ಪಂಜಾಬ್ ಕಿಂಗ್ಸ್ ತಂಡಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ 2023ಕ್ಕೆ ಆರಂಭವೇ ಮುನ್ನವೆ ಆಘಾತ ಎದುರಾಗಿದೆ. ತಂಡದ ಸ್ಫೋಟಕ ಬ್ಯಾಟರ್ ಜಾನಿ ಬೈರ್‌ಸ್ಟೋವ್ ಗಾಯದ ಸಮಸ್ಯೆಯಿಂದ ಐಪಿಎಲ್‌ನಿಂದ ಹೊರಗುಳಿದ ನಂತರ, ಇಂಗ್ಲೆಂಡ್‌ನ ಮತ್ತೊಬ್ಬ ಸ್ಫೋಟಕ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡಕ್ಕೆ ಇದು ಬಹಳ ದೊಡ್ಡ ಹಿನ್ನಡೆಯಾಗಿದೆ. ಪವರ್ ಹಿಟ್ಟರ್ ಬ್ಯಾಟರ್ ಪಂಜಾಬ್ ಕಿಂಗ್ಸ್‌ನ ಮೊದಲ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ, ಏಪ್ರಿಲ್ 1 ರಂದು ತವರಿನ ಅಂಗಳದಲ್ಲಿ ಪಂಜಾಬ್ ತನ್ನ ಮೊದಲನೇ ಪಂದ್ಯವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ. ಎರಡನೇ ಪಂದ್ಯಕ್ಕಾಗಿ ಲಿವಿಂಗ್‌ಸ್ಟೋನ್ ಆಯ್ಕೆಗೆ ಲಭ್ಯವಿರುತ್ತಾರೆ ಎಂದು ಮೂಲಗಳು ತಿಳಿಸಿವೆ.

ಲಿಯಾಮ್ ಲಿವಿಂಗ್‌ಸ್ಟೋನ್ ಕಳೆದ ಡಿಸೆಂಬರ್‌ನಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ಗಾಯದಿಂದ ಚೇತರಿಸಿಕೊಂಡಿರುವ ಅವರಿಗೆ ಇನ್ನೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯಿಂದ ಫಿಟ್‌ನೆಸ್ ಕ್ಲಿಯರೆನ್ಸ್ ಸಿಕ್ಕಿಲ್ಲ, ಇದೇ ಕಾರಣಕ್ಕೆ ಅವರು ಮೊದಲನೇ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. ಸದ್ಯದಲ್ಲೇ ಅವರು ಎನ್‌ಒಸಿ ಪಡೆಯಲಿದ್ದು, ತಂಡವನ್ನು ಸೇರಿಕೊಳ್ಳಲಿದ್ದಾರೆ.
"ಅವರ ಫಿಟ್‌ನೆಸ್ ಸ್ಥಿತಿಯನ್ನು ನಿರ್ಧರಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸ್ಕ್ಯಾನ್‌ಗಳನ್ನು ನಡೆಸುತ್ತಿರುವುದರಿಂದ ಅವರು ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರು ಎರಡನೇ ಪಂದ್ಯದಿಂದಲೇ ಆಡಬಹುದು" ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಪಂಜಾಬ್ ಕಿಂಗ್ಸ್ ಎರಡನೇ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಆಡಲಿದೆ.
ಹಂಡ್ರೆಡ್ ಲೀಗ್ ವೇಳೆ ಪಾದದ ಗಾಯ
ಪಂಜಾಬ್ ಕಿಂಗ್ಸ್ ತಂಡದ ಸ್ಫೋಟಕ ಆಲ್‌ರೌಂಡರ್ ಆಗಿರುವ ಲಿಯಾಮ್ ಲಿವಿಂಗ್‌ಸ್ಟೋನ್, 2022ರಲ್ಲಿ ಪಾಕಿಸ್ತಾನದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಮೊಣಕಾಲಿಗೆ ಗಾಯಗೊಂಡ ನಂತರ ಯಾವುದೇ ಕ್ರಿಕೆಟ್ ಪಂದ್ಯವನ್ನು ಆಡಿಲ್ಲ. ಅದಕ್ಕೂ ಮುನ್ನ ಇಂಗ್ಲೆಂಡ್‌ನಲ್ಲಿ ನಡೆದ ಹಂಡ್ರೆಡ್ ಲೀಗ್‌ನಲ್ಲಿ ಪಾದದ ಗಾಯಕ್ಕೆ ತುತ್ತಾಗಿದ್ದರು. ಲಿವಿಂಗ್‌ಸ್ಟೋನ್ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಕಳೆದ ಆವೃತ್ತಿಯಲ್ಲಿ ಲಿವಿಂಗ್‌ಸ್ಟೋನ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆಡಿದ 14 ಪಂದ್ಯಗಳಲ್ಲಿ 36.42 ಸರಾಸರಿಯಲ್ಲಿ 182.08 ಸ್ಟ್ರೈಕ್‌ರೇಟ್‌ನಲ್ಲಿ 437 ರನ್ ಗಳಿಸಿದರು. ಅವರು ತಮ್ಮ ದೊಡ್ಡ ಹೊಡೆತಕ್ಕೆ ಹೆಸರಾಗಿದ್ದಾರೆ. ಇಂಗ್ಲೆಂಡ್ ಪರವಾಗಿ 12 ಏಕದಿನ ಪಂದ್ಯಗಳು ಮತ್ತು 29 ಟಿ20 ಪಂದ್ಯಗಳನ್ನಾಡಿದ್ದಾರೆ.
2022ರಲ್ಲಿ ಪಂಜಾಬ್ ಕಿಂಗ್ಸ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ, 14 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಗೆಲುವು ಮತ್ತು 7 ಸೋಲುಗಳ ಮೂಲಕ 14 ಅಂಕಗಳೊಂದಿಗೆ 6ನೇ ಸ್ಥಾನ ಪಡೆದಿದ್ದರು. ಲಿವಿಂಗ್‌ಸ್ಟೋನ್ ಬೌಲಿಂಗ್‌ನಲ್ಲಿ ಕೂಡ ಮಿಂಚಿದ್ದರು, ಕಳೆದ ಆವೃತ್ತಿಯಲ್ಲಿ 6 ವಿಕೆಟ್ ಪಡೆದರು. ಆಫ್ ಸ್ಪಿನ್ ಮತ್ತು ಲೆಗ್ ಬ್ರೇಕ್ ಬೌಲರ್ ಆಗಿರುವ ಅವರು ತಂಡಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ.
2023ರ ಐಪಿಎಲ್‌ನಲ್ಲಿ ದುಬಾರಿ ಸಂಭಾವನೆ ಪಡೆಯುವ ಆಟಗಾರ ಸ್ಯಾಮ್ ಕರನ್ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದು, ಮೊದಲನೇ ಪಂದ್ಯದಲ್ಲಿ ಆಡಲಿದ್ದಾರೆ. ಲಿವಿಂಗ್‌ಸ್ಟೋನ್ ಹೊರತುಪಡಿಸಿ, ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಕೂಡ ಮೊದಲನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಎರಡನೇ ಪಂದ್ಯಕ್ಕೆ ಅವರು ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.