ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಮುಂಬೈ ಇಂಡಿಯ್ಸ್ ತಂಡ ಅಮೋಘ ಗೆಲುವು ಸಾಧಿಸಿದೆ. ಗೆಲ್ಲಲೇ ಬೇಕಿದ್ದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು ಇನ್ನೂ ಎರಡು ಓವರ್‌ಗಳು ಬಾಕಿಯಿರುವಂತೆಯೇ ಗೆಲುವು ಸಾಧಿಸಿದೆ. ಮುಂಬೈ ಇಂಡಿಯನ್ಸ್ ಪರವಾಗಿ ಕ್ಯಾಮರೂನ್ ಗ್ರೀನ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದು ಶತಕ ಸಿಡಿಸಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ನೀಡಿದ 200 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಆರಂಭಿಕ ಆಟಗಾರ ಇಶಾನ್ ಕಿಶನ್ ಅವರನ್ನು ಅಗ್ಗಕ್ಕೆ ಕಳೆದುಕೊಂಡರು. ಆದರೆ ನಾಯಕ ರೋಹಿತ್ ಶರ್ಮಾ ಹಾಗೂ ಕ್ಯಾಮರೂನ್ ಗ್ರೀನ್ 128 ರನ್‌ಗಳ ಅಮೋಘ ಜೊತೆಯಾಟ ನೀಡಿದರು. ಕಳೆದ ಕೆಲ ಪಂದ್ಯಗಳಲ್ಲಿ ರನ್‌ಗಳಿಸಲು ವಿಫಲವಾಗಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ 37 ಎಸೆತಗಳಲ್ಲಿ 56 ರನ್ ಬಾರಿಸಿ ವಿಕೆಟ್ ಕಳೆದಕೊಂಡರು.

ಅದಾದ ಬಳಿಕ ಸೂರ್ಯಕುಮಾರ್ ಯಾದವ್ ಕ್ಯಾಮರೂನ್ ಗ್ರೀನ್‌ಗೆ ಜೊತೆಯಾದರು. ಕ್ಯಾಮರೂನ್ ಗ್ರೀನ್ ಈ ಪಂದ್ಯದಲ್ಲಿ 47 ಎಸೆತಗಳಲ್ಲಿ ಶತಕ ಬಾರಿಸಿದರೆ ಸೂರ್ಯಕುಮಾರ್ ಯಾದವ್ 16 ಎಸೆತಗಳಲ್ಲಿ 25 ರನ್‌ಗಳಿಸಿ ಅಜೇಯವಾಗುಳಿದರು. ಈ ಮೂಲಕ ಈ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 18 ಓವರ್‌ಗಳಲ್ಲಿ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಅದ್ಭುತ ಆರಂಭ ದೊರೆಯಿತು. ವಿವ್ರಾಂತ್ ಶರ್ಮಾ ಹಾಗೂ ಮಯಾಂಕ್ ಅಗರ್ವಾಲ್ ಜೋಡಿ ಮೊದಲ ವಿಕೆಟ್‌ಗೆ ಭರ್ಜರಿ 140 ರನ್‌ಗಳನ್ನು ಕಲೆಹಾಕಿದರು. ವಿವ್ರಾಂತ್ ಶರ್ಮಾ ಈ ಪಂದ್ಯದಲ್ಲಿ 47 ಎಸೆತಗಳಲ್ಲಿ 69 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ಮಯಾಂಕ್ ಅಗರ್ವಾಲ್ 46 ಎಸೆತಗಳಲ್ಲಿ 83 ರನ್‌ಗಳ ಕೊಡುಗೆ ನಿಡಿದರು.
ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬಾರಲಿಲ್ಲ. ಆದರೆ ನಿಗದಿತ 20 ಓವರ್‌ಗಳ ಅಂತ್ಯಕ್ಕೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಭರ್ತಿ 200 ರನ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಕಠಿಣ ಗುರಿಯನ್ನು ಮುಂದಿಟ್ಟಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಆಕಾಶ್ ಮಾಧ್ವಲ್ 4 ವಿಕೆಟ್ ಪಡೆದುಕೊಂಡಿದ್ದಾರೆ.
ಇತ್ತಂಡಗಳ ಆಡುವ ಬಳಗ
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್‌ಡಾರ್ಫ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್
ಸನ್‌ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ವಿವ್ರಾಂತ್ ಶರ್ಮಾ, ಐಡೆನ್ ಮಾರ್ಕ್ರಾಮ್(ನಾಯಕ), ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ಹ್ಯಾರಿ ಬ್ರೂಕ್, ನಿತೀಶ್ ರೆಡ್ಡಿ, ಗ್ಲೆನ್ ಫಿಲಿಪ್ಸ್, ಸನ್ವಿರ್ ಸಿಂಗ್, ಮಯಾಂಕ್ ದಾಗರ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್