
ಇಂಡಿಯನ್ ಪ್ರೀಮಿಯರ್ ಲೀಗ್ ಎಂದರೆ ಹೊಡಿಬಡಿ ಆಟವನ್ನೊಳಗೊಂಡ ಪಂದ್ಯಗಳಿಂದ ಕೂಡಿದ ಕ್ರಿಕೆಟ್ ಟೂರ್ನಮೆಂಟ್. ಈ ಟೂರ್ನಿಯ ಪಂದ್ಯಗಳೆಂದರೆ ರನ್ ಹೊಳೆ ಹರಿಯುವುದು ಕಾಮನ್. ಆರಂಭದಿಂದ ಪಂದ್ಯದ ಅಂತಿಮ ಎಸೆತದವರೆಗೂ ದೊಡ್ಡ ದೊಡ್ಡ ಹೊಡೆತಗಳನ್ನು ಆರಂಭಿಕ ಆಟಗಾರರಿಂದ ಹಿಡಿದು ಬೌಲರ್‌ಗಳವರೆಗೂ ಬಾರಿಸುವುದನ್ನು ಕಾಣಬಹುದಾಗಿದೆ.
ಅದೇ ರೀತಿ ಸದ್ಯ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಗಳಲ್ಲಿಯೂ ಸಹ ರನ್ ಹೊಳೆ ಹರಿದು ಬರುತ್ತಿದೆ. ನಿನ್ನೆ ( ಮೇ 10 ) ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 55 ಪಂದ್ಯಗಳು ಮುಕ್ತಾಯವಾಗಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಕಲೆಹಾಕಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು 168 ರನ್‌ಗಳ ಗುರಿಯನ್ನು ನೀಡಿತ್ತು. ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲಗೊಂಡ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 140 ರನ್ ಕಲೆಹಾಕಿತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 27 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿ ಅಂಕಪಟ್ಟಿಯಲ್ಲಿ 15 ಅಂಕಗಳಿಗೆ ಏರಿಕೆ ಕಾಣುವುದರ ಮೂಲಕ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.
ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ ಎಸ್ ಧೋನಿ ಎಂಟನೇ ಕ್ರಮಾಂಕದಲ್ಲಿ ಕಣಕ್ಕಿಳಿದು 9 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 20 ರನ್ ಗಳಿಸಿದರು. ಎಂ ಎಸ್ ಧೋನಿ 222.22 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದರು.
ಈ ಮೂಲಕ ಮತ್ತೊಂದು ಇನ್ನಿಂಗ್ಸ್‌ನಲ್ಲಿ ಎಂ ಎಸ್ ಧೋನಿ 200ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ ಜತೆಗೆ ಬ್ಯಾಟ್ ಬೀಸಿದರು. ಇದರ ಮೂಲಕ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಟೂರ್ನಿಯಲ್ಲಿ ಅತಿಹೆಚ್ಚು ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಆಟಗಾರ ಎಂಬ ದಾಖಲೆಯನ್ನು ಎಂ ಎಸ್ ಧೋನಿ ಮುಂದುವರಿಸಿದ್ದಾರೆ.
ಇನ್ನು ಎಂ ಎಸ್ ಧೋನಿ ಜತೆಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 200ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಮತ್ತೋರ್ವ ಆಟಗಾರನೆಂದರೆ ಅದು ಗುಜರಾತ್ ಟೈಟನ್ಸ್ ತಂಡದ ರಾಹುಲ್ ತೆವಾಟಿಯಾ. ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂ ಎಸ್ ಧೋನಿ ಹಾಗೂ ರಾಹುಲ್ ತೆವಾಟಿಯಾ ಮಾತ್ರ 200ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡಿದ ಆಟಗಾರರು ಎನಿಸಿಕೊಂಡಿದ್ದಾರೆ.
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂ ಎಸ್ ಧೋನಿ 11 ಪಂದ್ಯಗಳಲ್ಲಿ ಕಣಕ್ಕಿಳಿದು 8 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ಪೈಕಿ ಒಟ್ಟು 96 ರನ್‌ಗಳನ್ನು ಬಾರಿಸಿರುವ ಧೋನಿ 204.26 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.
ರಾಹುಲ್ ತೆವಾಟಿಯಾ ಸಹ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಒಟ್ಟು 11 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 6 ಪಂದ್ಯಗಳಲ್ಲಿ ಮಾತ್ರ ಬ್ಯಾಟಿಂಗ್ ಮಾಡಿದ್ದಾರೆ. ಈ ಪೈಕಿ 63 ರನ್‌ಗಳನ್ನು ಚಚ್ಚಿ 203.23 ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಬೀಸಿದ್ದಾರೆ.