ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯಲ್ಲಿ ಭಾನುವಾರ 41ನೇ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಸಿಎಸ್‌ಕೆ ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಿದ ಬಳಿಕ ಕಳೆದ ಪಂದ್ಯದಲ್ಲಿ ಆರ್‌ಆರ್ ವಿರುದ್ಧ ಸೋಲು ಕಂಡಿದೆ. ಹೀಗಾಗಿ ಅಂಕಪಟ್ಟೊಯಲ್ಲಿ ಎಸ್‌ಕೆ ತಂಡ 4 ನೇ ಸ್ಥಾನಕ್ಕೆ ಕುಸಿದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಈವರೆಗೆ 8 ಪಂದ್ಯಗಳನ್ನು ಆಡಿದ್ದು ಈ ಪೈಕಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 10 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ.
ಇನ್ನು ಪಂಜಾಬ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ ಪ್ರಸ್ತುತ ಮಧ್ಯದಲ್ಲಿದೆ. ಆಡಿರುವ 8 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡ 4 ಗೆಲುವು ಹಾಗೂ 4 ಸೋಲು ಕಂಡಿದೆ. ಹೀಗಾಗಿ 8 ಅಂಕಗಳು ಪಿಬಿಕೆಎಸ್ ಖಾತೆಯಲ್ಲಿದ್ದು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಸಿಎಸ್‌ಕೆ ವಿರುದ್ಧ ಈ ಪಂದ್ಯ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದು ಎಲ್‌ಎಸ್‌ಜಿ ವಿರುದ್ಧ ಅನುಭವಿಸಿದ ಭಾರೀ ಹಿನ್ನಡೆಯನ್ನು ಮರೆಯಬೇಕಾದರೆ ಸಿಎಸ್‌ಕೆ ವಿರುದ್ಧ ಗೆಲುವು ತಂಡಕ್ಕೆ ಅನಿವಾರ್ಯವೂ ಹೌದು.

ಪಂದ್ಯದ ಮಾಹಿತಿ ಹಾಗೂ ನೇರಪ್ರಸಾರದ ವಿವರ
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ವಿರುದ್ಧದ ಈ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಏಪ್ರಿಲ್ 30 ಭಾನುವಾರ ಮಧ್ಯಾಹ್ನ ಆಯೋಜನೆಯಾಗಲಿದೆ. ಮಧ್ಯಾಹ್ನ 3:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 3 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪಂದ್ಯದ ನೇರಪ್ರಸಾರ ಮಾಡಿದರೆ ಜಿಯೋ ಸಿನಿಮಾದಲ್ಲಿ ಲೈವ್‌ಸ್ಟ್ರೀಮಿಂಗ್ ಮೂಲಕ ವೀಕ್ಷಿಸುವ ಅವಕಾಶವಿದೆ.
ಪಿಚ್ ರಿಪೋರ್ಟ್ ಹಾಗೂ ಹವಾಮಾನ ವರದಿ
ಎಂಎ ಚಿದಂಬರಂ ಕ್ರೀಡಾಂಗಣದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದ ಮಧ್ಯೆ ಸಮಾನ ಹೋರಾಟಕ್ಕೆ ಅವಕಾಶ ಮಾಡಿಕೊಡುವ ಪಿಚ್ ಆಗಿದೆ. ಹೀಗಾಘಿ ಈ ಪಂದ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದ ನಡುವಿನ ಪೈಪೋಟಿಯ ಪಂದ್ಯವಾಗಿರುವ ನಿರೀಕ್ಷೆಯಿದೆ. ಈ ಪಿಚ್‌ನಲ್ಲಿ ಆರಂಭದಲ್ಲಿ ಬ್ಯಾಟರ್‌ಗಳು ಎಚ್ಚರಿಕೆಯ ಬ್ಯಾಟಿಂಗ್ ನಡೆಸುವ ಅಗತ್ಯವಿದೆ. ಇನ್ನು ಇಲ್ಲಿ ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಲ್ಲಿನ ಸರಾಸರಿ ಸ್ಕೋರ್ 140-150 ರನ್ ಆಗಿದೆ.
ಹವಾಮಾನ ವರದಿ: ಪಂದ್ಯದ ದಿನ ಮಳೆಯಾಗುವ ಸಾಧ್ಯತೆಯಿಲ್ಲ. ಇನ್ನು ಪಂದ್ಯದ ಸಂದರ್ಭದಲ್ಲಿ 28-33 ಡಿಗ್ರಿ ಮಧ್ಯೆ ಉಷ್ಣಾಂಶವಿರುವ ನಿರೀಕ್ಷೆಯಿದೆ.
ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ಆಡುವ ಬಳಗ: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ಮಥೀಶ ಪತಿರಾನ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಆಕಾಶ್ ಸಿಂಗ್
ಪಂಜಾಬ್ ಕಿಂಗ್ಸ್ ಸಂಭಾವ್ಯ ಆಡುವ ಬಳಗ: ಶಿಖರ್ ಧವನ್ (ನಾಯಕ), ಅಥರ್ವ ತೈಡೆ, ಸಿಕಂದರ್ ರಜಾ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್, ಕಗಿಸೊ ರಬಾಡ