Mohammed Siraj: ಆರ್‌ಸಿಬಿಗೆ ಆನೆಬಲ ತಂದುಕೊಟ್ಟ ಸಿರಾಜ್: ಯಶಸ್ಸಿಗೆ "ಆ ದಿನಗಳ" ಪರಿಶ್ರಮ ಕಾರಣ ಎಂದ ವೇಗಿ!
ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3ನೇ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಆರ್‌ಸಿಬಿ ತಂಡ ಅರ್ಹ ಗೆಲುವು ಸಂಪಾದಿಸಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಪರವಾಗಿ ಮತ್ತೊಮ್ಮೆ ಮಿಂಚಿದ್ದು ವೇಗದ ಬೌಲರ್ ಮೊಹಮ್ಮದ್ ಸಿರಾಜ್. ಟೂರ್ನಿ ಈವರೆಗಿನ ಎಲ್ಲಾ ಪಂದ್ಯಗಳಲ್ಲಿಯೂ ಅಮೋಘ ಪ್ರದರ್ಶನ ನೀಡಿರುವ ಸಿರಾಜ್ ಈ ಪಂದ್ಯದಲ್ಲಿ 4 ವಿಕೆಟ್ ಕಿತ್ತು ಅಬ್ಬರಿಸಿದರು.
ಇನ್ನು ಈ ಪಂದ್ಯದಲ್ಲಿ ನೀಡಿದ ಭರ್ಜರಿ ಪ್ರದರ್ಶನದಿಂದಾಗಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದುಕೊಂಡ ಬೌಲರ್‌ಗಳ ಪಟ್ಟಿಯಲ್ಲಿ ಸಿರಾಜ್ ಅಗ್ರಸ್ಥಾನವನ್ನು ಪಡೆದುಕೊಂಡಿದ್ದು ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಬಳಿಕ ಮಾತನಾಡಿರುವ ಅವರು ಈ ಯಶಸ್ಸಿಗಾಗಿ ನಡೆಸಿದ ಪರಿಶ್ರಮದ ಬಗ್ಗೆ ಬೆಳಕುಚೆಲ್ಲಿದ್ದು ಲಾಕ್‌ಡೌನ್‌ನಲ್ಲಿ ನಡೆಸಿದ ಅಭ್ಯಾಸ ಈಗ ಕೆಲಸಕ್ಕೆ ಬಂದಿದೆ ಎಂದಿದ್ದಾರೆ.

"ಲಾಕ್‌ಡೌನ್ ನನಗೆ ಬಹಳ ಮುಖ್ಯವಾಗಿತ್ತು. ಯಾಕೆಂದರೆ ಅದಕ್ಕೂ ಮುನ್ನ ನಾನು ಸಾಕಷ್ಟು ಬೌಂಡರಿಗಳನ್ನು ಬಾರಿಸಿಕೊಳ್ಳುತ್ತಿದ್ದೆ. ಆ ಅವಧಿಯಲ್ಲಿ ನಾನು ನನ್ನ ಯೋಜನೆಗಳ ಮೇಲೆ, ಫಿಟ್‌ನೆಸ್ ಮೇಲೆ ಹಾಗೂ ಬೌಲಿಂಗ್ ಮೇಲೆ ಪರಿಶ್ರಮವನ್ನು ಹಾಕಿದ್ದೆ. ಅಂದಿನ ಪರಿಶ್ರಮ ಈಗ ನನಗೆ ನೆರವಾಗುತ್ತಿದೆ" ಎಂದಿದ್ದಾರೆ ವೇಗಿ ಮೊಹಮ್ಮದ್ ಸಿರಾಜ್.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ನಾಲ್ಕು ವಿಕೆಟ್ ಪಡೆಯುವುದರ ಜೊತೆಗೆ ಫೀಲ್ಡಿಂಗ್‌ನಲ್ಲಿಯೂ ಸಿರಾಜ್ ಗಮನಸೆಳೆದರು. ಪಂದ್ಯದ ನಿರ್ಣಾಯಕ ಹಂತದಲ್ಲಿ ಹರ್‌ಪ್ರೀತ್ ಸಿಂಗ್ ಅವರನ್ನು ನೇರವಾಗಿ ವಿಕೆಟ್‌ಗೆ ಚೆಂಡೆಸೆಯುವ ಮೂಲಕ ರನೌಟ್ ಮಾಡಿದ್ದರು. ಈ ಬಗ್ಗೆ ಮಾತನಾಡಿದ ಸಿರಾಜ್ "ನಾನು ಎಲ್ಲಾ ವಿಭಾಗದಲ್ಲಿಯೂ ಪ್ರಗತಿ ಸಾಧಿಸುವುದಕ್ಕೆ ಬಯಸುತ್ತೇನೆ. ಯಾಕೆಂದರೆ ಎಲ್ಲಾ ವಿಭಾಗದಲ್ಲಿಯೂ ನಾವು ನೀಡುವ ಕೊಡುಗೆ ಎಷ್ಟು ನಿರ್ಣಾಯಕ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ. ನನ್ನನ್ನು ಯಾವಾಗಲೂ ಉತ್ತಮ ಫೀಲ್ಡರ್ ಎಂದುಕೊಳ್ಳುತ್ತೇನೆ. ಮಿಸ್‌ಫೀಲ್ಡ್‌ಗಳು ನಡೆಯಬಹುದು ಆದರೆ ಫೀಲ್ಡಿಂಗನ್ನು ನಾನು ಬಹಳ ಗಂಭೀರವಾಗಿ ಪರಿಗಣಿಸುತ್ತೇನೆ" ಎಂದಿದ್ದಾರೆ.
ಇನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಸಾಧಿಸಿದ ಈ ಗೆಲುವು ಆರ್‌ಸಿಬಿ ತಂಡವನ್ನು ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನಕ್ಕೇರಿಸಿದೆ. 8ನೇ ಸ್ಥಾನದಲ್ಲಿದ್ದ ಆರ್‌ಸಿಬಿ ತಂಡ ಈ ಗೆಲುವಿನ ಬಳಿಕ ಮೂರು ಗೆಲುವು ಹಾಗೂ ಮೂರು ಸೋಲಿನೊಂದಿಗೆ 6 ಅಂಕಗಳನ್ನು ಪಡೆದುಕೊಂಡಿದೆ. ಹೀಗಾಗಿ 5ನೇ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಬ್ಯಾಟಿಂಗ್‌ನಲ್ಲಿ ಮುಂದುವರಿದ ಕೊಹ್ಲಿ-ಫಾಫ್ ಅಬ್ಬರ
ಇನ್ನು ಆರ್‌ಸಿಬಿ ತಂಡದ ಪ್ರಮುಖ ಬಲವೆಂದರೆ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ವಿಭಾಗ. ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಈ ಬಾರಿಯ ಐಪಿಎಲ್‌ನ ಬಹುತೇಕ ಎಲ್ಲಾ ಪಂದ್ಯಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿಯೂ ಅಂಥಾದ್ದೇ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಕೊಹ್ಲಿ ಫಾಫ್ ಜೋಡಿ ಪವರ್‌ಪ್ಲೇ ಅವಧಿಯಲ್ಲಿ ಎದುರಾಳಿಗಳಿಗೆ ಯಾವುದೇ ಅವಕಾಶ ನೀಡದೆ ವೇಗವಾಗಿ ರನ್‌ಗಳಿಸಿದ್ದು ತಂಡಕ್ಕೆ ದೊಡ್ಡ ಬಲ ತುಂಬಿತ್ತು. ಈ ಜೋಡಿ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ನೀಡಿದೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಬೆಂಗಳೂರಿನಲ್ಲಿಯೇ ಆಡಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡಕ್ಕೆ ಸವಾಲೊಡ್ಡಲು ಆಗಮಿಸುತ್ತಿರುವ ತಂಡ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್. ಈ ಬಾರಿಯ ಟೂರ್ನಿಯಲ್ಲಿ ಆರ್‌ಆರ್ ತಂಡ ಅಮೋಘ ಪ್ರದರ್ಶನ ನೀಡುತ್ತಿದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ಕೊನೆಯ ಪಂದ್ಯದಲ್ಲಿ ಆರ್‌ಆರ್ ತಂಡ ಎಲ್‌ಎಸ್‌ಜಿ ವಿರುದ್ಧ ಸೋಲು ಅನುಭವಿಸಿದ್ದು ಸಣ್ಣ ಹಿನ್ನಡೆಗೆ ಒಳಗಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications