IPL 2023: ತಂಡದಿಂದ ಹೊರಬಿದ್ದ ಸ್ಫೋಟಕ ಬ್ಯಾಟರ್: ಬದಲೀ ಆಟಗಾರನ ಹೆಸರಿಸಿದ ಪಂಜಾಬ್ ಕಿಂಗ್ಸ್

ಪಂಜಾಬ್ ಕಿಂಗ್ಸ್‌ನ ಕೀಪರ್-ಬ್ಯಾಟರ್ ಜಾನಿ ಬೈರ್‌ಸ್ಟೋವ್ ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಿಂದ ಹೊರಗುಳಿದಿದ್ದಾರೆ. ಸೆಪ್ಟೆಂಬರ್ ನಲ್ಲಿ ಗಾಯಗೊಂಡ ಅವರು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಐಪಿಎಲ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಸ್ಫೋಟಕ ಬ್ಯಾಟರ್ ಜಾನಿ ಬೈರ್‌ಸ್ಟೋವ್ ಬದಲಾಗಿ ಆಸ್ಟ್ರೇಲಿಯದ ದೇಶೀಯ ಕ್ರಿಕೆಟಿಗ ಮ್ಯಾಥ್ಯೂ ಶಾರ್ಟ್ ಅವರನ್ನು ಬದಲೀ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಶೀಘ್ರದಲ್ಲೇ ಶಾರ್ಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯಿಂದ (ECB) ಬೈರ್‌ಸ್ಟೋವ್ ಬಗ್ಗೆ ಫಿಟ್‌ನೆಸ್ ಬಗ್ಗೆ ಮಾಹಿತಿಗಾಗಿ ಕಾಯುತ್ತಿದ್ದರು. ಫೆಬ್ರವರಿ ಅಂತ್ಯದಲ್ಲಿ ಜಾನಿ ಬೈರ್‌ಸ್ಟೋವ್ ತರಬೇತಿಯನ್ನು ಮತ್ತೆ ಆರಂಭಿಸಿದ್ದರು. ಜೂನ್‌ನಲ್ಲಿ ನಡೆಯಲಿರುವ ಆಶಸ್ ಸರಣಿಗಾಗಿ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ, ಸಂಪೂರ್ಣವಾಗಿ ಫಿಟ್ ಆಗಲು ಐಪಿಎಲ್ ತಪ್ಪಿಸಿಕೊಳ್ಳಲು ನಿರ್ಧರಿಸಿದರು. ಹೀಗಾಗಿ ಬದಲೀ ಆಟಗಾರನ ಆಯ್ಕೆ ಮಾಡಲು ಪಂಜಾಬ್ ಫ್ರಾಂಚೈಸಿಗೆ ಬಿಸಿಸಿಐ ಅವಕಾಶ ನೀಡಿತ್ತು.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯಕ್ಕೆ ಮುಂಚಿತವಾಗಿ ಬೈರ್‌ಸ್ಟೋವ್ ಗಾಯದಿಂದ ಬಳಲುತ್ತಿದ್ದರು. ಗಾಲ್ಫ್ ಆಡುವಾಗ ಜಾರಿಬಿದ್ದು ಅವರ ಫೈಬುಲಾದಲ್ಲಿ ಮುರಿತವಾಗಿತ್ತು.

ಟಿ20 ವಿಶ್ವಕಪ್‌ನಿಂದ ಕೂಡ ಹೊರಗುಳಿದಿದ್ದ ಜಾನಿ ಬೈರ್‌ಸ್ಟೋವ್
ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ದೀರ್ಘಕಾಲದ ವಿಶ್ರಾಂತಿ ಪಡೆದರು. ಆಸ್ಟ್ರೇಲಿಯಾದಲ್ಲಿ ನಡೆದ 2022 ರ ಟಿ20 ವಿಶ್ವಕಪ್‌ನಲ್ಲಿ ಕೂಡ ಅವರು ಆಡಲಿಲ್ಲ. ಪಾಕಿಸ್ತಾನ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶಗಳ ವಿರುದ್ಧದ ಸರಣಿಯನ್ನು ಕಳೆದುಕೊಂಡಿದ್ದಾರೆ. ಯುಎಇಯಲ್ಲಿ ನಡೆದ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಕೂಡ ಅವರು ಆಡಲಿಲ್ಲ.
ಜಾನಿ ಬೈರ್‌ಸ್ಟೋವ್ ಐಪಿಎಲ್‌ನಿಂದ ಹೊರಬಿದ್ದಿರುವುದು ಪಂಜಾಬ್ ಕಿಂಗ್ಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಸ್ಫೋಟಕ ಬ್ಯಾಟರ್ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸುವ ಸಾಮರ್ಥ್ಯ ಹೊಂದಿದ್ದರು.

ಜಾನಿ ಬೈರ್‌ಸ್ಟೋವ್ ಚೇತರಿಕೆಗೆ ಹಾರೈಸಿದ ಕೋಚ್
ಜಾನಿ ಬೈರ್‌ಸ್ಟೋವ್ ಈ ಬಾರಿಯ ಐಪಿಎಲ್‌ನಲ್ಲಿ ಆಡುವುದಿಲ್ಲ ಎಂದು ಪಂಜಾಬ್ ಕಿಂಗ್ಸ್ ತಂಡದ ಕೋಚ್ ಟ್ರೆವರ್ ಬೇಲಿಸ್ ಒಪ್ಪಿಕೊಂಡಿದ್ದಾರೆ. ಆದರೆ ಮ್ಯಾಥ್ಯೂ ಶಾರ್ಟ್ ಅವರ ಸ್ಥಾನವನ್ನು ಸಮರ್ಪಕವಾಗಿ ತುಂಬುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವಿಡಿಯೋದಲ್ಲಿ ಮಾತನಾಡಿದ ಅವರು, "ಪಂಜಾಬ್ ಕಿಂಗ್ಸ್‌ನ ಎಲ್ಲಾ ಅಭಿಮಾನಿಗಳಿಗೆ, ಜಾನಿ ಬೈರ್‌ಸ್ಟೋವ್ ಈ ಆವೃತ್ತಿಯಲ್ಲಿ ಆಡುವುದಿಲ್ಲ. ಅವರು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ. ಅವರಿಲ್ಲದಿರುವುದು ತಂಡಕ್ಕೆ ಕೊರತೆಯಾಗಲಿದೆ" ಎಂದು ಟ್ರೆವರ್ ಬೇಲಿಸ್ ಹೇಳಿದ್ದಾರೆ.
"ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮ್ಯಾಥ್ಯೂ ಶಾರ್ಟ್ ಅವರನ್ನು ಬದಲೀ ಆಟಗಾರನಾಗಿ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ" ಎಂದು ಅಭಿಮಾನಿಗಳಿಗೆ ಮಾಹಿತಿ ನೀಡಿದರು.
ಮ್ಯಾಥ್ಯೂ ಶಾರ್ಟ್ ಈ ವರ್ಷದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. 15 ಪಂದ್ಯಗಳಲ್ಲಿ 35.23 ಸರಾಸರಿ ಮತ್ತು 144.47 ಸ್ಟ್ರೈಕ್‌ರೇಟ್‌ನಲ್ಲಿ 458 ರನ್ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ಈ ಬಾರಿ ಐಪಿಎಲ್‌ನ ತಮ್ಮ ಮೊದಲ ಪಂದ್ಯವನ್ನು ಕೋಲ್ಕತ್ತಾ ನೈಟ್‌ರೈಡರ್ಸ್ ವಿರುದ್ಧ ಏಪ್ರಿಲ್ 1ರಂದು ಮೊಹಾಲಿಯಲ್ಲಿ ಆಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications