SRH Vs MI Preview : ಹೈದರಾಬಾದ್ ಅಂಗಳದಲ್ಲಿ ಯಾರಾಗ್ತಾರೆ ಸುಲ್ತಾನ? ಪ್ಲೇಯಿಂಗ್ 11, ಪಿಚ್ ವರದಿ
ಐಪಿಎಲ್ 2023ರ ಆವೃತ್ತಿಯ 25ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಅಂಕಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ 8ನೇ ಸ್ಥಾನದಲ್ಲಿದ್ದರೆ, ಸನ್‌ರೈಸರ್ಸ್ ಹೈದರಾಬಾದ 9ನೇ ಸ್ಥಾನದಲ್ಲಿದೆ.
ಎರಡೂ ತಂಡಗಳು ತಾವು ಆಡಿದ ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಉಭಯ ತಂಡಗಳಲ್ಲಿ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವುದರಿಂದ ಮತ್ತೊಂದು ಹೈ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷೆ ಮಾಡಬಹುದು. ತವರಿನಲ್ಲಿ ಆಡಿದ ಕೊನೆಯ ಪಂದ್ಯವನ್ನು ಗೆದ್ದಿರುವ ಸನ್‌ರೈಸರ್ಸ್ ತವರಿನಲ್ಲಿ ಗೆಲುವಿನ ಓಟವನ್ನು ಮುಂದುವರೆಸುವ ನಿರೀಕ್ಷೆಯಲ್ಲಿದೆ.

ಮುಂಬೈ ಇಂಡಿಯನ್ಸ್ ಭಾನುವಾರ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ರೋಹಿತ್ ಶರ್ಮಾ ಫಾರ್ಮ್‌ಗೆ ಮರಳಿರುವುದು ತಂಡಕ್ಕೆ ದೊಡ್ಡ ಶಕ್ತಿಯಾಗಿದೆ. ಇಶಾನ್ ಕಿಶಾನ್ ಕೆಕೆಆರ್ ವಿರುದ್ಧ 25 ಎಸೆತಗಳಲ್ಲಿ 58 ರನ್ ಗಳಿಸಿ ಫಾರ್ಮ್‌ಗೆ ಮರಳಿದ್ದು, ಇದೇ ಪ್ರದರ್ಶನ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ ಕೂಡ ಫಾರ್ಮ್‌ಗೆ ಮರಳಿರುವುದು ತಂಡಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.

ಬೌಲಿಂಗ್‌ನಲ್ಲಿ ಸುಧಾರಣೆ ಕಾಣಬೇಕಿದೆ ಮುಂಬೈ
ಮುಂಬೈ ಇಂಡಿಯನ್ಸ್ ಇನ್ನೂ ಗಲವು ವಿಚಾರಗಳಲ್ಲಿ ಸುಧಾರಣೆ ಕಾಣಬೇಕಿದೆ. ತಂಡದ ಪ್ರಮುಖ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರನ್ನು ಹೊರತುಪಡಿಸಿ ಉಳಿದ ಬೌಲರ್ ಗಳು ನಿರೀಕ್ಷಿತ ಪ್ರದರ್ಶನ ನೀಡಿಲ್ಲ, ಜೋಫ್ರಾ ಆರ್ಚರ್ ಗಾಯದ ಸಮಸ್ಯೆಯಿಂದ ಹೊರಗುಳಿದಿರುವುದು ಬೌಲಿಂಗ್ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್ ಈಗಾಗಲೇ ಪದಾರ್ಪಣಾ ಪಂದ್ಯವನ್ನಾಡಿದ್ದು ಸನ್‌ರೈಸರ್ಸ್ ವಿರುದ್ಧ ಕೂಡ ಆಡುವ ಸಾಧ್ಯತೆ ಇದೆ. ಹೈದರಾಬಾದ್ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ಬೌಲರ್ ಗಳು ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ.
ಆತ್ಮವಿಶ್ವಾಸ ಹೆಚ್ಚಿಸಿದ ಹ್ಯಾರಿ ಬ್ರೂಕ್ ಶತಕ
ಸನ್‌ರೈಸರ್ಸ್ ಹೈದರಾಬಾದ್ ಮೊದಲ ಎರಡು ಪಂದ್ಯಗಳನ್ನು ಸೋತ ಬಳಿಕ ನಂತರ ಎರಡೂ ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ತವರಿನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದ ನಂತರ ಕೋಲ್ಕತ್ತಾದಲ್ಲಿ ಕೆಕೆಆರ್ ವಿರುದ್ಧ 23 ರನ್‌ಗಳಿಂದ ಗೆಲುವು ಸಾಧಿಸಿತ್ತು. ಕೆಕೆಆರ್ ವಿರುದ್ಧ ಹ್ಯಾರಿ ಬ್ರೂಕ್ ಶತಕ ಬಾರಿಸಿ ಮಿಂಚಿದರು. ಈ ಮೂಲಕ ಈ ಆವೃತ್ತಿಯಲ್ಲಿ ಮೊದಲ ಶತಕ ದಾಖಲಿಸಿದ ಬ್ಯಾಟರ್ ಎನಿಸಿಕೊಂಡರು.

ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಅಭಿಷೇಕ್ ಶರ್ಮಾ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದರೆ, ಮಯಾಂಕ್ ಮಾರ್ಕಂಡೆ ಮತ್ತು ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮುಂಬೈ ವಿರುದ್ಧ ಗೆದ್ದು ತವರಿನಲ್ಲಿ ಗೆಲುವಿನ ಓಟ ಮುಂದುವರೆಸುವ ವಿಶ್ವಾಸದಲ್ಲಿದೆ.
ಪಿಚ್ ವರದಿ ಮತ್ತು ಸಂಭಾವ್ಯ ಆಡುವ ಬಳಗ
ರಾಜೀವ್ ಗಾಂಧಿ ಕ್ರೀಡಾಂಗಣ ಸಾಮಾನ್ಯವಾಗಿ ಬ್ಯಾಟಿಂಗ್‌ಗೆ ನೆರವಾಗುತ್ತದೆ. ಆದರೆ ಕಳೆದ ಪಂದ್ಯದಲ್ಲಿ ಮಯಾಂಕ್ ಮಾರ್ಕಂಡೆ ಪಂಜಾಬ್ ವಿರುದ್ಧ 4 ವಿಕೆಟ್ ಪಡೆದುಕೊಂಡಿದ್ದು, ಸ್ಪಿನ್‌ಗೆ ನೆರವು ನೀಡುವ ಸಾಧ್ಯತೆ ಇದೆ. ಮಂಗಳವಾರ ನಡೆಯುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡ 180-190 ರನ್ ಕಲೆಹಾಕಿದರೆ ಡಿಫೆಂಡ್ ಮಾಡುವ ಸಾಧ್ಯತೆ ಇದೆ.
ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ಆಡುವ ಬಳಗ
ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್ (ನಾಯಕ), ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಉಮ್ರಾನ್ ಮಲಿಕ್, ಟಿ ನಟರಾಜನ್.
ಮುಂಬೈ ಇಂಡಿಯನ್ಸ್ ಸಂಭಾವ್ಯ ಆಡುವ ಬಳಗ
ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಟಿಮ್ ಡೇವಿಡ್, ನೆಹಾಲ್ ವಧೇರಾ, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಡುವಾನ್ ಜಾನ್ಸೆನ್, ರಿಲೆ ಮೆರೆಡಿತ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications