PBKS vs KKR Preview: ಮೊಹಾಲಿಯಲ್ಲಿ ಗೆಲುವಿನ ಮಾಲೆ ಯಾರಿಗೆ? ಪ್ಲೇಯಿಂಗ್ 11, ಪಿಚ್, ಹವಾಮಾನ ವರದಿ
ಇಂಡಿಯನ್ ಪ್ರೀಮಿಯರ್ ಲೀಗ್ 2023ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿವೆ. ಕಳೆದ ಬಾರಿಗಿಂತ ಎರಡೂ ತಂಡಗಳಲ್ಲಿ ಪ್ರಮುಖ ಬದಲಾವಣೆ ಮಾಡುವ ಮೂಲಕ, ತಂಡದ ಬಲವನ್ನು ಹೆಚ್ಚಿಸಿಕೊಂಡಿವೆ. ಎರಡೂ ತಂಡಗಳಿಗೆ ಹೊಸ ನಾಯಕರ ನೇಮಕವಾಗಿರುವುದು ವಿಶೇಷವಾಗಿದೆ. ತಮ್ಮ ಮೊದಲ ಪಂದ್ಯವನ್ನು ಗೆಲ್ಲಲು ಎರಡೂ ತಂಡಗಳು ರಣತಂತ್ರ ರೂಪಿಸಿವೆ.
ಏಪ್ರಿಲ್ 1ರಂದು ಶನಿವಾರ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಬಿಂದ್ರಾ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭವಾಗಲಿದೆ. ಪಂಜಾಬ್ ಕಿಂಗ್ಸ್ ತಂಡಕ್ಕೆ ಶಿಖರ್ ಧವನ್ ನಾಯಕರಾಗಿ ಆಯ್ಕೆಯಾಗಿದ್ದರೆ, ಶ್ರೇಯಸ್ ಅಯ್ಯರ್ ಐಪಿಎಲ್‌ನಿಂದ ಹೊರಗುಳಿದ ಬಳಿಕ ನಿತೀಶ್ ರಾಣಾ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

ಕಳೆದ ಆವೃತ್ತಿಯಲ್ಲಿ ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದವರು. ಪಂಜಾಬ್ ಕಿಂಗ್ಸ್ ತಂಡ ಆಡಿದ 14 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಗೆದ್ದು, 7 ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ 14 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಕೊಲ್ಕತ್ತಾ ನೈಟ್ ರೈಡರ್ಸ್ 6 ಪಂದ್ಯಗಳಲ್ಲಿ ಗೆದ್ದು ಉಳಿದ 8 ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ 12 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿ ಅಭಿಯಾನವನ್ನು ಕೊನೆಗೊಳಿಸಿತ್ತು.
ಧವನ್ ಪಡೆಗೆ ಶಾಕ್ ಕೊಡ್ತಾರ ಕೆಕೆಆರ್
ಐಪಿಎಲ್‌ನಲ್ಲಿ ಎರಡೂ ತಂಡಗಳು ಇದುವರೆಗೆ 30 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಕೆಕೆಆರ್ 20 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಪಂಜಾಬ್ ಕಿಂಗ್ಸ್ 10 ಪಂದ್ಯಗಳಲ್ಲಿ ಮಾತ್ರ ಜಯ ಗಳಿಸಿದೆ. ಕಳೆದ ಆವೃತ್ತಿಯಲ್ಲಿ ಒಂದು ಬಾರಿ ಕೆಕೆಆರ್ ಮತ್ತು ಪಂಜಾಬ್ ಮುಖಾಮುಖಿಯಾಗಿದ್ದವು, ಈ ಪಂದ್ಯದಲ್ಲಿ ಕೆಕೆಆರ್ 6 ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಬಾರಿ ಪಂಜಾಬ್ ಕಿಂಗ್ಸ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಪ್ರಮುಖ ಆಟಗಾರರು ಅಲಭ್ಯ
ಪ್ರಮುಖ ಆಟಗಾರ ಜಾನಿ ಬೈರ್ ಸ್ಟೋವ್ ಐಪಿಎಲ್‌ನಿಂದ ಹೊರಬಿದ್ದಿರುವುದು ಪಂಜಾಬ್ ಕಿಂಗ್ಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.ಅವರ ಬದಲಾಗಿ ಆಸ್ಟ್ರೇಲಿಯಾದ ಮ್ಯಾಥ್ಯೂ ಶಾರ್ಟ್ ಆಯ್ಕೆಯಾಗಿದ್ದಾರೆ. ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಕಗಿಸೊ ರಬಾಡ ಮೊದಲನೇ ಪಂದ್ಯಕ್ಕೆ ಅಲಭ್ಯರಾಗಿರುವುದು ಧವನ್‌ಗೆ ತಲೆನೋವು ತಂದಿದೆ. ಐಪಿಎಲ್‌ನ ದುಬಾರಿ ಆಟಗಾರ ಸ್ಯಾಮ್ ಕರನ್ ತಂಡವನ್ನು ಸೇರಿಕೊಂಡಿದ್ದು, ಮೊದಲನೇ ಪಂದ್ಯಕ್ಕೆ ಸಜ್ಜಾಗಿದ್ದಾರೆ.
ಕೆಕೆಆರ್ ತಂಡಕ್ಕೆ ಕೂಡ ಹಲವು ಆಟಗಾರರ ಅಲಭ್ಯತೆ ಕಾಡುತ್ತಿದೆ. ನಾಯಕ ಶ್ರೇಯಸ್ ಅಯ್ಯರ್ ಹೊರಬಿದ್ದಿರುವುದು ತಂಡಕ್ಕೆ ದೊಡ್ಡ ಹೊಡೆತವಾದರೆ, ಪ್ರಮುಖ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಮತ್ತು ಸ್ಫೋಟಕ ಬ್ಯಾಟರ್ ಲಿಟ್ಟನ್ ದಾಸ್ ಏಪ್ರಿಲ್ 8ರ ನಂತರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಸ್ಫೋಟಕ ಬ್ಯಾಟರ್ ರೆಹಮಾನುಲ್ಲಾ ಗುರ್ಬಾಜ್ ತಂಡವನ್ನು ಸೇರಿಕೊಂಡಿದ್ದು, ಮೊದಲ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ.

ಪಿಚ್ ವರದಿ, ಸಂಭಾವ್ಯ ಆಡುವ ಬಳಗ
ಮೊಹಾಲಿಯಲ್ಲಿ ಈ ಪಂದ್ಯ ನಡೆಯುತ್ತಿರುವುದರಿಂದ ಬ್ಯಾಟರ್ ಗಳಿಗೆ ಲಾಭವಾಗಲಿದೆ. ಚಿಕ್ಕ ಬೌಂಡರಿ, ಬೌನ್ಸಿ ಪಿಚ್‌ನಲ್ಲಿ ಬೌಲರ್ ಗಳು ಕಷ್ಟಪಡಬೇಕಾಗುತ್ತದೆ. ಎರಡೂ ತಂಡಗಳಲ್ಲಿ ಉತ್ತಮ ಬ್ಯಾಟಿಂಗ್ ಪಡೆ ಇದ್ದು ಹೈ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷೆ ಮಾಡಬಹುದು.
ಉಭಯ ತಂಡಗಳ ಆಡುವ ಬಳಗ
ಕೆಕೆಆರ್ : ನಿತೀಶ್ ರಾಣಾ (ನಾಯಕ), ವೆಂಕಟೇಶ್ ಅಯ್ಯರ್, ರೆಹ್ಮನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ರಿಂಕು ಸಿಂಗ್, ಆಂಡ್ರೆ ರಸೆಲ್, ಮಂದೀಪ್ ಸಿಂಗ್, ಶಾರ್ದುಲ್ ಠಾಕೂರ್, ಸುನಿಲ್ ನರೈನ್, ಉಮೇಶ್ ಯಾದವ್, ಟಿಮ್ ಸೌಥಿ, ವರುಣ್ ಚಕ್ರವರ್ತಿ.
ಇಂಪ್ಯಾಕ್ಟ್ ಪ್ಲೇಯರ್ : ಅಂಕುಲ್ ರಾಯ್, ಎನ್ ಜಗದೀಶನ್, ಸುಯಾಶ್ ಶರ್ಮಾ, ಹರ್ಷಿತ್ ರಾಣಾ
ಪಂಜಾಬ್ ಕಿಂಗ್ಸ್: ಶಿಖರ್ ಧವನ್ (ನಾಯಕ), ಮ್ಯಾಥ್ಯೂ ಶಾರ್ಟ್, ಶಾರೂಖ್ ಖಾನ್, ಜಿತೇಶ್ ಶರ್ಮಾ, ಭಾನುಕಾ ರಾಜಪಕ್ಸ, ಸಿಕಂದರ್ ರಾಜಾ, ಹರ್ಪ್ರೀತ್ ಬ್ರಾರ್, ಸ್ಯಾಮ್ ಕರನ್, ಅರ್ಷದೀಪ್ ಸಿಂಗ್, ರಿಷಿ ಧವನ್, ಆರ್ ಅಂಗದ್ ಬಾವಾ.
ಇಂಪ್ಯಾಕ್ಟ್ ಪ್ಲೇಯರ್ : ಶಿವಂ ಸಿಂಗ್, ಮೋಹಿತ್ ರಾಟೀ, ಹರ್ಪೀತ್ ಸಿಂಗ್ ಭಾಟಿಯಾ, ವಿದ್ವತ್ ಕಾವೇರಪ್ಪ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications