ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿ ಮಾರ್ಚ್ 31ರಿಂದ ಆರಂಭವಾಗಿದೆ. ಈ ಬಾರಿ ಭಾರತದಲ್ಲಿಯೇ ಈ ಟೂರ್ನಿ ಹೋಮ್ ಹಾಗೂ ಅವೇ ಮಾದರಿಯಲ್ಲಿ ನಡೆಯುತ್ತಿರುವುದು ಅಭಿಮಾನಿಗಳಲ್ಲಿ ಹೆಚ್ಚಿನ ಸಂತಸ ನೀಡಿದೆ. ಇನ್ನು 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಭಾನುವಾರ ಸಂಜೆ ರಾಯಲ್ ಚಾಲೆಂಜರ್ಸ್ ಬೆಂಗಳುರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದ್ದು ಈ ಕದನ ಕ್ರಿಕೆಟ್ ಪ್ರೇಮಿಗಳ ಕುತೂಹಲ ಹೆಚ್ಚಿಸಿದೆ. ಅಲ್ಲದೆ ಸುದೀರ್ಘ ಕಾಲದ ಬಳಿಕ ಬೆಂಗಳೂರಿನಲ್ಲಿ ಆರ್‌ಸಿಬಿ ತಂಡ ಆಡುತ್ತಿರುವುದು ಈ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಆದರೆ ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ತನ್ನ ಕೆಟ್ಟ ಪರಂಪರೆಯೊಂದು ಕಾಡುತ್ತಿದ್ದು ಈ ಬಾರಿಯಾದರೂ ಈ ಕೆಟ್ಟ ದಾಖಲೆಯನ್ನು ಅಳಿಸಿಹಾಕುವ ಪ್ರಯತ್ನ ನಡೆಸಲಿದೆ. ಮುಂಬೈ ಇಂಡಿಯನ್ಸ್ ತಂಡ ಕಳೆದ ಒಂದು ದಶಕದಿಂದ ಐಪಿಎಲ್‌ಲ್ಲಿ ತನ್ನ ಮೊದಲ ಪಂದ್ಯದಲ್ಲಿ ಕನಿಷ್ಠ ಒಂದು ಬಾರಿಯೂ ಗೆಲುವು ಸಾಧಿಸಲು ಸಾಧ್ಯವಾಗಲೇ ಇಲ್ಲ ಎಂಬುದು ಅಚ್ಚರಿಯಾದರೂ ನಿಜ. ಹಾಗಾಗಿ ಈ ಕೆಟ್ಟ ದಾಖಲೆಯನ್ನು ಮುರಿಯುವ ಪ್ರಯತ್ನ ನಡೆಸಲಿದೆ ಮುಂಬೈ ಇಂಡಿಯನ್ಸ್ ತಂಡ.

ಅಂದಹಾಗೆ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ನಲ್ಲಿ ಅತ್ಯಂತ ಹೆಚ್ಚು ಬಾರಿ ಚಾಂಪಿಯನ್ ಪಟ್ಟಕ್ಕೇರಿದ ತಂಡ ಎನಿಸಿಕೊಂಡಿದೆ. ಐಪಿಎಲ್ ಇತಿಹಾಸದಲ್ಲಿ ಬರೊಬ್ಬರಿ 5 ಬಾರಿ ಟ್ರೋಫಿಯನ್ನು ಎತ್ತಿ ಹಿಡಿದ ಸಾಧನೆ ಮಾಡಿದೆ ಮುಂಬೈ ಇಂಡಿಯನ್ಸ್. ಆದರೆ 2013ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬಳಿಕ ಒಂದು ಬಾರಿಯೂ ತನ್ನ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆದ್ದುಕೊಂಡಿಲ್ಲ.
ಹೀಗಾಗಿ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೊಚ್ಚಲ ಪಂದ್ಯವನ್ನು ಅತಿ ಹೆಚ್ಚು ಬಾರಿ ಸೋತ ಕೆಟ್ಟ ದಾಖಲೆಯನ್ನು ಕೂಡ ಹೊಂದಿದೆ. 2013ರಿಂದ ಕಳೆದ ಆವೃತ್ತಿಯವರೆಗೆ ಸತತ 10 ಐಪಿಎಲ್ ಟೂರ್ನಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ತನ್ನ ಚೊಚ್ಚಲ ಪಂದ್ಯದಲ್ಲಿ ಸೋಲು ಅನುಭವಿಸಿ ಈ ದಾಖಲೆ ಹೊಂದಿದೆ. 2013ರಿಂದ ಮುಂಬೈ ಇಂಡಿಯನ್ಸ್ ತಂಡ ತನ್ನ ಚೊಚ್ಚಲ ಪಂದ್ಯವನ್ನು ಯಾವ ತಂಡಗಳ ವಿರುದ್ಧ ಸೋತಿದೆ ಎಂಬ ಮಾಹಿತಿಯನ್ನು ಇಲ್ಲಿ ನೋಡೋಣ.
ಮುಂಬೈ ಇಂಡಿಯನ್ಸ್ ತಂಡದ ಈ ಆರಂಭಿಕ ಪಂದ್ಯಸ ಸೋಲಿನ ಅಭಿಯಾನ 2013ರಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಿಂದಲೇ ಆರಂಭವಾಗಿತ್ತು ಎಂಬುದು ಕುತೂಹಲಕಾರಿ ಅಂಶ. ಬಳಿಕ 2014ರಲ್ಲಿ ಕೆಕೆಆರ್ ವಿರುದ್ಧ ಸೋಲು ಕಂಡಿದ್ದ ಎಂಐ, 2015ರಲ್ಲಿ ಮತ್ತೆ ಕೆಕೆಆರ್ ವಿರುದ್ಧ ಸೋಲು ಕಂಡಿತ್ತು. ಇನ್ನು 2016ರಲ್ಲಿ ಪುಣೆ ವಿರುದ್ಧ ಸೋತಿದ್ದ ರೋಹಿತ್ ಪಡೆ 2017ರಲ್ಲಿಯೂ ಪುಣೆ ವಿರುದ್ಧ ಸೋಲಿನ ರುಚಿ ಕಂಡಿತ್ತು.
2018ರಲ್ಲಿ ಚೆನ್ನೈ ವಿರುದ್ಧ, 2019ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲಿನ ಮೂಲಕ ಅಭಿಯಾನ ಆರಂಭಿಸಿತ್ತು. ನಂತರ 2020ರಲ್ಲಿ ಚೆನ್ನೈ ವಿರುದ್ಧ ಸೋಲು ಕಂಡ ಮುಂಬೈ 2021ರಲ್ಲಿ ಆರ್‌ಸಿಬಿ ವಿರುದ್ಧ ಹಾಗೂ ಕಳೆದ ವರ್ಷ 2022ರ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸೋಲಿನ ಮೂಲಕವೇ ಅಭಿಯಾನವನ್ನು ಆರಂಭಿಸಿತು.