ಐಪಿಎಲ್ 2023: ಸೋತ ಬೆನ್ನಲ್ಲೇ ರಾಜಸ್ಥಾನ್‌ಗೆ ದೊಡ್ಡ ಆಘಾತ: ಮುಂದಿನ ಪಂದ್ಯಕ್ಕೆ ಸ್ಟಾರ್ ಆಟಗಾರ ಅಲಭ್ಯ
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮೊದಲ ಪಂದ್ಯದಲ್ಲಿ ಅದ್ಭುತವಾಗಿ ಗೆದ್ದು ಆತ್ಮವಿಶ್ವಾಸದಿಂದ ಟೂರ್ನಿ ಆರಂಭಿಸಿದ್ದರೆ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಆಘಾತ ನೀಡಿತು. ಬಲಿಷ್ಠ ಆಟಗಾರರನ್ನು ಒಳಗೊಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಶಿಖರ್ ಧವನ್ ಪಡೆ ರೋಚಕ ಗೆಲುವು ಸಾಧಿಸಿದ್ದು ಮೇಲುಗೈ ಸಾಧಿಸಿದೆ. ಈ ಸೋಲಿನಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡ ಟೂರ್ನಿಯಲ್ಲಿ ಚೊದಲ ಸೋಲಿನ ರುಚಿ ಕಂಡಂತಾಗಿದೆ.
ಈ ಸೋಲಿನ ಕಹಿಯ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ತಂಡದ ಸ್ಟಾರ್ ಆಟಗಾರ ಜೋಸ್ ಬಟ್ಲರ್ ಮುಂದಿನ ಒಂದು ಪಂದ್ಯದಿಂದ ಹೊರಗುಳಿಯುವುದು ಅನಿವಾರ್ಯವಾಗಿದೆ. ಕ್ಯಾಚ್ ಪಡೆಯುವಾಗ ಜೋಸ್ ಬಟ್ಲರ್ ಬೆರಳಿಗೆ ಗಾಯವಾಗಿದ್ದು ಮುಂದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.

ಪಂಜಾಬ್ ಕಿಂಗ್ಸ್ ತಂಡದ ಬ್ಯಾಟರ್ ಶಾರೂಖ್ ಖಾನ್ ನೀಡಿದ ಕ್ಯಾಚ್ ಪಡೆಯುವ ಸಂದರ್ಭದಲ್ಲಿ ಜೋಸ್ ಬಟ್ಲರ್ ಅವರ ಕಿರು ಬೆರಳಿಗೆ ಗಾಯವಾಗಿದೆ. ಬಳಿಕ ರಾಜಸ್ಥಾನ್ ರಾಯಲ್ಸ್ ತಂಡ ಬ್ಯಾಟಿಂಗ್‌ಗೆ ಇಳಿದಾಗ ಜೋಸ್ ಬಟ್ಲರ್ ಆರಂಭಿಕನಾಗಿ ಕಣಕ್ಕಿಳಿಯದೆ ಆರ್ ಅಶ್ವಿನ್ ಯಶಸ್ವಿ ಜೈಸ್ವಾಲ್ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ್ದರು. ಮೂರನೇ ಕ್ರಮಾಂಕದಲ್ಲಿ ಜೊಸ್ ಬಟ್ಲರ್ ಕಣಕ್ಕಿಳಿದರು ಕೂಡ ಅವರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಬಂದಿರಲಿಲ್ಲ.
ಜೋಸ್ ಬಟ್ಲರ್ ರಾಜಸ್ಥಾನ್ ರಾಯಲ್ಸ್ ತಂಡದ ಅತ್ಯಂತ ಪ್ರಮುಖ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ ರನ್ ಮಳೆ ಹರಿಸಿದ್ದ ಜೋಸ್ ಬಟ್ಲರ್ ನಾಲ್ಕು ಶತಕ ಸಿಡಿಸಿದ್ದರು. ಇನ್ನು ಈ ಬಾರಿಯ ಆವೃತ್ತಿಯ ಮೊದಲ ಪಂದ್ಯದಲ್ಲಿಯೂ ಅಬ್ಬರಿಸಿದ್ದ ಇಂಗ್ಲೀಶ್ ಆಟಗಾರ ಅದೇ ಫಾರ್ಮ್ ಮುಂದುವರಿಸುವ ವಿಶ್ವಾಸ ಮೂಡಿಸಿದ್ದಾರೆ. ಈ ಸಂದರ್ಭದಲ್ಲಿ ಗಾಯದಿಂದ ಅಲಭ್ಯವಾಗಲಿರುವುದು ಆರ್ಆರ್ ಪಡೆಗೆ ಹಿನ್ನಡೆಯಾಗುವುದರಲ್ಲಿ ಅನುಮಾನವಿಲ್ಲ. ಆದರೆ ಸಂಜು ಬಳಗದಲ್ಲಿ ಸಾಕಷ್ಟು ಪ್ರಮಾಣದ ಸ್ಪೋಟಕ ಬ್ಯಾಟರ್‌ಗಳು ಇದ್ದಾರೆ ಎಂಬುದು ಕೂಡ ಅಷ್ಟೇ ನಿಜ.
ಇನ್ನು ಪಂಜಾಬ್ ಕಿಂಗ್ಸ್ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಗೆಲ್ಲುವ ಮೂಲಕ ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿಯೂ ಗೆದ್ದ ಸಾಧನೆ ಮಾಡಿದೆ. ಮೊಹಾಲಿ ಮೂಲದ ಫ್ರಾಂಚೈಸಿ ಐಪಿಎಲ್ ಇತಿಹಾಸದಲ್ಲಿ ಕೇವಲ ಮೂರನೇ ಬಾರಿಗೆ ಈ ಅಪರೂಪದ ಸಾಧನೆ ಮಾಡಿದೆ. ಇದಕ್ಕೂ ಮುನ್ನ ಕೇವಲ ಎರಡು ಆವೃತ್ತಿಗಳಲ್ಲಿ ಮಾತ್ರವೇ ಪಂಜಾಬ್ ಫ್ರಾಂಚೈಸಿ ಆರಂಭಿಕ ಎರಡು ಪಂದ್ಯಗಳಲ್ಲಿಯೂ ಗೆದ್ದು ಬೀಗಿತ್ತು.
ಇನ್ನು ಕಳೆದ ಬಾರಿಯ ರನ್ನರ್‌ಅಪ್ ತಂಡವಾಗಿರುವ ರಾಜಸ್ಥಾನ್ ರಾಯಲ್ಸ್ ಆರಂಭಿಕ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿತ್ತು. ಬ್ಯಾಟಿಂಬಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಮಿಂಚಿ ಟೂರ್ನಿಯನ್ನು ಭರ್ಜರಿಯಾಗಿ ಆರಂಭಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಪಡೆ ಎಡವಿದ್ದು ಐದು ರನ್‌ಗಳ ಅಲ್ಪ ಅಂತರದ ಸೋಲು ಕಂಡಿದೆ. ಆರ್‌ಆರ್ ತಂಡ ತನ್ನ ಮುಂದಿನ ಪಂದ್ಯವನ್ನು ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಇನ್ನು ಕೂಡ ಗೆಲುವಿನ ಖಾತೆ ತೆರೆಯಲು ವಿಫಲವಾಗಿದೆ.
ಇನ್ನು ಪಂಜಾಬ್ ಕಿಂಗ್ಸ್ ತಂಡ ಮೂರನೇ ಪಂದ್ಯದ ಮೇಲೆ ಕಣ್ಣಿಟ್ಟಿದ್ದು ಮುಂದಿನ ಸೆಣೆಸಾಟದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಶಿಖರ್ ಧವನ್ ಪಡೆಗೆ ಸವಾಲೊಡ್ಡಲಿದೆ. ಈ ಪಂದ್ಯದಲ್ಲಿಯೂ ಗೆದ್ದು ಗೆಲುವಿನ ಓಟವನ್ನು ಮುಂದುವರಿಸುವ ಆತ್ಮವಿಶ್ವಾಸದಲ್ಲಿದೆ ಪಂಜಾಬ್ ಕಿಂಗ್ಸ್ ತಂಡ. ಹೀಗಾಗಿ ಈ ಸೆಣೆಸಾಟ ಕೂಡ ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications