2022ಕ್ಕೆ ಚಕ್ಕರ್, 2023ಕ್ಕೆ ಹಾಜರ್: ಈ ಬಾರಿಯ ಐಪಿಎಲ್‌ನಲ್ಲಿ ಕಮ್‌ಬ್ಯಾಕ್ ಮಾಡಲಿರುವ 7 ಕ್ರಿಕೆಟಿಗರು!
ಶುಕ್ರವಾರದಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿ ಅದ್ದೂರಿಯಾಗಿ ಚಾಲನೆ ಪಡೆಯಲಿದ್ದು ಕ್ರಿಕೆಟ್ ಪ್ರೇಮಿಗಳಿಗೆ ಮುಂದಿನ ಎರಡು ತಿಂಗಳು ಭರಪೂರ ಮನರಂಜನೆ ದೊರೆಯಲಿದೆ. 2019ರ ಬಳಿಕ ಇದೇ ಮೊದಲ ಬಾರಿಗೆ ಹೋಮ್ ಹಾಗೂ ಅವೇ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು ಎಲ್ಲಾ 10 ತಂಡಗಳು ಕೂಡ ತವರಿನಲ್ಲಿ ಪ್ರೇಕ್ಷಕರ ಸಮ್ಮುಖದಲ್ಲಿ ಆಡಲು ಸಜ್ಜಾಗಿದೆ.
ಇನ್ನು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಗಾಯಗೊಂಡು ಹಾಗೂ ಇತರ ಕಾರಣಗಳಿಂದ ಟೂರ್ನಿಯಿಂದ ಹೊರಗುಳಿದಿದ್ದ ಕೆಲ ಪ್ರಮುಖ ಆಟಗಾರರು ಈ ಬಾರಿಯ ಐಪಿಎಲ್‌ನಲ್ಲಿ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಕಮ್‌ಬ್ಯಾಕ್ ಮಾಡಲಿರುವ 7 ಸ್ಟಾರ್ ಕ್ರಿಕೆಟಿಗರ ಬಗ್ಗೆ ಇಲ್ಲಿದೆ ಮಾಹಿತಿ.

ದೀಕಪ್ ಚಾಹರ್: 2022ರ ಐಪಿಎಲ್ ಟೂರ್ನಿಗೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ದೀಪಕ್ ಚಾಹರ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಭಾರೀ ಮೊತ್ತ ಹೂಡಿಕೆ ಮಾಡಿತ್ತು. ಬರೊಬ್ಬರಿ 14 ಕೋಟಿ ಮೊತ್ತಕ್ಕೆ ದೀಪಕ್ ಚಾಹರ್ ಅವರನ್ನು ಖರೀದಿಸಿತ್ತು. ಆದರೆ ಗಾಯದ ಕಾರಣ ಅವರು ಸಂಪೂರ್ಣ ಟೂರ್ನಿಯಿಂದ ಹೊರಗುಳಿಯಬೇಕಾಯಿತು. ಆದರೆ ಈ ಬಾರಿ ಮತ್ತೆ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿಯಲು ಚಾಹರ್ ಸಿದ್ದವಾಗಿದ್ದಾರೆ.
ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ ಪಿಯೂಷ್ ಚಾವ್ಲ: ಅನುಭವಿ ಸ್ಪಿನ್ನರ್ ಪಿಯೂಷ್ ಚಾವ್ಲ 2022ರ ಐಪಿಎಲ್ ಹರಾಜಿನಲ್ಲಿ ಯಾವ ತಂಡ ಕೂಡ ಖರೀದಿಸದ ಕಾರಣ ಹರಾಜಾಗದೆ ಉಳಿದುಕೊಂಡಿದ್ದು ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಈ ಬಾರಿಯ ಐಪಿಎಲ್‌ನಲ್ಲಿ ಅವರು ಮತ್ತೆ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ.
ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ: ಇನ್ನು ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ಸ್ಪಿನ್ನರ್‌ಗಳ ಪೈಕಿ ಒಬ್ಬರಾಗಿರುವ ಅಮಿತ್ ಮಿಶ್ರಾ ಕಳೆದ ವರ್ಷದ ಐಪಿಎಲ್‌ನಲ್ಲಿ ಯಾವ ತಂಡಕ್ಕೂ ಹರಾಜಾಗದ ಕಾರಣದಿಂದಾಗಿ ಆಡುವ ಅವಕಾಶ ಕಳೆದುಕೊಂಡಿದ್ದರು. ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಹೀರೋ ಎಂದೇ ಖ್ಯಾತವಾಗಿರುವ ಅಮಿತ್ ಮಿಶ್ರಾ ಅವರನ್ನು ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡ ತೆಕ್ಕೆಗೆ ಹಾಕಿಕೊಂಡಿದ್ದು ಮತ್ತೆ ಮಿಂಚುಹರಿಸಲು ವಿಶ್ವಾಸದಲ್ಲಿದ್ದಾರೆ ಅನುಭವಿ ಕ್ರಿಕೆಟಿಗ.
ಇಂಗ್ಲೆಂಡ್ ವೇಗಿ ಮಾರ್ಕ್ ವುಡ್: ಗಾಯದ ಕಾರಣದಿಂದಾಗಿ ಇಂಗ್ಲೆಂಡ್‌ನ ಸ್ಟಾರ್ ವೇಗದ ಬೌಲರ್ ಮಾರ್ಕ್ ವುಡ್ 2022ರ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದರು. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಆಂಡ್ರ್ಯೋ ಟೈ ಅವರೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಟೈ ಎಲ್‌ಎಸ್‌ಜಿ ಪರ ಮಿಂಚಲು ವಿಫಲವಾಗಿದ್ದು ಈ ಬಾರಿ ಮಾರ್ಕ್ ವುಡ್ ಅವರನ್ನು ಇಂಗ್ಲೆಂಡ್ ರೀಟೈನ್ ಮಾಡಿಕೊಂಡಿದೆ.
ಐಪಿಎಲ್‌ಗೆ ಮರಳಲಿದ್ದಾರೆ ಆಲ್‌ರೌಂಡರ್ ಬೆನ್ ಸ್ಟೋಕ್ಸ್: ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ವೈಯಕ್ತಿಕ ಕಾರಣಗಳಿಂದಾಗಿ 2022ರ ಐಪಿಎಲ್ ಆವೃತ್ತಿಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದರು. ಇದೀಗ ಅವರು ಮತ್ತೆ ಐಪಿಎಲ್‌ಗೆ ಮರಳಿದ್ದು ಈ ಬಾರಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಲಿದ್ದಾರೆ.
ಯುವ ಸೆನ್ಸೇಶನ್ ಸ್ಯಾಮ್ ಕರನ್: ಇಂಗ್ಲೆಂಡ್‌ನ ಮತ್ತೋರ್ವ ಪ್ರಮುಖ ಆಟಗಾರ ಸ್ಯಾಮ್ ಕರನ್ ಕೂಡ ಕಳೆದ ಐಪಿಎಲ್ ಆವೃತ್ತಿಯಿಂದ ಹೊರಗುಳಿದಿದ್ದರು. ಗಾಯದ ಕಾರಣದಿಂದಾಗಿ ಸ್ಯಾಮ್ ಕರನ್ ಈ ಹಿಂದಿನ ಆವೃತ್ತಿಯ ಐಪಿಎಲ್‌ನಲ್ಲಿ ಆಡಿರಲಿಲ್ಲ. ಈ ಬಾರಿ ಐಪಿಎಲ್‌ನಲ್ಲಿ ಮಿಂಚುಯ ಹರಿಸಲು ಸ್ಯಾಮ್ ಕರನ್ ಸಜ್ಜಾಗಿದ್ದು ಈ ಯುವ ಆಲ್‌ರೌಂಡರ್‌ಗಾಗಿ ಪಂಜಾಬ್ ಕಿಂಗ್ಸ್ ತಂಡ ದಾಖಲೆಯ ಮೊತ್ತವನ್ನು ವ್ಯಯಿಸಿದೆ. 18.5 ಕೋಟಿ ಮೊತ್ತಕ್ಕೆ ಹರಾಜಾಗುವ ಮೂಲಕ ಸ್ಯಾಮ್ ಕರನ್ ಐಪಿಎಲ್‌ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.
ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್: ಗಾಯದ ಕಾರಣದಿಮದಾಗಿ 2022ರ ಐಪಿಎಲ್ ಆವೃತ್ತಿಗೆ ಜೋಫ್ರಾ ಆರ್ಚರ್ ಲಭ್ಯವಿರುವುದಿಲ್ಲ ಎಂಬುದರ ಅರಿವಿದ್ದರೂ ಜೋಫ್ರಾ ಆರ್ಚರ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಖರಿದಿಸಿತ್ತು. ಈ ಬಾರಿಯ ಐಪಿಎಲ್‌ಗೂ ಮುನ್ನ ಮುಂಬೈ ಇಂಡಿಯನ್ಸ್ ಆರ್ಚರ್ ಅವರನ್ನು ರೀಟೈನ್ ಮಾಡಿಕೊಂಡಿದ್ದು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಪದಾರ್ಪಣೆಗೆ ಯುವ ವೇಗಿ ಸಿದ್ಧವಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications