
ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 58 ಹಾಗೂ 59ನೇ ಪಂದ್ಯಗಳು ಇಂದು ( ಮೇ 13 ) ನಡೆದಿವೆ.. ಮಧ್ಯಾಹ್ನ ನಡೆದ 58ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಗೆದ್ದರೆ, ರಾತ್ರಿ ನಡೆದ 59ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿ ಪಂಜಾಬ್ ಕಿಂಗ್ಸ್ ಜಯ ಸಾಧಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಈ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದು, ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಫೀಲ್ಡಿಂಗ್ ಆಯ್ದುಕೊಂಡು ತಮ್ಮ ಎದುರಾಳಿ ತಂಡ ಪಂಜಾಬ್ ಕಿಂಗ್ಸ್ ಅನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಕಲೆಹಾಕಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು 168 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲಗೊಂಡ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 136 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಮೂಲಕ ಪಂಜಾಬ್ ಕಿಂಗ್ಸ್ 31 ರನ್‌ಗಳ ಅಂತರದ ಗೆಲುವನ್ನು ಸಾಧಿಸಿ ತನ್ನ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಪ್ರಭ್‌ಸಿಮ್ರಾನ್ ಸಿಂಗ್ ಹಾಗೂ ನಾಯಕ ಶಿಖರ್ ಧವನ್ ಕಣಕ್ಕಿಳಿದರು. ಧವನ್ 7 ರನ್ ಗಳಿಸಿ ಔಟ್ ಆದರೆ ಪ್ರಭ್‌ಸಿಮ್ರಾನ್ ಸಿಂಗ್ 65 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 103 ರನ್ ಗಳಿಸಿದರು. ಹೀಗೆ ಪ್ರಭ್‌ಸಿಮ್ರಾನ್ ಸಿಂಗ್ ಅಬ್ಬರದ ಶತಕ ಬಾರಿಸಿದ್ದು ಬಿಟ್ಟರೆ ಪಂಜಾಬ್ ಕಿಂಗ್ಸ್ ತಂಡದ ಉಳಿದ ಯಾವ ಆಟಗಾರ ಸಹ 20 ರನ್‌ಗಿಂತ ಹೆಚ್ಚು ದಾಖಲಿಸಲಿಲ್ಲ.
ಲಿಯಾಮ್ ಲಿವಿಂಗ್‌ಸ್ಟನ್ 4, ಜಿತೇಶ್ ಶರ್ಮಾ 5, ಸ್ಯಾಮ್ ಕರನ್ 20, ಹರ್‌ಪ್ರೀತ್ ಬ್ರಾರ್ 2, ಶಾರುಖ್ ಖಾನ್ 2, ಸಿಖಂದರ್ ರಾಜಾ 11 ಹಾಗೂ ರಿಷಿ ಧವನ್ ಯಾವುದೆ ಎಸೆತ ಎದುರಿಸದೇ ಅಜೇಯರಾಗಿ ಉಳಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಇಶಾಂತ್ ಶರ್ಮಾ 2 ವಿಕೆಟ್, ಅಕ್ಷರ್ ಪಟೇಲ್, ಪ್ರವೀಣ್ ದುಬೆ, ಕುಲ್‌ದೀಪ್ ಯಾದವ್ ಹಾಗೂ ಮುಖೇಶ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು.
ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್: ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಆಟಗಾರರಾಗಿ ಡೇವಿಡ್ ವಾರ್ನರ್ ಹಾಗೂ ಫಿಲಿಪ್ ಸಾಲ್ಟ್ ಕಣಕ್ಕಿಳಿದರು. ವಾರ್ನರ್ 27 ಎಸೆತಗಳಲ್ಲಿ 54 ರನ್ ಗಳಿಸಿದರೆ, ಫಿಲಿಪ್ ಸಾಲ್ಟ್ 17 ಎಸೆತಗಳಲ್ಲಿ 21 ರನ್ ಬಾರಿಸಿದರು. ಇನ್ನುಳಿದಂತೆ ಮಿಚೆಲ್ ಮಾರ್ಷ್ 3, ರಿಲಿ ರೊಸ್ಸೋ 5, ಅಕ್ಷರ್ ಪಟೇಲ್ 1, ಮನೀಶ್ ಪಾಂಡೆ ಡಕ್ ಔಟ್, ಅಮನ್ ಹಕೀಮ್ ಖಾನ್ 16, ಪ್ರವೀಣ್ ದುಬೆ 16, ಕುಲ್‌ದೀಪ್ ಯಾದವ್ ಅಜೇಯ 10 ರನ್ ಹಾಗೂ ಮುಖೇಶ್ ಕುಮಾರ್ ಅಜೇಯ 6 ರನ್ ಗಳಿಸಿದರು.
ಹೀಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಡೇವಿಡ್ ವಾರ್ನರ್ ಹೊರತುಪಡಿಸಿ ಬೇರೆ ಯಾವ ಆಟಗಾರ ಸಹ ಹೆಚ್ಚು ಹೊತ್ತು ಕಣದಲ್ಲಿದ್ದು ಹೆಚ್ಚು ರನ್ ಬಾರಿಸದೇ ವಿಫಲರಾದರು. ಪಂಜಾಬ್ ಕಿಂಗ್ಸ್ ಪರ ಹರ್‌ಪ್ರೀತ್ ಬ್ರಾರ್ 4 ವಿಕೆಟ್ ಪಡೆದರು, ನಾಥನ್ ಎಲ್ಲಿಸ್ ಹಾಗೂ ರಾಹುಲ್ ಚಹರ್ ತಲಾ ಎರಡು ವಿಕೆಟ್ ಪಡೆದರು.
ಆಡುವ ಬಳಗಗಳು:
ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ರಿಲೀ ರೊಸೊವ್, ಅಮನ್ ಹಕೀಮ್ ಖಾನ್, ಅಕ್ಸರ್ ಪಟೇಲ್, ಪ್ರವೀಣ್ ದುಬೆ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್
ಪಂಜಾಬ್ ಕಿಂಗ್ಸ್ ಆಡುವ ಬಳಗ: ಪ್ರಭಾಸಿಮ್ರಾನ್ ಸಿಂಗ್, ಶಿಖರ್ ಧವನ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಸ್ಯಾಮ್ ಕರ್ರಾನ್, ಸಿಕಂದರ್ ರಜಾ, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್