ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರೋಚಕ ಪಂದ್ಯವೊಂದು ಸೋಮವಾರ ನಡೆಯಿತು. ಕೊನೆಯ ಓವರ್ ನ ಕೊನೆಯ ಎಸೆತದವರೆಗೂ ಆರ್‌ಸಿಬಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಿದವು. ಕೊನೆಯ ಎಸೆತದಲ್ಲಿ ಲೆಗ್‌ಬೈ ಮೂಲಕ ಒಂದು ರನ್ ಗಳಿಸಿದ ಎಲ್‌ಎಸ್‌ಜಿ 1 ವಿಕೆಟ್ ರೋಚಕ ಜಯ ಸಾಧಿಸಿತು.
ವೇಗಿ ಹರ್ಷಲ್ ಪಟೇಲ್ ಕೊನೆಯ ಬಾಲ್‌ನಲ್ಲಿ ಒಂದು ರನ್ ಡಿಫೆಂಡ್ ಮಾಡುವಾಗ ಮೊದಲೇ ಕ್ರೀಸ್ ಬಿಟ್ಟಿದ್ದ ರವಿ ಬಿಷ್ಣೋಯ್ ಅವರನ್ನು ನಾನ್‌ಸ್ಟ್ರೈಕರ್‌ನ ಕೊನೆಯಲ್ಲಿ ರನ್ ಔಟ್ ಮಾಡಲು ವಿಫಲರಾದರು. ನಂತರದ ಎಸೆತದಲ್ಲಿ ಚೆಂಡು ಬ್ಯಾಟರ್ ನನ್ನು ತಪ್ಪಿಸಿಕೊಂಡರು, ದಿನೇಶ್ ಕಾರ್ತಿಕ್ ಬಾಲ್ ಹಿಡಿಯಲು ವಿಫಲವಾದರು. ಒಂದು ರನ್ ಓಡಿದ ಆವೇಶ್ ಖಾನ್, ರವಿ ಬಿಷ್ಣೋಯ್ ತಂಡಕ್ಕೆ ಗೆಲುವು ತಂದುಕೊಟ್ಟರು.

212 ರನ್ ಗಳಿಸಿದರೂ ಆರ್ ಸಿಬಿ ಬೌಲರ್ ಗಳು ಅದನ್ನು ರಕ್ಷಿಸುವಲ್ಲಿ ವಿಫಲವಾದರು. ಮೂರು ಪಂದ್ಯಗಳಲ್ಲಿ ಬೌಲಿಂಗ್ ವಿಭಾಗ ನಿರೀಕ್ಷಿತ ಪ್ರದರ್ಶನ ನೀಡಿಲ್ಲ, ಪವರ್ ಪ್ಲೇನಲ್ಲಿ ವಿಕೆಟ್ ಪಡೆದು, ಬ್ಯಾಟರ್ ಗಳನ್ನು ಕಟ್ಟಿ ಹಾಕಿದರು, ನಂತರ ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಡುವ ಮೂಲಕ ಪಂದ್ಯದ ಸೋಲಿಗೆ ಕಾರಣವಾಗಿದ್ದಾರೆ.
ಅದರಲ್ಲೂ ತಂಡದ ಅನುಭವಿ ಬೌಲರ್ ಹರ್ಷಲ್ ಪಟೇಲ್ ದುಬಾರಿಯಾಗಿರುವುದು ತಲೆನೋವಿಗೆ ಕಾರಣವಾಗಿದೆ. ಡೆತ್ ಓವರ್ ನಲ್ಲಿ ಸ್ಪೆಷಲಿಸ್ಟ್ ಎನಿಸಿಕೊಳ್ಳುವ ಅವರು ಈ ಬಾರಿ ಅದನ್ನು ಮಾಡುವಲ್ಲಿ ವಿಫಲವಾಗಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಹರ್ಷಲ್ ಪಟೇಲ್‌ರನ್ನು ತಂಡದಿಂದ ಕೈಬಿಟ್ಟು ಬೇರೆ ಆಟಗಾರರಿಗೆ ಅವಕಾಶ ಕೊಡಬೇಕು ಎನ್ನುವುದಕ್ಕೆ ಈ ಮೂರು ಕಾರಣಗಳು ಪ್ರಮುಖವಾಗಿವೆ.

ಅತಿ ಹೆಚ್ಚು ರನ್ ಬಿಟ್ಟುಕೊಡು ಬೌಲರ್
ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಹರ್ಷಲ್ ಪಟೇಲ್ ಅವರನ್ನು 10.75 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತು. ಹಿಂದಿನ ಎರಡು ಆವೃತ್ತಿಯಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆರ್ ಸಿಬಿ ಪ್ಲೇ ಆಫ್ ತಲುಪುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. 2022ರಲ್ಲಿ 9.33 ಎಕಾನಮಿ ಹೊಂದಿದ್ದ ಅವರು ಈ ಆವೃತ್ತಿಯಲ್ಲಿ 12.50 ಎಕಾನಮಿ ಹೊಂದಿದ್ದಾರೆ. ಮಧ್ಯಮ ಕ್ರಮಾಂಕದ ಓವರ್ ಗಳಲ್ಲಿ ಹೆಚ್ಚಿನ ರನ್ ಬಿಟ್ಟುಕೊಡುತ್ತಿರುವುದು ತಂಡದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ.
ಲೈನ್ ಮತ್ತು ಲೆಂಗ್ತ್‌ನಲ್ಲಿ ವೈಫಲ್ಯ
ಹರ್ಷಲ್ ಪಟೇಲ್ ಅವರ ದೊಡ್ಡ ಶಕ್ತಿ ಅವರ ನಿಧಾನ ಗತಿಯ ಎಸೆತಗಳು ಮತ್ತು ಆಫ್-ಕಟರ್‌ಗಳು, ಹೆಚ್ಚಿನ ವೇಗ ಇಲ್ಲದಿರುವ ಕಾರಣ ಅವರ ಲೈನ್ ಮತ್ತು ಲೆಂಗ್ತ್ ಉತ್ತಮವಾಗಿರುವುದು ಮುಖ್ಯವಾಗಲಿದೆ.
2020-21ರಲ್ಲಿ ಅವರು ತಮ್ಮ ಒಟ್ಟು ಆಫ್-ಕಟರ್‌ಗಳಲ್ಲಿ 48.2 ಪ್ರತಿಶತದಷ್ಟು ಉತ್ತಮ ಲೆಂಗ್ತ್‌ನಲ್ಲಿ ಬೌಲ್ ಮಾಡಿದರು. ಕೇವಲ 7.1 ಪ್ರತಿಶತದಷ್ಟು ಶಾರ್ಟ್ ಪಿಚ್‌ನಲ್ಲಿ ಬೌಲಿಂಗ್ ಮಾಡಿದ್ದರು. ಆದರೆ ಐಪಿಎಲ್ 2022 ರಿಂದ, ಅವರು ಕೇವಲ 31.6 ಪ್ರತಿಶತದಷ್ಟು ಆಫ್-ಕಟರ್ ಅನ್ನು ಉತ್ತಮ ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡಿದ್ದರು, 18.4 ಪ್ರತಿಶತ ಶಾರ್ಟ್ ಹಾಕಿರುವುದರಿಂದ ಹೆಚ್ಚಿನ ರನ್ ಬಿಟ್ಟುಕೊಡಲು ಕಾರಣವಾಗಿದೆ. ಅವರು ತಮ್ಮ ಯಾರ್ಕರ್‌ಗಳನ್ನು ಎಸೆಯುವಲ್ಲಿ ಕೂಡ ವಿಫಲವಾಗಿದ್ದಾರೆ.
ಮಾರಕ ಬೌಲರ್ ಬೇಕಾಗಿದೆ
ಆರ್‌ಸಿಬಿ ತಂಡಕ್ಕೆ ಸದ್ಯ ಮತ್ತೊಬ್ಬ ಪರಿಣಾಮಕಾರಿ ವೇಗದ ಬೌಲರ್ ಬೇಕಾಗಿದೆ. ಎಡಗೈ ವೇಗಿಗಳಾದ ಡೇವಿಡ್ ವಿಲ್ಲಿ ಮತ್ತು ವೇಯ್ನ್ ಪಾರ್ನೆಲ್, ಲೆಗ್ ಸ್ಪಿನ್ನರ್‌ಗಳಾದ ಕರಣ್ ಶರ್ಮಾ ಮತ್ತು ವನಿಂದು ಹಸರಂಗ ಇದ್ದಾರೆ, ಪವರ್ ಪ್ಲೇನಲ್ಲಿ ಮೊಹಮ್ಮದ್ ಸಿರಾಜ್ ಉತ್ತಮ ಆಯ್ಕೆಯಾಗಿದ್ದಾರೆ. ಮ್ಯಾಕ್ಸ್‌ವೆಲ್ ಮತ್ತು ಶಹಬಾಜ್ ಕೂಡ ಬೌಲಿಂಗ್ ಮಾಡುವ ಆಯ್ಕೆ ಹೊಂದಿದ್ದಾರೆ.
ವನಿಂದು ಹಸರಂಗ ತಂಡವನ್ನು ಸೇರಿಕೊಂಡಿರುವ ಕಾರಣ ಡೇವಿಡ್ ವಿಲ್ಲಿ ಬದಲಾಗಿ ಅವರು ಆಡಲಿದ್ದು, ಕರಣ್ ಶರ್ಮಾ ಬದಲಾಗಿ ಅವಿನಾಶ್ ಸಿಂಗ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಬಹುದು. ಅಲ್ಲದೆ ಕರ್ನಾಟಕದ ವೇಗಿ ವೈಶಾಕ್ ಕೂಡ ಇದ್ದು ಅವರಿಗೂ ಅವಕಾಶ ನೀಡಬಹುದು.