RCB vs MI Head to Head: ಮೊದಲ ಪಂದ್ಯ ದೇವ್ರಿಗಾ? ಫ್ಯಾನ್ಸ್‌ಗಾ? ಪ್ಲೇಯಿಂಗ್ 11, ಪಿಚ್ ವರದಿ
ಇಂಡಿಯನ್ ಪ್ರೀಮಿಯರ್ ಲೀಗ್‌ನ ಎರಡು ಜನಪ್ರಿಯ ತಂಡಗಳು ಭಾನುವಾರ ಮುಖಾಮುಖಿಯಾಗಲು ಸಜ್ಜಾಗಿವೆ. ಸಂಜೆ 7.30 ಗಂಟೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣೆಸಲಿವೆ. ಎರಡೂ ತಂಡಗಳಿಗೂ ಇದು ಐಪಿಎಲ್ 2023ರ ಮೊದಲ ಪಂದ್ಯವಾಗಿರುವುದರಿಂದ ಗೆಲುವಿನ ಮೂಲಕ ಪ್ರಾರಂಭಿಸುವ ಯೋಜನೆಯಲ್ಲಿವೆ.
ಶುಕ್ರವಾರವೇ ಬೆಂಗಳೂರಿಗೆ ಬಂದಿರುವ ಮುಂಬೈ ಇಂಡಿಯನ್ಸ್ ತಂಡ ಭರ್ಜರಿಯಾಗಿಯೇ ಅಭ್ಯಾಸ ನಡೆಸಿದೆ. ಆರ್ ಸಿಬಿ ಕೂಡ ಕಳೆದ ಒಂದು ವಾರದಿಂದ ಚಿನ್ನಸ್ವಾಮಿ ಅಂಗಳದಲ್ಲಿ ಅಭ್ಯಾಸ ಮಾಡಿದ್ದು, ಮೊದಲನೇ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ ಪೈಪೋಟಿಯನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದು, ಆರ್‌ಸಿಬಿ ತಂಡವನ್ನು ಫಾಫ್ ಡು ಪ್ಲೆಸಿಸ್ ಮುನ್ನಡೆಸಲಿದ್ದಾರೆ.

ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ 6624 ರನ್ ಗಳಿಸುವ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 5879 ರನ್ ಗಳಿಸಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿರುವುದು ತಂಡಕ್ಕೆ ಹೆಚ್ಚಿನ ಬಲವನ್ನು ತಂದುಕೊಟ್ಟಿದೆ. ಎರಡೂ ತಂಡಗಳಲ್ಲಿ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದು ಹೈ ಸ್ಕೋರಿಂಗ್ ಪಂದ್ಯವಾಗುವ ಸಾಧ್ಯವಾಗಿದೆ.
ಆರ್‌ಸಿಬಿ ಮುಂಬೈ ಇಂಡಿಯನ್ಸ್ ಹೆಡ್-ಟು-ಹೆಡ್
ಇದುವರೆಗೂ ಐಪಿಎಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು 15 ಆವೃತ್ತಿಗಳಲ್ಲಿ 32 ಪಂದ್ಯಗಳನ್ನು ಆಡಿವೆ. ಮುಂಬೈ ಇಂಡಿಯನ್ಸ್ 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ಬಾರಿ ಗೆಲುವು ಸಾಧಿಸಿದೆ. ಆದರೆ, ಕಳೆದ ಮೂರು ಪಂದ್ಯಗಳಲ್ಲಿ ಆರ್ ಸಿಬಿ ಸತತವಾಗಿ ಜಯ ಸಾಧಿಸಿರುವುದು ತಂಡಕ್ಕೆ ಹೆಚ್ಚಿನ ವಿಶ್ವಾಸ ನೀಡಿದೆ.
ಕಳೆದ ಆವೃತ್ತಿಯಲ್ಲಿ ಮುಂಬೈ ವಿರುದ್ಧ ಫಾಫ್ ಪಡೆ 7 ವಿಕೆಟ್‌ಗಳ ಜಯ ಸಾಧಿಸಿತ್ತು. ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಅನುಜ್ ರಾವತ್ 66 ರನ್ ಮತ್ತು ವಿರಾಟ್ ಕೊಹ್ಲಿ 48 ರನ್ ಗಳಿಸುವ ಮೂಲಕ ಆರ್ ಸಿಬಿ ಗೆಲುವಿಗೆ ಸಹಾಯ ಮಾಡಿದ್ದರು. ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಮುಂಬೈ ಇಂಡಿಯನ್ಸ್ ಈ ಬಾರಿ ಉತ್ತಮ ಪ್ರದರ್ಶನ ನೀಡುವ ಲೆಕ್ಕಾಚಾರದಲ್ಲಿದೆ. ಆದರೆ, ಆರ್ ಸಿಬಿ ಕೂಡ ಬಲಿಷ್ಠವಾಗಿದ್ದು ಕಳೆದ ಆವೃತ್ತಿಯ ಪ್ರದರ್ಶನವನ್ನು ಮತ್ತೆ ನೀಡಲು ಸಜ್ಜಾಗಿದೆ.

ಚಿನ್ನಸ್ವಾಮಿ ಅಂಗಳದ ಪಿಚ್ ವರದಿ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾಮಾನ್ಯವಾಗಿ ಹೈ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷೆ ಮಾಡಬಹುದಾಗಿದೆ. ಬೌಂಡರಿ ಚಿಕ್ಕದಾಗಿರುವುದರಿಂದ ಬ್ಯಾಟರ್ ಗಳಿಗೆ ಹೆಚ್ಚಿನ ಸಹಾಯ ಸಿಗಲಿದೆ. ಆದರೂ, ಮಧ್ಯಮ ವೇಗಿಗಳಿಗೆ ಪಿಚ್ ನೆರವು ನೀಡುವ ಸಾಧ್ಯತೆ ಇದೆ. ಮೂರು ವರ್ಷಗಳ ಬಳಿಕ ಆರ್ ಸಿಬಿ ತವರಿನಲ್ಲಿ ಪಂದ್ಯವನ್ನಾಡುತ್ತಿದೆ.
ಮೊದಲನೇ ಪಂದ್ಯಕ್ಕೆ ಜೋಶ್ ಹೇಜಲ್‌ವುಡ್ ಮತ್ತು ವನಿಂದು ಹಸರಂಗ ಅಲಭ್ಯರಾಗಿರುವುದು ಆರ್ ಸಿಬಿ ತಂಡಕ್ಕೆ ಹಿನ್ನಡೆಯಾಗಿದೆ. ರಜತ್ ಪಾಟಿದಾರ್ ಕೂಡ ಆಡುವುದು ಅನುಮಾನ ಎನ್ನಲಾಗಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ಮೊದಲನೇ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿತ್ತು, ಅವರು ಫಿಟ್ ಆಗಿದ್ದು, ಕಣಕ್ಕಿಳಿಯುವುದು ಖಚಿತ ಎನ್ನಲಾಗಿದೆ.

ಉಭಯ ತಂಡಗಳ ಸಂಭಾವ್ಯ ಆಡುವ ಬಳಗ
ರಾಯಲ್ ಚಾಲೆಂಜರ್ಸ್ ಬೆಂಗಳೂರು : ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಮೈಕಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ರೀಸ್ ಟಾಪ್ಲೆ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್. ಇಂಪ್ಯಾಕ್ಟ್ ಪ್ಲೇಯರ್: ಮನೋಜ್ ಭಾಂಡಗೆ, ಅವಿನಾಶ್ ಸಿಂಗ್, ಸಿದ್ದಾರ್ಥ್ ಕೌಲ್, ಮಹಿಪಾಲ್ ಲೊಮ್ರೋರ್, ಸೋನು ಯಾದವ್.
ಮುಂಬೈ ಇಂಡಿಯನ್ಸ್ : ರೋಹಿತ್ ಶರ್ಮಾ (ನಾಯಕ), ಟಿಮ್ ಡೇವಿಡ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕ್ಯಾಮೆರಾನ್ ಗ್ರೀನ್, ಜೋಫ್ರಾ ಆರ್ಚರ್, ಜೇಸನ್ ಬೆಹ್ರೆಂಡಾರ್ಫ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಶಮ್ಸ್ ಮುಲಾನಿ. ಇಂಪ್ಯಾಕ್ಟ್ ಪ್ಲೇಯರ್ : ರಮಣದೀಪ್ ಸಿಂಗ್, ಅರ್ಜುನ್ ತೆಂಡೂಲ್ಕರ್, ವಿಷ್ಣು ವಿನೋದ್, ಅರ್ಷದ್ ಖಾನ್, ಕುಮಾರ್ ಕಾರ್ತಿಕೇಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications