ತವರಿನಲ್ಲಿ ಎಂಎಸ್ ಧೋನಿ ಆಟವನ್ನು ನೋಡಲು ಕಾಯುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ ಆಘಾತ ಎದುರಾಗಿದೆ. ಏಪ್ರಿಲ್ 3ರಂದು ಸೋಮವಾರ ಚೆನ್ನೈನ ಚಿದಂಬರಂ ಅಂಗಳದಲ್ಲಿ ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ. ಇದು ಅಭಿಮಾನಿಗಳಲ್ಲಿ ಆತಂಕವನ್ನುಂಟುಮಾಡಿದೆ.
ಮೂರು ವರ್ಷಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ತವರಿನಲ್ಲಿ ಮೊದಲನೇ ಪಂದ್ಯವನ್ನು ಆಡಲು ಸಜ್ಜಾಗಿದೆ. ಎಂಎಸ್ ಧೋನಿ ಅವರನ್ನು ಸ್ವಾಗತಿಸಲು ಅಭಿಮಾನಿಗಳು ಈಗಾಗಲೇ ಭಾರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಸಿಎಸ್‌ಕೆ ಎಲ್‌ಎಸ್‌ಜಿ ನಡುವಿನ ಪಂದ್ಯದ ಟಿಕೆಟ್ ಮಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. ದಿನವಿಡೀ ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆದಿರುವ ಅಭಿಮಾನಿಗಳು ಧೋನಿ ಆಟವನ್ನು ನೋಡಲು ಕಾಯುತ್ತಿದ್ದಾರೆ.

ಎಂಎಸ್ ಧೋನಿ ಮೊಣಕಾಲು ನೋವಿನಿಂದ ಬಳಲುತ್ತಿರುವುದು ಖಚಿತವಾಗಿದೆ. ಅಭ್ಯಾಸದ ಸಮಯದಲ್ಲೇ ಧೋನಿಗೆ ಮೊಣಕಾಲು ನೋವು ಇರುವುದು ಗೊತ್ತಾಗಿತ್ತು. ಆದರೂ ಅವರು ಗುಜರಾತ್ ಟೈಟನ್ಸ್ ವಿರುದ್ಧದ ಮೊದಲನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಧೋನಿ ಒಂದು ಸಿಕ್ಸರ್ ಮತ್ತು ಬೌಂಡರಿ ಸಿಡಿಸುವ ಮೂಲಕ ಮಿಂಚಿದ್ದರು. ಆದರೆ, ಕೀಪಿಂಗ್ ಮಾಡುವ ವೇಳೇ ಧೋನಿಗೆ ಮೊಣಕಾಲು ನೋವು ಮತ್ತೆ ಕಾಣಿಸಿಕೊಂಡಿತ್ತು.
ಪಂದ್ಯದ ಮುಕ್ತಾಯದ ಹಂತದಲ್ಲಿ ಸಿಎಸ್‌ಕೆ ವೇಗಿ ದೀಪಕ್ ಚಾಹರ್ ಲೆಗ್ ಸೈಡ್‌ನಿಂದ ಚೆಂಡನ್ನು ಬೌಲ್ ಮಾಡಿದರು, ಬ್ಯಾಟರ್ ರಾಹುಲ್ ತೆವಾಟಿಯಾ ಅವರ ಪ್ಯಾಡ್‌ಗಳನ್ನು ತಪ್ಪಿಸಿಕೊಂಡು ಹೋಯಿತು, ಧೋನಿ ಅದ್ಭುತವಾಗಿ ಜಿಗಿಯುವ ಮೂಲಕ ಚೆಂಡನ್ನು ತಡೆದು ಬೌಂಡರಿ ಹೋಗುವುದನ್ನು ತಪ್ಪಿಸಿದರು. ಆದರೆ. ಅದೇ ಕ್ಷಣದಲ್ಲಿ ಎಡಗಾಲಿನ ನೋವಿನಿಂದ ಬಳಲಿದರು. ತಕ್ಷಣವೇ ಮೈದಾನಕ್ಕೆ ಬಂದ ಫಿಸಿಯೋ ಅವರನ್ನು ಪರೀಕ್ಷಿಸಿದರು. ಕೆಲ ಸಮಯದ ಬಳಿಕ ಅವರು ಮತ್ತೆ ಆಟವನ್ನು ಮುಂದುವರೆಸಿದರು.

ಧೋನಿ ಆಡುವ ವಿಶ್ವಾಸವಿದೆ ಎಂದ ಕೋಚ್
ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಧೋನಿಯ ಫಿಟ್‌ನೆಸ್ ಮತ್ತು ಗಾಯದ ಬಗ್ಗೆ ಪ್ರಮುಖ ಮಾಹಿತಿ ನೀಡಿದ್ದಾರೆ. "ಕಳೆದ ಒಂದು ತಿಂಗಳಿನಿಂದ ಮೊಣಕಾಲು ನೋವಿಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪಂದ್ಯದ ವೇಳೆ ಅವರ ಮೊಣಕಾಲಿಗೆ ಗಾಯವಾಗಿಲ್ಲ, ಅದು ಸೆಳೆತವಾಗಿತ್ತು. 15 ವರ್ಷಗಳ ಹಿಂದೆ ಇದ್ದಷ್ಟು ವೇಗವಾಗಿ ಮತ್ತು ಚುರುಕಾಗಿರಲು ಆಗುತ್ತಿಲ್ಲ, ಆದರೆ ಅವರು ಇನ್ನೂ ತಂಡದ ಶ್ರೇಷ್ಠ ನಾಯಕರಾಗಿದ್ದಾರೆ ಮತ್ತು ಬ್ಯಾಟ್‌ನೊಂದಿಗೆ ಸಹ ಅವರು ಮುಖ್ಯ ಪಾತ್ರ ವಹಿಸಲಿದ್ದಾರೆ. ಅವರು ತಮ್ಮ ಮಿತಿಗಳನ್ನು ತಿಳಿದಿದ್ದಾರೆ, ಅವರು ದಂತಕಥೆ" ಎಂದು ಫ್ಲೆಮಿಂಗ್ ಹೇಳಿದರು.

ಮೊದಲ ಜಯದ ಹುಡುಕಾಟದಲ್ಲಿ ಸಿಎಸ್‌ಕೆ
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಉದ್ಘಾಟನಾ ಪಂದ್ಯದಲ್ಲೇ ಸಿಎಸ್‌ಕೆ ತಂಡ ಸೋಲನುಭವಿಸಿದ್ದು ಮುಖಭಂಗ ಅನುಭವಿಸಿದೆ. ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ವಿರುದ್ಧ ಸೋಲುವ ಮೂಲಕ ನಿರಾಸೆ ಅನುಭವಿಸಿತು. ಕಳೆದ ಆವೃತ್ತಿಯಲ್ಲಿ ಗುಜರಾತ್ ವಿರುದ್ಧ ಎರಡೂ ಪಂದ್ಯಗಳನ್ನು ಸೋತಿದ್ದ ಅವರು ಮೂರನೇ ಬಾರಿ ಕೂಡ ಸೋಲನುಭವಿಸಿದೆ.
ಏಪ್ರಿಲ್ 3ರಂದು ಸೋಮವಾರ ಸಂಜೆ 7.30 ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಆಡಲಿದೆ. ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಮೊದಲನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದಿರುವ ಕೆಎಲ್ ರಾಹುಲ್ ಪಡೆ, ಚೆನ್ನೈನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.