಕೊನೆಯ 12 ಎಸೆತಗಳಲ್ಲಿ 30 ರನ್ ಬೇಕಿದ್ದಾಗ 19ನೇ ಓವರ್ ಅನ್ನು ನವೀನ್ ಉಲ್ ಹಕ್ ಎಸೆದರು. ಈ ಓವರ್‌ನಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದ ಟಿಮ್ ಡೇವಿಡ್ ಒಂದೇ ಓವರ್‌ನಲ್ಲಿ 19 ರನ್ ಹರಿದು ಬರುವ ಹಾಗೆ ಮಾಡಿದರು. ಇನ್ನು ಕೊನೆಯ ಓವರ್‌ನಲ್ಲಿ ಗೆಲ್ಲಲು 11 ರನ್‌ಗಳ ಅಗತ್ಯವಿತ್ತು. ಆದರೆ ಕೊನೆಯ ಓವರ್ ಎಸೆದ ಮೊಹ್ಸಿನ್ ಖಾನ್ ಕೇವಲ ಐದು ರನ್ ನೀಡಿ ಮುಂಬೈ ತಂಡ ಸೋಲುವ ಹಾಗೆ ಮಾಡಿದರು. ಟಿಮ್ ಡೇವಿಡ್ ರೀತಿಯ ಸ್ಪೋಟಕ ಆಟಗಾರ ಸಹ ಬೌಂಡರಿ ಬಾರಿಸದ ಹಾಗೆ ಮೊಹ್ಸಿನ್ ಖಾನ್ ಅತ್ಯುತ್ತಮ ಬೌಲಿಂಗ್ ಮಾಡಿದರು.
ಲಕ್ನೋ ಸೂಪರ್ ಜೈಂಟ್ಸ್ ಪರ ಯಶ್ ಠಾಕೂರ್ ಹಾಗೂ ರವಿ ಬಿಷ್ಣೋಯಿ ತಲಾ ಎರಡು ವಿಕೆಟ್ ಪಡೆದರೆ, ಮೊಹ್ಸಿನ್ ಖಾನ್ ಒಂದು ವಿಕೆಟ್ ಪಡೆದರು.
ಆಡುವ ಬಳಗಗಳು:
ಮುಂಬೈ ಇಂಡಿಯನ್ಸ್ ಆಡುವ ಬಳಗ: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಹೃತಿಕ್ ಶೋಕೀನ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್‌ಡಾರ್ಫ್, ಆಕಾಶ್ ಮಧ್ವಲ್
ಲಕ್ನೋ ಸೂಪರ್ ಜೈಂಟ್ಸ್ ಆಡುವ ಬಳಗ: ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ದೀಪಕ್ ಹೂಡಾ, ಪ್ರೇರಕ್ ಮಂಕಡ್, ಕೃನಾಲ್ ಪಾಂಡ್ಯ (ನಾಯಕ, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಸ್ವಪ್ನಿಲ್ ಸಿಂಗ್, ಮೊಹ್ಸಿನ್ ಖಾನ್