ಎಂಎಸ್ ಧೋನಿ ಕಸವನ್ನೂ ನಿಧಿಯನ್ನಾಗಿಸಬಲ್ಲ ಜಾದೂಗಾರ: ಮ್ಯಾಥ್ಯೂ ಹೇಡನ್
ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಮ್ಯಾಥ್ಯೂ ಹೇಡನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಎಂಎಸ್ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ ಹಂತಕ್ಕೇರಿದ್ದು ಈ ಹಿನ್ನೆಲೆಯಲ್ಲಿ ಧೋನಿ ನಾಯಕತ್ವದ ಬಗ್ಗೆ ಮ್ಯಾಥ್ಯೂ ಹೇಡನ್ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಮ್ಯಾಥ್ಯೂ ಹೇಡನ್ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಅವರನ್ನು ಜಾದೂಗಾರ ಎಂದು ಬಣ್ಣಿಸಿದ್ದು ಕಸವನ್ನು ಕೂಡ ನಿಧಿಯನ್ನಾಗಿಸಬಲ್ಲ ಮಾಯಾವಿ ಎಂದು ಕೊಂಡಾಡಿದ್ದಾರೆ. ಸಿಎಸ್‌ಕೆ ತಂಡದ ಯಶಸ್ಸಿಗೆ ಭಾರತದ ಮಾಜಿ ನಾಯಕ ಅಪ್ರತಿಮ ಕೊಡುಗೆ ನೀಡಿದ್ದು ಫ್ರಾಂಚೈಸಿಯೊಂದಿಗೆ ಅವರ ಆಟದ ಭವಿಷ್ಯ ಅಪ್ರಸ್ತುತ ಎಂದಿದ್ದಾರೆ ಮ್ಯಾಥ್ಯೂ ಹೇಡನ್.

ಎಂಎಸ್ ಧೋನಿ ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ 10ನೇ ಬಾರಿಗೆ ಐಪಿಎಲ್ ಫೈನಲ್‌ಗೆ ಪ್ರವೇಶಿಸಿದೆ. ಟೂರ್ನಿಯ ಆರಂಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ವಿಭಾಗ ದುರ್ಬಲದಂತೆ ಕಾಣಿಸುತ್ತಿತ್ತು. ಆದರೆ ಧೋನಿ ಮಾರ್ಗದರ್ಶನದಲ್ಲಿ ಯುವ ಆಟಗಾರರು ಅದ್ಭುತ ಬೌಲಿಂಗ್ ದಾಳಿ ನಡೆಸುತ್ತಿದ್ದು ಯಶಸ್ಸು ಸಾಧಿಸಿದ್ದಾರೆ ಎಂದಿದ್ದಾರೆ ಮ್ಯಾಥ್ಯೂ ಹೇಡನ್.
"ಎಂಎಸ್ ಓರ್ವ ಜಾದೂಗಾರ. ಆತ ಬೇರೆಯವರಿಂದ ಕಸವನ್ನು ಪಡೆದುಕೊಂಡು ಅದನ್ನು ನಿಧಿಯನ್ನಾಗಿ ಪರಿವರ್ತಿಸುತ್ತಾರೆ. ಆತನೋರ್ವ ಅತ್ಯಂತ ಕೌಶಲ್ಯಯುತ ಹಾಗೂ ಸಕಾರಾತ್ಮಕ ಮನೋಭಾವದ ನಾಯಕ" ಎಂದು ಎಂಎಸ್ ಧೋನಿ ಬಗ್ಗೆ ಮ್ಯಾಥ್ಯೂ ಹೇಡನ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಹೇಡನ್ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಧೋನಿ ನಾಯಕತ್ವದಲ್ಲಿ ಆಡಿದ ಅನುಭವ ಹೊಂದಿದ್ದಾರೆ ಎಂಬುದು ಗಮನಾರ್ಹ ಅಂಶ.
ಯುನಿವರ್ಸಿಟಿ ಆಫ್ ಟೆಕ್ನಾಲಜಿ ಸಿಡ್ನಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮ್ಯಾಥ್ಯೂ ಹೇಡನ್ ಈ ವಿಶೇಷ ಮಾತುಗಳನ್ನಾಡಿದ್ದಾರೆ. "ಮುಂದಿನ ಐಪಿಎಲ್‌ನಲ್ಲಿ ಎಂಎಸ್ ಧೋನಿ ಆಡುತ್ತಾರೋ ಇಲ್ಲವೋ ಎಂಬುದು ಈಗ ಅಪ್ರಸ್ತುತ. ವೈಯಕ್ತಿತಕವಾಗಿ ನನಗೆ ಆತ ಮುಂದಿನ ಆವೃತ್ತಿಯಲ್ಲಿ ಆಡುತ್ತಾರೆ ಎನಿಸುವುದಿಲ್ಲ. ಆದರೆ ಆತ ಎಂಎಸ್ ಧೋನಿ" ಎಂದು ಮಾರ್ಮಿಕವಾಗಿ ಹೇಳಿಕೆ ನೀಡಿದ್ದಾರೆ ಮ್ಯಾಥ್ಯೂ ಹೇಡನ್.
ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಎ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು ಟೂರ್ನಿಯಲ್ಲಿ ಮೊದಲ ಬಾರಿಗೆ ಪ್ಲೇಆಫ್‌ಗೆ ಪ್ರವೇಶಿಸಲು ವಿಫಲವಾಗಿತ್ತು. ಆದರೆ ಈ ಬಾರಿ ಮತ್ತೆ ಅದ್ಭುತ ಪ್ರದರ್ಶನ ನೀಡಿರುವ ಸಿಎಸ್‌ಕೆ ತಂಡ ಫೈನಲ್‌ಗೆ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ. ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್‌ಗೆ ನೇರವಾಗಿ ಪ್ರವೇಶ ಗಿಟ್ಟಿಸಿಕೊಂಡಿತ್ತು.
ಇನ್ನು ಶುಕ್ರವಾರ ಎರಡನೇ ಕ್ವಾಲಿಫಯರ್ ಪಂದ್ಯ ನಡೆಯಲಿದ್ದು ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ಗೆ ಪ್ರವೇಶಿಲಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಪ್ರಶಸ್ತಿಗಾಗಿ ಸೆಣೆಸಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications