ಇಂಡಿಯನ್ ಪ್ರೀಮಿಯರ್ ಲೀಗ್ ಮೊದಲ ಎರಡು ಪಂದ್ಯಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡಿ ಮಿಂಚಿರುವ ಆಟಗಾರ ಚೆನ್ನೈ ಸೂಪರ್ ಕಿಂಗ್ಸ್‌ನ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್. ಸಿಎಸ್‌ಕೆ ಪರವಾಗಿ ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನದ ಭರವಸೆ ಮೂಡಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಋತುರಾಜ್ ಗಾಯಕ್ವಾಡ್ ಈ ಬಾರಿಯ ಆವೃತ್ತಿಯಲ್ಲಿ ತನ್ನ ಗುರಿ ಏನೆಂಬುದನ್ನು ವಿವರಿಸಿದ್ದಾರೆ.
ಋತುರಾಜ್ ಗಾಯಕ್ವಾಡ್ ಈ ಬಾರಿಯ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್‌ನ ಬಗ್ಗೆ ಯೋಚನೆ ಮಾಡಿಲ್ಲ ಎಂದಿದ್ದಾರೆ. ಆದರೆ ಈ ಬಾರಿಯ ಆವೃತ್ತಿಯಲ್ಲಿ ತನ್ನ ತಂಡದ ಪರವಾಗಿ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಾ ಸ್ಥಿರ ಪ್ರದರ್ಶನ ನೀಡುವ ಗುರಿಯನ್ನು ಹೊಂದಿರುವುದಾಗಿ ಹೇಳಿದ್ದಾರೆ ಋತುರಾಜ್ ಗಾಯಕ್ವಾಡ್. ಇದಕ್ಕೆ ಪೂರಕವಾಗಿ ಆರಂಭಿಕ ಎರಡು ಪಂದ್ಯಗಳಲ್ಲಿಯೂ ಅರ್ಧ ಶತಕವನ್ನು ಗಳಿಸಿದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.

ಅಂದಹಾಗೆ ಋತುರಾಜ್ ಗಾಯಕ್ವಾಡ್ 2021ರ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು 16 ಪಂದ್ಯಗಳಲ್ಲಿ 635 ರನ್‌ಗಳಿಸಿದ್ದು ಆರೆಂಜ್ ಕ್ಯಾಪ್ ಗಳಿಸಿಕೊಂಡಿದ್ದರು. ಆದರೆ 2022ರ ಐಪಿಎಲ್‌ನಲ್ಲಿ ಮಂಕಾಗಿದ್ದ ಋತು 368 ರನ್‌ಗಳನ್ನಷ್ಟೇ ಗಳಿಸಿದ್ದರು. ಕಳೆದ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡ ಕೂಡ ಕಳಪೆ ಸಾಧನೆ ಮಾಡಿದ್ದು ಆಡಿದ 14 ಪಂದ್ಯಗಳಲ್ಲಿ 4 ಪಂದ್ಯಗಳನ್ನಷ್ಟೇ ಗೆದ್ದಿತ್ತು.
"ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಆರೆಂಜ್ ಕ್ಯಾಪ್ ಅಥವಾ ಮತ್ಯಾವುದರ ಬಗ್ಗೆಯೂ ಗಮನಹರಿಸಿಲ್ಲ. ತಂಡದ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿಬೇಕು ಎಂಬುದಷ್ಟೆ ನನ್ನ ಗುರಿ. ಕಳೆದ ವರ್ಷ ನಾವು ಉತ್ತಮ ಆವೃತ್ತಿಯನ್ನು ಹೊಂದಿರಲಿಲ್ಲ. ಹಾಗಾಗಿ ಈ ಬಾರಿಯ ಆವೃತ್ತಿಯಲ್ಲಿ ಉತ್ತಮ ಆರಂಭವನ್ನು ನೀಡುವುದು ನನ್ನ ಹಾಗೂ ಡೆವ್(ಡೆವೋನ್ ಕಾನ್ವೆ) ಗುರಿಯಾಗಿದೆ. ಕಳೆದ ಎರಡು ಪಂದ್ಯಗಳಲ್ಲಿಯೂ ಇದು ಸಾಧ್ಯವಾಗಿದ್ದು ಮುಂದಿನ ಪಂದ್ಯಗಳಲ್ಲಿಯೂ ಅದನ್ನು ಮುಂದುವರಿಸಿಕೊಂಡು ಹೋಗುವ ವಿಶ್ವಾಸವಿದೆ" ಎಂದಿದ್ದಾರೆ ಋತುರಾಜ್ ಗಾಯಕ್ವಾಡ್.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್‌ನ ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಸೋಲು ಅನುಭವಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಸ್ಪೋಟಕ ಪ್ರದರ್ಶನ ನಿಡಿದ ಸಿಎಸ್‌ಕೆ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 12 ರನ್‌ಗಳ ಅಂತರದ ಗೆಲುವು ಸಾಧಿಸಿದೆ. ನಾಲ್ಕು ವರ್ಷಗಳ ಬಳಿಕ ಚೆಪಾಕ್ ಕ್ರೀಡಾಂಗಣದಲ್ಲಿ ಆಡಿದ ಸಿಎಸ್‌ಕೆ ಮೊದಲ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡಿದೆ.