
ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲೀಗ್ ಹಂತದ ಪಂದ್ಯಗಳು ಜರುಗುತ್ತಿದ್ದು, ನಾಳೆ ( ಏಪ್ರಿಲ್ 20 ) ನಡೆಯಲಿರುವ 27ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯ ನಾಳೆ ಮಧ್ಯಾಹ್ನ 3.30ಕ್ಕೆ ಶುರುವಾಗಲಿದ್ದು, ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಷಿಯೇಷನ್ ಐಎಸ್ ಬಿಂದ್ರಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಟೂರ್ನಿಯಲ್ಲಿ ಇಲ್ಲಿಯವರೆಗೂ ಈ ಎರಡೂ ತಂಡಗಳೂ ಸಹ ತಲಾ 5 ಪಂದ್ಯಗಳನ್ನು ಆಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ಪಂದ್ಯಗಳಲ್ಲಿ ಗೆದ್ದು, 3 ಪಂದ್ಯಗಳಲ್ಲಿ ಸೋತು 4 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ ತಂಡ 3 ಪಂದ್ಯಗಳಲ್ಲಿ ಗೆದ್ದು, 2 ಪಂದ್ಯಗಳಲ್ಲಿ 6 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಪಂಜಾಬ್ ಕಿಂಗ್ಸ್ ತಂಡ ತನ್ನ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲನ್ನು ಕಂಡಿದೆ. ಇನ್ನು ಇತ್ತಂಡಗಳ ನಡುವಿನ ಈ ಪಂದ್ಯ 31ನೇ ಮುಖಾಮುಖಿ ಪಂದ್ಯವಾಗಿದ್ದು, ಇಲ್ಲಿಯವರೆಗೂ ನಡೆದಿರುವ ಪಂದ್ಯಗಳ ಪೈಕಿ ಯಾವ ತಂಡ ಎಷ್ಟು ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಎಷ್ಟು ಪಂದ್ಯಗಳಲ್ಲಿ ಸೋಲನ್ನು ಕಂಡಿದೆ ಎಂಬ ಮಾಹಿತಿ ಮುಂದಿದೆ..
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಇಲ್ಲಿಯವರೆಗೂ ಒಟ್ಟು 30 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಂಜಾಬ್ ಕಿಂಗ್ಸ್ ತಂಡ 17 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇತ್ತಂಡಗಳ ನಡುವಿನ ಮುಖಾಮುಖಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿಂತ ಪಂಜಾಬ್ ಕಿಂಗ್ಸ್ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದು ಬಲಿಷ್ಠವಾಗಿದೆ.

ಇನ್ನು ಕಳೆದ ವರ್ಷ ನಡೆದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದಲ್ಲಿ ಇತ್ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ಪಂದ್ಯಗಳಲ್ಲಿಯೂ ಪಂಜಾಬ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೋಲುಣಿಸಿದೆ.
ಮೊದಲನೇ ಪಂದ್ಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 5 ವಿಕೆಟ್‌ಗಳ ಗೆಲುವನ್ನು ಕಂಡಿದ್ದ ಪಂಜಾಬ್ ಕಿಂಗ್ಸ್ ಎರಡನೇ ಪಂದ್ಯದಲ್ಲಿ 54 ರನ್‌ಗಳ ಬೃಹತ್ ಅಂತರದಿಂದ ಗೆಲುವನ್ನು ಕಂಡಿತ್ತು. 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂಜಾಬ್ ಕಿಂಗ್ಸ್ 34 ರನ್‌ಗಳ ಅಂತರದಿಂದ ಗೆಲುವನ್ನು ಕಂಡಿದ್ದರೆ, ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ರನ್‌ಗಳ ಗೆಲುವನ್ನು ಕಂಡಿತ್ತು.
ಇತ್ತಂಡಗಳು ಮುಖಾಮುಖಿಯಾದಾಗ ಪಂಜಾಬ್ ಕಿಂಗ್ಸ್ ಗಳಿಸಿರುವ ಗರಿಷ್ಠ ಮೊತ್ತ 232 ಆಗಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಲೆ ಹಾಕಿರುವ ಗರಿಷ್ಠ ಮೊತ್ತ 226 ಆಗಿದೆ. ಇನ್ನು ಕನಿಷ್ಠ ಮೊತ್ತದ ವಿಚಾರಕ್ಕೆ ಬಂದರೆ ಇತ್ತಂಡಗಳ ನಡುವಿನ ಮುಖಾಮುಖಿ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಗಳಿಸಿರುವ ಕನಿಷ್ಠ ರನ್ 88 ಆಗಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಗಳಿಸಿರುವ ಕನಿಷ್ಠ ರನ್ 84 ಆಗಿದೆ.