ಐಪಿಎಲ್ 2023 ಈಗಿನಿಂದಲೇ ಸಿದ್ದತೆ ಶುರು!: ಅಭ್ಯಾಸಕ್ಕಾಗಿ ಇಂಗ್ಲೆಂಡ್‌ಗೆ ತೆರಳಲು ಸಜ್ಜಾದ ಫ್ರಾಂಚೈಸಿ ಯಾವುದು ಗೊತ್ತಾ?

ಐಪಿಎಲ್ 2022ರ ಆವೃತ್ತಿ ಮುಕ್ತಾಯವಾಗಿ ಒಂದು ತಿಂಗಳು ಕಳಿಯುತ್ತಿದೆಯಷ್ಟೇ. ಮುಂದಿನ ಆವೃತ್ತಿಯ ಆರಂಭಕ್ಕೆ ಇನ್ನೂ 8-9 ತಿಂಗಳು ಬಾಕಿಯಿದೆ. ಈ ಅವಧಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಮಹತ್ವದ ಟೂರ್ನಿಗಳು ಆಯೋಜನೆಯಾಗಲಿದೆ. ಈ ಸಂದರ್ಭದಲ್ಲಿ ಐಪಿಎಲ್‌ನ ಒಂದು ಫ್ರಾಂಚೈಸಿ ಮುಂದಿನ ಆವೃತ್ತಿಗಾಗಿ ಭಾರೀ ಸಿದ್ಧತೆಗೆ ಸಜ್ಜಾಗಿದೆ. ಮುಂದಿನ ಆವೃತ್ತಿಗೆ ತನ್ನ ಯುವ ಆಟಗಾರರನ್ನು ಈಗಿನಿಂದಲೇ ಸಜ್ಜುಗೊಳಿಸಲು ದೊಡ್ಡ ಯೋಜೆನ ಹಾಕಿಕೊಂಡಿದೆ.
ಸಾಮಾನ್ಯವಾಗಿ ಐಪಿಎಲ್ ತಂಡಗಳು ಟೂರ್ನಿಗಾಗಿ ಒಂದೆರಡು ತಿಂಗಳುಗಳ ಮುನ್ನ ಅಭ್ಯಾಸವನ್ನು ಆರಂಭಿಸುತ್ತದೆ. ಟೂರ್ನಿ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಫ್ರಾಂಚೈಸಿಗಳು ಸಿದ್ಧತೆಯನ್ನು ಆರಂಬಿಸುವುದು ಸಾಮಾನ್ಯ. ಆದರೆ ಮುಂದಿನ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಗುರಿಯಿಟ್ಟುಕೊಂಡು ಈಗಿನಿಂದಲೇ ಸಿದ್ಧತೆ ನಡೆಸಲು ಸಜ್ಜಾಗಿದೆ ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿ.

ಸಿದ್ಧತೆಗೆ ಸಜ್ಜಾಗಿದೆ ಮುಂಬೈ ಇಂಡಿಯನ್ಸ್
ಐಪಿಎಲ್ 2023ರ ಆವೃತ್ತಿಗೆ ಸಿದ್ಧತೆ ನಡೆಸಲು ಸಜ್ಜಾಗಿರುವ ಫ್ರಾಂಚೈಸಿ ಬೇರೆ ಯಾವುದೂ ಅಲ್ಲ ಅತಿ ಹೆಚ್ಚು ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಹೆಗ್ಗಳಿಕೆ ಹೊಂದಿರುವ ಮುಂಬೈ ಇಂಡಿಯನ್ಸ್. ಈ ಬಾರಿಯ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ಆವೃತ್ತಿಯಲ್ಲಿ ಅಂತಿಮ ಸ್ಥಾನವನ್ನು ಪಡೆದುಕೊಂಡಿತ್ತು. ಹೀಗಾಗಿ ಮುಂದಿನ ಆವೃತ್ತಿಗೆ ಮತ್ತೆ ತಿರುಗಿಬೀಳಲು ಫ್ರಾಂಚೈಸಿ ಸಿದ್ಧವಾಗುತ್ತಿದೆ. ತಂಡದಲ್ಲಿರುವ ಯುವ ಆಟಗಾರರಿಗಾಗಿ ವಿಶೇಷ ಯೋಜನೆಯನ್ನು ಹಾಕೊಕೊಂಡಿದೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ.

ಜುಲೈನಲ್ಲಿ ಇಂಗ್ಲೆಂಡ್‌ಗೆ ತೆರಳಿರುವ ಎಂಐ ಯುವ ಆಟಗಾರರು
ಮುಂದಿನ ಐಪಿಎಲ್ ಆವೃತ್ತಿಗೆ ಸಿದ್ಧತೆ ನಡೆಸುವ ದೃಷ್ಟಿಯಿಂದ ಜುಲೈ ತಿಂಗಳಿನಲ್ಲಿ ಮೂರು ವಾರಗಳ ಕಾಲ ಇಂಗ್ಲೆಂಡ್ ಪ್ರವಾಸ ಕೈಗೊಂಡು ಅಭ್ಯಾಸ ನಡೆಸಲಿದ್ದಾರೆ ಮುಂಬೈ ಇಂಡಿಯನ್ಸ್ ತಂಡದ ಅನ್‌ಕ್ಯಾಪ್‌ಡ್ ಆಟಗಾರರು. ಈ ಸಂದರ್ಭದಲ್ಲಿ ಇಂಗ್ಲೆಂಡ್‌ನ ಸ್ಥಳೀಯ ಕ್ಲಬ್‌ಗಳ ಜೊತೆಗೆ ಕನಿಷ್ಠ 10 ಪಂದ್ಯಗಳನ್ನು ಆಡಲಿದೆ ಎನ್ನಲಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಯುವ ಆಟಗಾರರಾದ ಅರ್ಜುನ್ ತೆಂಡೂಲ್ಕರ್, ಡೆವಾಲ್ಡ್ ಬ್ರೇವಿಸ್ ಕೂಡ ಭಾಗಿಯಾಗುವ ಸಾಧ್ಯತೆಯಿದೆ.

ಕೋಚ್ ಜಯವರ್ಧನೆ ಸಾರಥ್ಯದಲ್ಲಿ ಸಿದ್ಧತೆ
ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಮಹೇಲ ಜಯವರ್ಧನೆ ಸಾರಥ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಯುವ ಅನ್‌ಕ್ಯಾಪ್‌ಡ್ ಆಟಗಾರರು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ. ತಿಲಕ್ ವರ್ಮಾ, ಕುಮಾರ್ ಕಾರ್ತಿಕೇಯ, ರಮಣ್‌ದೀಪ್‌ಸಿಂಗ್, ಹೃತಿಕ್ ಶೋಕೀನ್ ಸೇರಿದಂತೆ ಇನ್ನೂ ಕೆಲ ಯುವ ಆಟಗಾರರು ಇಂಗ್ಲೆಂಡ್‌ಗೆ ತೆರಳಿ ಅಗ್ರ ಕ್ಲಬ್ ತಂಡಗಳ ವಿರುದ್ಧ ಆಡಲಿದ್ದಾರೆ. ಅರ್ಜುನ್ ತೆಂಡೂಲ್ಕರ್ ಕೂಡ ಈಗಾಗಲೇ ಇಂಗ್ಲೆಂಡ್‌ನಲ್ಲಿದ್ದು ದಕ್ಷಿಣ ಆಫ್ರಿಕಾದ ಯುವ ಆಟಗಾರ ಡೆವಾಲ್ಡ್ ಬ್ರೇವಿಸ್ ಕೂಡ ಈ ಬಳಗದಲ್ಲಿ ಸೇರಿಕೊಳ್ಳಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದಾರೆ ಸ್ಟಾರ್ ಆಟಗಾರರು
ದೇಶೀಯ ಕ್ರಿಕೆಟ್ ಆವೃತ್ತಿ ಅಂತ್ಯವಾಗಿರುವ ಕಾರಣ ಯುವ ಆಟಗಾರರಿಗೆ ತಯಾರಿ ನಡೆಸಲು ಇದು ಸೂಕ್ತ ಸಂದರ್ಭ ಎಂದು ನಿರ್ಧರಿಸಿ ಈ ಯೋಜೆನ ಹಾಕಿಕೊಂಡಿದೆ ಮುಂಬೈ ಇಂಡಿಯನ್ಸ್. ಇನ್ನು ತಂಡದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾ ಮೊದಲಾದ ಆಟಗಾರರು ರಾಷ್ಟ್ರೀಯ ತಂಡಗಳ ಪರವಾಗಿ ಆಡುತ್ತಿದ್ದಾರೆ. ಇನ್ನು ಇತರ ಅಂತಾರಾಷ್ಟ್ರೀಯ ಕ್ರಿಕೆಟ್‌ನ ತಾರೆಯರು ಕೂಡ ತಮ್ಮ ತಮ್ಮ ರಾಷ್ಟ್ರಗಳ ಪರವಾಗಿ ಆಡುತ್ತಿದ್ದಾರೆ. ಹೀಗಾಗಿ ಯುವ ಆಟಗಾರರಿಗೆ ತರಬೇತಿಯ ಅಗತ್ಯವನ್ನು ಮನಗಂಡಿರುವ ಮುಂಬೈ ಇಂಡಿಯನ್ಸ್ ಈ ಯೋಜನೆ ಹಾಕಿಕೊಂಡಿದೆ. ಮುಂದಿನ ದಿನಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಈ ರಣತಂತ್ರವನ್ನು ಇತರ ಫ್ರಾಂಚೈಸಿಗಳು ಕೂಡ ಅನುಸರಿಸಿದರೆ ಅಚ್ಚರಿಯಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications