
ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಗೆ ಮಾರ್ಚ್ 31ರಂದು ಅದ್ದೂರಿ ಚಾಲನೆ ಸಿಗಲಿದೆ. 15 ಆವೃತ್ತಿಯಲ್ಲಿ ಐಪಿಎಲ್‌ನಲ್ಲಿ ಸೃಷ್ಟಿಯಾದ ದಾಖಲೆಗಳು ಒಂದೆರಡಲ್ಲ, 14 ವರ್ಷಗಳ ಕಾಲ ಎಂಟು ತಂಡಗಳು ಪ್ರಶಸ್ತಿಗೆ ಸೆಣೆಸಿದರೆ, ಕಳೆದ ಆವೃತ್ತಿಯಿಂದ 10 ತಂಡಗಳು ಭಾರಿ ಹಣಾಹಣಿ ನಡೆಸುತ್ತಿವೆ.
ಒಬ್ಬ ಆಟಗಾರ ಅತ್ಯುತ್ತಮ ಪ್ರದರ್ಶನ ನೀಡಿದರೂ ಸಾಕು ಟಿ20 ಮಾದರಿಯಲ್ಲಿ ಆ ತಂಡವನ್ನು ಗೆಲ್ಲಿಸುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಟಿ20 ಎಂದರೆ ಬ್ಯಾಟರ್ ಗಳ ಆಟ ಎನ್ನಲಾಗುತ್ತದೆ. ಅದಕ್ಕೆ ತಕ್ಕಂತೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪಂದ್ಯ ಶ್ರೇಷ್ಟ ಆಟಗಾರ ಪ್ರಶಸ್ತಿ ಪಡೆದಿರುವುದು ಕೂಡ ಬ್ಯಾಟರ್ ಗಳೇ ಎನ್ನುವುದು ವಿಶೇಷ.
ಪಂದ್ಯದಲ್ಲಿ ಅತ್ಯುತ್ತಮ ಆಟವಾಡುವ ಕ್ರಿಕೆಟಿಗರಿಗೆ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಲಾಗುತ್ತದೆ. ಐಪಿಎಲ್ ಟೂರ್ನಿಯಲ್ಲಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆಯುವುದು ಸುಲಭವಲ್ಲ, ಪ್ರತಿ ತಂಡದಲ್ಲೂ ದಿಗ್ಗಜ ಆಟಗಾರರು ಇದ್ದಾರೆ. ಅವರನ್ನು ಮೀರಿಸುವ ಪ್ರದರ್ಶನ ನೀಡಿ ತಂಡವನ್ನು ಗೆಲ್ಲಿಸಿದರೆ ಮಾತ್ರ ಈ ಪ್ರಶಸ್ತಿಗೆ ಪಡೆಯಬಹುದು. ಇದುವರೆಗೂ ಅತಿ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದವರ ಪಟ್ಟಿಯಲ್ಲಿ ಆರ್ ಸಿಬಿ ಆಟಗಾರರೇ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.

ಮಿಸ್ಟರ್ 360 ಡಿಗ್ರಿ ಎಬಿಡಿ ಅಗ್ರಸ್ಥಾನದಲ್ಲಿ
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಆಟಗಾರ (ಪ್ಲೇಯರ್ ಆಫ್ ದಿ ಮ್ಯಾಚ್) ಪ್ರಶಸ್ತಿ ಪಡೆದಿರುವುದು ಮಿಸ್ಟರ್ 360 ಆಟಗಾರ ಎಬಿ ಡಿವಿಲಿಯರ್ಸ್. ಆರ್ ಸಿಬಿ ತಂಡದ ಮಾಜಿ ಬ್ಯಾಟರ್ ಅತಿ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆಯುವ ಮೂಲಕ ಅಗ್ರಸ್ಥಾನದಲ್ಲಿದೆ. ಎಬಿಡಿ ಒಟ್ಟು 25 ಬಾರಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. 184 ಇನ್ನಿಂಗ್ಸ್‌ಗಳಲ್ಲಿ 5162 ರನ್‌ಗಳೊಂದಿಗೆ ಅವರು ತಮ್ಮ ಐಪಿಎಲ್ ವೃತ್ತಿಜೀವನಕ್ಕೆ ವಿದಾಯ ಹೇಳಿದರು.
ಇನ್ನು 22 ಬಾರಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆಯುವ ಮೂಲಕ ಕ್ರಿಸ್ ಗೇಲ್ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಎರಡು ಸ್ಥಾನಗಳಲ್ಲಿ ಆರ್ ಸಿಬಿಯ ಮಾಜಿ ಆಟಗಾರರೇ ಇರುವುದು ವಿಶೇಷವಾಗಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 18 ಬಾರಿ ಪಂದ್ಯ ಶ್ರೇಷ್ಠ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿಗೆ 14 ಬಾರಿ ಪ್ರಶಸ್ತಿ
ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಐಪಿಎಲ್ ಕಪ್ ಗೆದ್ದು ಕೊಟ್ಟ ಮಾಜಿ ನಾಯಕ ಡೇವಿಡ್ ವಾರ್ನರ್ ಕೂಡ 18 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಈವರೆಗೂ 17 ಬಾರಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶೇನ್ ವ್ಯಾಟ್ಸನ್ ಮತ್ತು ಯೂಸುಫ್ ಪಠಾಣ್ ಇಬ್ಬರೂ ತಲಾ 16 ಬಾರಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದಿದ್ದಾರೆ. ಸುರೇಶ್ ರೈನಾ, ಕೀರನ್ ಪೊಲಾರ್ಡ್ ಮತ್ತು ವಿರಾಟ್ ಕೊಹ್ಲಿ ತಲಾ 14 ಬಾರಿ ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದ ದಾಖಲೆ ಮಾಡಿದ್ದಾರೆ.