ರಾಜಸ್ಥಾನ್ ರಾಯಲ್ಸ್ ತಂಡ ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲ್ಲುವ ಮೂಲಕ ಲೀಗ್ ಹಂತವನ್ನು ಪೂರ್ಣಗೊಳಿಸಿದೆ. ಆದರೆ ಈ ಸಂದರ್ಭದಲ್ಲಿ ಸಂಜು ಸ್ಯಾಮ್ಸನ್ ಪಡೆ 14 ಅಂಕಗಳನ್ನು ಮಾತ್ರವೇ ಪಡೆದುಕೊಂಡಿದ್ದು ಅಂಕಪಟ್ಟಿಯಲ್ಲಿ ಸದ್ಯ ಐದನೇ ಸ್ಥಾನದಲ್ಲಿದೆ. ಈ ಸಂದರ್ಭದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ ಪ್ರತಿಕ್ರಿಯೆ ನೀಡಿದ್ದು ತಂಡ ಲೀಗ್ ಹಂತದಲ್ಲಿ 14 ಅಂಕಗಳನ್ನು ಮಾತ್ರವೇ ಪಡೆದುಕೊಂಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರೂ ಪ್ಲೇಆಫ್‌ಗೇರುವ ಸಣ್ಣ ಅವಕಾಶ ಇನ್ನು ಕೂಡ ಉಳಿದುಕೊಂಡಿದೆ. ಆದರೆ ಇದಕ್ಕಾಗಿ ಸಂಜು ಸ್ಯಾಮ್ಸನ್ ನೇತೃತ್ವದ ಆರ್‌ಆರ್ ತಂಡ 14 ಅಂಕಗಳನ್ನು ಈಗಾಗಲೇ ಖಾತೆಯಲ್ಲಿ ಹೊಂದಿದ್ದು ಒಂದು ಪಂದ್ಯಗಳನ್ನು ಬಾಕಿಯಿರಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕೊನೆಯ ಪಂದ್ಯದಲ್ಲಿ ಸೋಲು ಅನುಭವಿಸುವುದನ್ನು ಕಾಯುತ್ತಿದೆ. ಅಲ್ಲದೆ ಕೊಲ್ಕತ್ತಾ ನೈಟ್ ರೈಡರ್ಸ್ ಕೂಡ ಈ ಸ್ಪರ್ಧೆಯಲ್ಲಿ ಇನ್ನೂ ಉಳಿದುಕೊಂಡಿದೆ.

ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇಆಫ್‌ಗೆ ಪ್ರವೇಶಿದಬೇಕಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋಲು ಅನುಭವಿಸುವುದು ಮಾತ್ರವಲ್ಲದೆ ಸೋಲಿನ ಅಂತರವೂ ಹೆಚ್ಚಿರಬೇಕಾಗುತ್ತದೆ. ಹಾಗಿದ್ದಾಗ ಮಾತ್ರವೇ ಅಂಕಪಟ್ಟಿಯಲ್ಲಿ ಆರ್‌ಆರ್ ತಂಡ 14 ಅಂಕಗಳನ್ನು ಪಡೆದುಕೊಂಡಿದ್ದರೂ ಪ್ಲೇಆಫ್‌ಗೆ ಪ್ರವೇಶ ಪಡೆಯಲು ಸಾಧ್ಯ.
"ನಮ್ಮ ತಂಡದಲಿರುವ ಆಟಗಾರರ ಗುಣಮಟ್ಟ ಹಾಗೂ ಸಾಮರ್ಥ್ಯವನ್ನು ನೋಡಿದಾಗ ಅಂಕಪಟ್ಟಿಯಲ್ಲಿ ನಾವು ಐದನೇ ಸ್ಥಾನದಲ್ಲಿರುವುದನ್ನು ನೋಡಿ ಸ್ವಲ್ಪ ಆಘಾತವಾಗುತ್ತದೆ. ಪ್ರಾಮಾಣಿಕವಾಗಿ ನೋಡಿದರೆ ಸಾಕಷ್ಟು ವಿಚಾರಗಳ ಬಗ್ಗೆ ಹಿಂದಿರುವು ನೋಡಿ ಚರ್ಚಿಸಿ ಅನೇಕ ಸಂಗತಿಗಳನ್ನು ಕಲಿಯುವುದು ಇದೆ" ಎಂದು ಹೇಳಿಕೆ ನೀಡಿದ್ದಾರೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್. ಪಂಜಾಬ್ ಕಿಂಗ್ಸ್ ವಿರುದ್ಧ ಲೀಗ್ ಹಂತದಲ್ಲಿ ಆಡಿ್ ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಸಂಜು ಪ್ರತಿಕ್ರಿಯೆ ನೀಡಿದರು.
ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಫೈನಲ್‌ಗೆ ಪ್ರವೇಶ ಪಡೆದು ರನ್ನರ್‌ಅಪ್ ತಂಡವಾಗಿ ಹೊರಹೊಮ್ಮಿತ್ತು. ಕಳೆದ ಆವೃತ್ತಿಯ ಫಾರ್ಮ್‌ಅನ್ನು ಈ ಬಾರಿಯೂ ಮೊದಲ ಹಂತದಲ್ಲು ಮುಂದುವರಿಸಲು ಸಂಜು ಪಡೆ ಯಶಸ್ವಿಯಾಗಿತ್ತು. ಆರಂಬಿಕ ಹಂತದಲ್ಲಿ ಆಡಿದ್ದ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವು ಸಾಧಿಸಿತ್ತು ಆರ್‌ಆರ್ ತಂಡ. ಆದರೆ ಅದಾದ ಬಳಿಕ ಗೆಲುವಿನ ಲಯವನ್ನು ಕಳೆದುಕೊಂಡ ತಂಡ ಸಂಕಷ್ಟಕ್ಕೆ ಸಿಲುಕಿತು.
ಇನ್ನು ರಾಜಸ್ಥಾನ್ ರಾಯಲ್ಸ ತಂಡ ಪರವಾಗಿ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅಮೋಘ ಪ್ರದರ್ಶನ ನೀಡಿದ್ದು ಟೂರ್ನಿಯಲ್ಲಿ 625 ರನ್‌ಗಳನ್ನು ಗಳಿಸಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಅಮ್‌ಕ್ಯಾಪ್‌ಡ್ ಆಟಗಾರನೋರ್ವ ದಾಖಲಿಸಿದ ಅತಿ ಹೆಚ್ಚಿನ ರನ್ ಎಂಬ ದಾಖಲೆಯಾಗಿದೆ. ಇದಕ್ಕೂ ಮುನ್ನ 2008ರಲ್ಲಿ ಶಾನ್ ಮಾರ್ಶ್ 618 ರನ್‌ಗಳನ್ನು ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಇನ್ನು ಕಳೆದ ಆವೃತ್ತಿಯ ಪರ್ಪಲ್‌ಕ್ಯಾಪ್ ವಿನ್ನರ್ ಯುಜುವೇಂದ್ರ ಚಾಹಲ್ ಈ ಬಾರಿಯ ಟೂರ್ನಿಯಲ್ಲಿ 14 ಪಂದ್ಯಗಳಲ್ಲಿ 21 ವಿಕೆಟ್ ಪಡೆದು ತಮ್ಮ ಯಶಸ್ಸು ಮುಂದುವರಿಸಿದ್ದಾರೆ. ಇನ್ನು ಆರ್ ಅಶ್ವಿನ್ ಕೂಡ 13 ಪಂದ್ಯಗಳಿಂದ 14 ವಿಕೆಟ್ ಪಡೆದಿದ್ದಾರೆ.