ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ಸೋಮವಾರ ತಾನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ಕೊನೆಯ ಎಸೆತದಲ್ಲಿ ರೋಚಕವಾಗಿ ಮುಕ್ತಾಯವಾಗಿತ್ತು, ಇಂದು ಕೂಡ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ರೋಚಕವಾಗಿ ಅಂತ್ಯಗೊಂಡಿದ್ದು, ರೋಹಿತ್ ಶರ್ಮಾ ಪಡೆ ಈ ಐಪಿಎಲ್‌ನ ಮೊದಲ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 19.4 ಓವರ್ ಗಳಲ್ಲಿ 172 ರನ್ ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಸ್ಫೋಟಕ ಆರಂಭ ಪಡೆಯಿತು. 25 ಇನ್ನಿಂಗ್ಸ್‌ಗಳ ಬಳಿಕ ರೋಹಿತ್ ಶರ್ಮಾ ಅರ್ಧಶತಕ ಗಳಿಸಿದರು, ಇಶಾನ್ ಕಿಶನ್ ಕೂಡ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. 7.3 ಓವರ್ ಗಳಲ್ಲಿ ಈ ಜೋಡಿ 71 ರನ್ ಕಲೆಹಾಕಿತು.

ಇಶಾನ್ ಕಿಶನ್ 26 ಎಸೆತಗಳಲ್ಲಿ 6 ಬೌಂಡರಿ ಸಹಿತ 31 ರನ್ ಗಳಿಸಿ ಔಟಾದರು. ನಂತರ ಬಂದ ತಿಲಕ್ ವರ್ಮಾ ರೋಹಿತ್ ಶರ್ಮಾ ಜೊತೆ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಎರಡನೇ ವಿಕೆಟ್‌ಗೆ 68 ರನ್‌ಗಳ ಜೊತೆಯಾಟ ಆಡಿದರು. ತಿಲಕ್ ವರ್ಮಾ 29 ಎಸೆತಗಳಲ್ಲಿ 1 ಬೌಂಡರಿ 4 ಸಿಕ್ಸರ್ ಸಹಿತ 41 ರನ್ ಗಳಿಸಿದರು. ರೋಹಿತ್ ಶರ್ಮಾ 45 ಎಸೆತಗಳಲ್ಲಿ 6 ಬೌಂಡರಿ 4 ಸಿಕ್ಸರ್ ಸಹಿತ 65 ರನ್ ಗಳಿಸಿ ಮುಸ್ತಾಫಿಜುರ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಅಭಿಷೇಕ್ ಪೊರೆಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು.
ಕೊನೆಯ ಓವರ್ ನಲ್ಲಿ ಹೈಡ್ರಾಮ
ಸೂರ್ಯಕುಮಾರ್ ಯಾದವ್ ಮೊದಲನೇ ಎಸೆತದಲ್ಲಿ ಔಟಾಗುವ ಮೂಲಕ ಕಳಪೆ ಫಾರ್ಮ್ ಮುಂದುವರೆಸಿದರು. ನಂತರ ಬಂದ ಟಿಮ್ ಡೇವಿಡ್ ಮತ್ತು ಕ್ಯಾಮೆರಾನ್ ಗ್ರೀನ್ ಎಚ್ಚರಿಕೆಯ ಆಟವಾಡುವ ಮೂಲಕ ಮುಂಬೈ ಇಂಡಿಯನ್ಸ್ ಗೆಲುವಿನ ಸನಿಹ ಬಂದಿತು. ಕೊನೆಯ ಓವರ್ ನಲ್ಲಿ ಮುಂಬೈ ಗೆಲುವಿಗೆ 5 ರನ್‌ಗಳ ಅಗತ್ಯವಿತ್ತು.
ಕೊನೆಯ ಓವರ್ ಬೌಲಿಂಗ್ ಮಾಡಿದ ಅನ್ರಿಚ್ ನೊಕಿಯಾ ಮೊದಲನೇ ಎಸೆತದಲ್ಲಿ ಕೇವಲ ಒಂದು ರನ್ ಕೊಟ್ಟರು, ಎರಡನೇ ಎಸೆತದಲ್ಲಿ ರನ್ ಬರಲಿಲ್ಲ, ಮೂರನೇ ಎಸೆತದಲ್ಲಿ ಕೂಡ ಟಿಮ್ ಡೇವಿಡ್ ರನ್ ಗಳಿಸಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಪಂದ್ಯ ರೋಚಕವಾಯಿತು. ನಾಲ್ಕನೇ ಎಸೆತದಲ್ಲಿ ಟಿಮ್ ಕೇವಲ ಒಂದು ರನ್ ಗಳಿಸಿದರು, ಐದನೇ ಎಸೆತದಲ್ಲಿ ಗ್ರೀನ್ ಕೇವಲ ಒಂದು ರನ್ ಗಳಿಸಿದ್ದರಿಂದ ಮುಂಬೈಗೆ ಗೆಲ್ಲಲು ಕೊನೆಯ ಎಸೆತದಲ್ಲಿ ಎರಡು ರನ್ ಬೇಕಿತ್ತು. ಕೊನೆಯ ಎಸೆತವನ್ನು ಲಾಂಗ್ ಆನ್ ಕಡೆಗೆ ಹೊಡೆದ ಟಿಮ್ ಡೇವಿಡ್ ವೇಗವಾಗಿ ಎರಡು ರನ್ ಗಳಿಸಿ ತಂಡಕ್ಕೆ ಮೊದಲ ಗೆಲುವು ತಂದುಕೊಟ್ಟರು.

ಮೊದಲ ಗೆಲುವು ಪಡೆದ ಮುಂಬೈ
ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವ ಮೂಲಕ ಮುಂಬೈ ಇಂಡಿಯನ್ಸ್ ಈ ಆವೃತ್ತಿಯ ಮೊದಲ ಗೆಲುವು ದಾಖಲಿಸಿದೆ. ಮೊದಲ ಎರಡು ಪಂದ್ಯಗಳಲ್ಲಿ ಅವರು ಸೋಲನುಭವಿಸಿದ್ದರು. ಎರಡು ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಆಡಿದ ನಾಲ್ಕು ಪಂದ್ಯಗಳನ್ನು ಸೋಲುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಡೆಲ್ಲಿ ಮುಂದಿನ ಪಂದ್ಯವನ್ನು ಏಪ್ರಿಲ್ 15ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ.