ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಶನಿವಾರ ಎದುರಿಸಲಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಈ ಪಂದ್ಯ ಆಯೋಜನೆಯಾಗಲಿದೆ. ಈ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ತಂಡದ ಪ್ರಮುಖ ಆಟಗಾರ ಮಿಚೆಲ್ ಮಾರ್ಶ್ ಮತ್ತೆ ಸೇರಿಕೊಂಡಿದ್ದಾರೆ. ಈ ಮೂಲಕ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಮಾರ್ಶ್ ಲಭ್ತವಾಗುವುದು ಖಚಿತವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆರಂಭಿಕ ಎರಡು ಪಂದ್ಯಗಳಲ್ಲಿ ಆಡಿದ್ದ ಮಾರ್ಶ್ ಬಳಿಕ ತಮ್ಮ ಮದುವೆಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾಗೆ ವಾಪಾಸಾಗಿದ್ದರು. ದೀರ್ಘ ಕಾಲದ ಗೆಳತಿ ಗ್ರೆಟಾ ಮ್ಯಾಕ್ ಅವರನ್ನು ಸೌತ್‌ವೆಸ್ಟ್ ಆಸ್ಟ್ರೇಲಿಯಾದ ಗ್ರೀಸ್‌ಟೌನ್‌ನಲ್ಲಿ ಮಾರ್ಶ್ ತಮ್ಮ ಕುಟುಂಬದ ಆಪ್ತರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ವರಿಸಿದ್ದರು. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಿಂದ ಮಿಚೆಲ್ ಮಾರ್ಶ್ ಹೊರಗುಳಿದಿದ್ದರು.

ಬೆಂಗಳೂರಿಗೆ ಬಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿರುವ ಮಾರ್ಶ್ ಅಭ್ಯಾಸವನ್ನು ಕೂಡ ನಡೆಸಿದ್ದಾರೆ. ಈ ಮೂಲಕ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಆಸಿಸ್‌ನ ಈ ಆಟಗಾರ ಸಿದ್ಧವಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ ಸೋಲು ಅನುಭವಿಸಿದ್ದು ಮೊದಲ ಗೆಲುವಿಗಾಗಿ ಹಾತೊರೆಯುತ್ತಿದೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ವಾರ್ನರ್ ಪಡೆ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.
ಇನ್ನು ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಮೈದಾನದಲ್ಲಿ ಅಭ್ಯಾಸವನ್ನು ನಡೆಸುತ್ತಿದ್ದರೆ ರಿಷಭ್ ಪಂತ್ ಕೂಡ ತಂಡದ ಆಟಗಾರರಿಗೆ ಸಾಥ್ ನೀಡಿದ್ದಾರೆ. ಪಂತ್ ಬೌಂಡರಿ ಲೈನ್ ಬಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರ ಅಭ್ಯಾಸವನ್ನು ವೀಕ್ಷಿಸಿದರು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಿಷಭ್ ಪಂತ್ ಇದಕ್ಕೂ ಮುನ್ನ ಗುಜರಾತ್ ಟೈಟನ್ಸ್ ವಿರುದ್ಧ ತವರಿನಲ್ಲಿ ನಡೆದ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಸುಯಶ್ ಪ್ರಭುದೇಸಾಯಿ, ಕರ್ಣ್ ಶರ್ಮಾ, ಸಿದ್ದಾರ್ಥ್ ಕೌಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಹಿಮಾಂಶು ಶರ್ಮಾ, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್, ಮೈಕೆಲ್ ಬ್ರೇಸ್‌ವೆಲ್
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಸರ್ಫರಾಜ್ ಖಾನ್, ಅಮನ್ ಹಕೀಮ್ ಖಾನ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ರೋವ್ಮನ್ ಪೊವೆಲ್, ರಿಲೀ ರೊಸೌವ್, ಅನ್ರಿಚ್ ನಾರ್ಟ್ಜೆ, ಮುಸ್ತಾಫಿಜುರ್ ರಹಮಾನ್, ಚೇತನ್ ಸಕರಿಯಾ, ಮುಖೇಶ್ ಕುಮಾರ್, ಫಿಲ್ ಸಾಲ್ಟ್, ಲುಂಗಿ ಎನ್‌ಗಿಡಿ, ಪ್ರವೀಣ್ ದುಬೆ, ಲಲಿತ್ ಯಾದವ್, ರಿಪಾಲ್ ಪಟೇಲ್, ವಿಕ್ಕಿ ಓಸ್ಟ್ವಾಲ್, ಇಶಾಂತ್ ಶರ್ಮಾ, ಮನೀಶ್ ಪಾಂಡೆ, ಕಮಲೇಶ್ ನಾಗರಕೋಟಿ, ಯಶ್ ಧುಲ್