
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಮಧ್ಯಮ ಕ್ರಮಾಂಕದ ಆಟಗಾರನಾಗಿದ್ದ ರಜತ್ ಪಾಟಿದಾರ್ ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಂಡ ಕೆಲವೇ ದಿನಗಳಲ್ಲಿ ಟೂರ್ನಿಯಿಂದ ಹೊರಬಿದ್ದಿದ್ದರು.
ಹಿಮ್ಮಡಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಎನ್‌ಸಿಎಯಲ್ಲಿ ಚೇತರಿಸಿಕೊಳ್ಳುತ್ತಿದ್ದಯ ಟೂರ್ನಿಯ ಕೆಲ ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಮೊದಲಿಗೆ ನಿರೀಕ್ಷೆ ಇತ್ತು. ಆದರೆ ನಂತರದ ದಿನಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಜತ್ ಪಾಟಿದಾರ್ ಗಾಯದ ಸಮಸ್ಯೆ ದೊಡ್ಡ ಮಟ್ಟದಲ್ಲಿದ್ದು ಟೂರ್ನಿಗೆ ಅಲಭ್ಯರಾಗಿದ್ದಾರೆ ಎಂದು ಮಾಹಿತಿಯನ್ನು ಹಂಚಿಕೊಂಡಿತ್ತು.
ಹೀಗೆ ಟೂರ್ನಿಯಲ್ಲಿ ಯಾವುದೇ ಪಂದ್ಯವನ್ನೂ ಸಹ ಆಡದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೊರಬಿದ್ದಿದ್ದ ರಜತ್ ಪಾಟಿದಾರ್ ಆರೋಗ್ಯದ ಬಗ್ಗೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸ್ವತಃ ರಜತ್ ಪಾಟಿದಾರ್ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂಬುದನ್ನು ತಿಳಿಸಿದ್ದಾರೆ.
ಇದೇ ಪೋಸ್ಟ್‌ನಲ್ಲಿ ರಜತ್ ಪಾಟಿದಾರ್ ಯಾವಾಗಿನಿಂದ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂಬುದನ್ನೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬರೆದುಕೊಂಡಿದೆ. ರಜತ್ ಪಾಟಿದಾರ್ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂಬ ಸುದ್ದಿ ಕೇಳಿ ಸಂತಸವಾಗಿದೆ. ಮುಂದಿನ ವರ್ಷದಲ್ಲಿ ನೀವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಜರ್ಸಿಯನ್ನು ತೊಟ್ಟು ಕಣಕ್ಕಿಳಿಯುವುದನ್ನು ನೋಡಲು ನಾವು ಕಾತರರಾಗಿದ್ದೇವೆ. ಬೇಗ ಗುಣಮುಖರಾಗಿ ಎಂದು ಕೋರುತ್ತಿದ್ದೇವೆ ಎಂದು ಬರೆದುಕೊಂಡಿದೆ.
ಈ ಮೂಲಕ ರಜತ್ ಪಾಟಿದಾರ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿಯುವುದಿಲ್ಲ ಎಂಬುದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಿಳಿಸಿದ್ದು, ಮುಂದಿನ ಬಾರಿ ತಂಡದ ಪರ ಆಡಲಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದೆ.
ಇನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೆಡ್ ಮೇಲೆ ಥಂಬ್ಸ್ ಅಪ್ ಮಾಡುತ್ತಾ ಮಲಗಿರುವ ತಮ್ಮ ಫೋಟೊವನ್ನು ಹಂಚಿಕೊಂಡಿರುವ ರಜತ್ ಪಾಟಿದಾರ್ "ನನ್ನ ಎಲ್ಲಾ ಬೆಂಬಲಿಗರಿಗೆ ಒಂದು ಅಪ್‌ಡೇಟ್ ಕೊಡಬೇಕು ಎಂದುಕೊಂಡಿದ್ದೇನೆ. ನನಗೆ ತೊಂದರೆಯಾಗಿ ಪರಿಣಮಿಸಿದ್ದ ಒಂದು ಗಾಯದ ಸಮಸ್ಯೆಯಿಂದ ನಾನೀಗ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೇನೆ. ಸದ್ಯ ಆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ನಾನು ಚೇತರಿಸಿಕೊಳ್ಳುವ ಹಾದಿಯಲ್ಲಿದ್ದೇನೆ. ನಾನು ಆದಷ್ಟು ಬೇಗ ಚೇತರಿಸಿಕೊಂಡು ಮೈದಾನಕ್ಕೆ ಇಳಿದು ನನ್ನ ನೆಚ್ಚಿನ ಕ್ರಿಕೆಟ್ ಆಟವನ್ನು ಆಡಲು ಹಂಬಲಿಸುತ್ತಿದ್ದೇನೆ. ನನ್ನ ಚೇತರಿಕೆಗಾಗಿ ಪ್ರಾರ್ಥನೆ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಶೀಘ್ರದಲ್ಲಿಯೇ ಮರಳಲಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ಇನ್ನು ರಜತ್ ಪಾಟಿದಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಮಧ್ಯಮ ಕ್ರಮಾಂಕದ ಆಟಗಾರನಾಗಿದ್ದರು. ಈ ಬಾರಿ ರಜತ್ ಪಾಟಿದಾರ್ ಅನುಪಸ್ಥಿತಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಹಿನ್ನಡೆಯಾಗಿದೆ ಹಾಗೂ ಪರಿಣಾಮವನ್ನೂ ಸಹ ಬೀರಿದೆ. ಎಬಿ ಡಿ ವಿಲಿಯರ್ಸ್ ನಿವೃತ್ತಿ ಬಳಿಕ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಅಸೆಯಾಗಬಲ್ಲ ಆಟಗಾರ ಎಂಬ ಭರವಸೆ ಮೂಡಿಸಿದ್ದ ರಜತ್ ಪಾಟಿದಾರ್ ಇಲ್ಲದಿರುವುದು ಈ ಬಾರಿ ಆರ್‌ಸಿಬಿ ಮಧ್ಯಮ ಕ್ರಮಾಂಕದಲ್ಲಿ ಡಮ್ಮಿ ಎನಿಸಿಕೊಳ್ಳಲು ಕಾರಣವಾಗಿದೆ.