IPL 2023: ಕೊಹ್ಲಿ ಕೆಣಕಿದ್ದ ನವೀನ್ ಉಲ್ ಹಕ್‌ಗೆ ಮುಂಬೈ ಆಟಗಾರರ 'ಸ್ವೀಟ್ ಮ್ಯಾಂಗೋ' ಟಾಂಗ್!

ಕಳೆದ ಮಾರ್ಚ್ ತಿಂಗಳ ಅಂತ್ಯದಲ್ಲಿ ಶುರುವಾದ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಹಂತಕ್ಕೆ ತಲುಪಿದ್ದು, ಎರಡನೇ ಕ್ವಾಲಿಫಯರ್ ಹಾಗೂ ಫೈನಲ್ ಪಂದ್ಯಗಳು ಬಾಕಿ ಉಳಿದುಕೊಂಡಿವೆ.
ನಿನ್ನೆ ( ಮೇ 24 ) ಚೆನ್ನೈನ ಎಂ ಎ ಚಿದಂಬರಂ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಜಯ ಸಾಧಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿ ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲ್ಲಲು 183 ರನ್‌ಗಳ ಗುರಿಯನ್ನು ನೀಡಿತ್ತು. ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಲಕ್ನೋ ಸೂಪರ್ ಜೈಂಟ್ಸ್ 16.3 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲ್‌ಔಟ್ ಆಯಿತು. ಈ ಮೂಲಕ ಮುಂಬೈ ಇಂಡಿಯನ್ಸ್ 81 ರನ್‌ಗಳ ಭರ್ಜರಿ ಗೆಲುವನ್ನು ಕಂಡು ಎರಡನೇ ಕ್ವಾಲಿಫಯರ್ ಆಡುವ ಅವಕಾಶವನ್ನು ಪಡೆದುಕೊಂಡಿದೆ.
ಇನ್ನು ಮೊನ್ನೆ ನಡೆದ ಒಂದನೇ ಕ್ವಾಲಿಫಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತ ಗುಜರಾತ್ ಟೈಟನ್ಸ್ ಎರಡನೇ ಆಡಲಿದ್ದು, ನಾಳೆ ( ಮೇ 26 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.
ಇನ್ನು ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಕಾಶ್ ಮಧ್ವಲ್ ಐದು ವಿಕೆಟ್‌ಗಳನ್ನು ಪಡೆದು ಮಿಂಚಿದರೆ, ಲಕ್ನೋ ಸೂಪರ್ ಜೈಂಟ್ಸ್ ಪರ ನವೀನ್ ಉಲ್ ಹಕ್ ನಾಲ್ಕು ವಿಕೆಟ್‌ಗಳನ್ನು ಪಡೆದು ಮಿಂಚಿದರು.
4 ಓವರ್ ಬೌಲಿಂಗ್ ಮಾಡಿದ ನವೀನ್ ಉಲ್ ಹಕ್ 38 ರನ್ ನೀಡಿ 4 ವಿಕೆಟ್‌ಗಳನ್ನು ಪಡೆದರು. ಮುಂಬೈ ಇಂಡಿಯನ್ಸ್ ತಂಡದ ಬಲಿಷ್ಠ ಆಟಗಾರರಾದ ರೋಹಿತ್ ಶರ್ಮಾ, ಕೆಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಅವರ ವಿಕೆಟ್‌ಗಳನ್ನು ನವೀನ್ ಉಲ್ ಹಕ್ ಪಡೆದರು.
ಇನ್ನು ಮೈದಾನದಲ್ಲಿ ಕಿರಿಕ್ ಮಾಡಿಕೊಳ್ಳುವುದರಲ್ಲಿ ಸದಾ ಮುಂದಿರುವ ನವೀನ್ ಉಲ್ ಹಕ್ ನಿನ್ನೆಯ ಪಂದ್ಯದಲ್ಲಿಯೂ ಸಹ ವಿವಾದವನ್ನು ಸೃಷ್ಟಿಸಿಕೊಂಡಿದ್ದಾರೆ. ಮೈದಾನದಲ್ಲಿ ವಿಕೆಟ್ ಪಡೆದುಕೊಂಡ ಬಳಿಕ ಕಿವಿ ಮುಚ್ಚಿಕೊಂಡು ಸೆಲಬ್ರೇಟ್ ಮಾಡಿದ್ದಾರೆ. ಇದು ರೋಹಿತ್ ಶರ್ಮಾ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಹೀಗಾಗಿ ಪಂದ್ಯ ಮುಕ್ತಾಯವಾದ ಬಳಿಕ ಲಕ್ನೋ ಹೀನಾಯವಾದ ಸೋಲನ್ನು ಕಂಡದ್ದನ್ನು ಇಟ್ಟುಕೊಂಡು ಮುಂಬೈ ಇಂಡಿಯನ್ಸ್‌ನ ಕೆಲ ಆಟಗಾರರು ನವೀನ್ ಉಲ್ ಹಕ್ ಟ್ರೋಲ್ ಮಾಡಿದ್ದಾರೆ. ಅದೂ ಸಹ ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಲು ನವೀನ್ ಉಲ್ ಹಕ್ ಬಳಿಸಿದ್ದ ವಿಧಾನವನ್ನೇ ಈ ಆಟಗಾರರು ಬಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಸಂದೀಪ್ ವಾರಿಯರ್ ತನ್ನ ಸಹ ಆಟಗಾರರಾದ ವಿಷ್ಣು ವಿನೋದ್ ಹಾಗೂ ಕುಮಾರ್ ಕಾರ್ತಿಕೇಯ ಜತೆಗೂಡಿ ಗಾಂಧೀಜಿಯವರ ಮೂರು ಬುದ್ದಿವಂತ ಕೋತಿಗಳ ಹಾಗೆ ಕಿವಿ, ಕಣ್ಣು ಹಾಗೂ ಬಾಯಿ ಮುಚ್ಚಿ ಮುಂದಿನ ಟೇಬಲ್ ಮೇಲೆ ಮಾವಿನ ಹಣ್ಣುಗಳನ್ನು ಇಟ್ಟು 'ಮಾವಿನ ಹಣ್ಣಿನ ಸ್ವೀಟ್ ಸೀಸನ್' ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ವಿರಾಟ್ ಕೊಹ್ಲಿ ಔಟ್ ಆದಾಗ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸ್ವೀಟ್ ಮ್ಯಾಂಗೋಸ್ ಎಂದು ಬರೆದುಕೊಂಡಿದ್ದ ಹಾಗೂ ನಿನ್ನೆಯ ಪಂದ್ಯದಲ್ಲಿ ವಿಕೆಟ್ ಪಡೆದು ಕಿವಿ ಮುಚ್ಚಿ ಸಂಭ್ರಮಿಸಿದ್ದ ನವೀನ್ ಉಲ್ ಹಕ್‌ಗೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಟಾಂಗ್ ನೀಡಿದ್ದಾರೆ. ಸದ್ಯ ಸಂದೀಪ್ ವಾರಿಯರ್ ಈ ಪೋಸ್ಟ್ ಅನ್ನು ಡಿಲಿಟ್ ಮಾಡಿದ್ದು, ಅಭಿಮಾನಿಗಳು ತೆಗೆದುಕೊಂಡಿದ್ದ ಪೋಸ್ಟ್‌ನ ಸ್ಕ್ರೀನ್‌ಶಾಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications