IPL 2023: ಕೆಎಲ್ ರಾಹುಲ್ ತಂಡದ ಬ್ಯಾಟಿಂಗ್‌ಗೆ ಹಿಗ್ಗಾಮುಗ್ಗ ಜಾಡಿಸಿದ ವೆಂಕಟೇಶ್ ಪ್ರಸಾದ್
ಶನಿವಾರ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಐಪಿಎಲ್ ಇತಿಹಾಸದ ಅತ್ಯಂತ ಆಘಾತಕಾರಿ ಸೋಲು ಅನುಭವಿಸಿತು. ಗೆಲುವಿನ ಸನಿಹದಲ್ಲಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೊನೆಯ 35 ಎಸೆತಗಳಲ್ಲಿ 30 ರನ್‌ಗಳಿಸುವ ಸುಲಭ ಸವಾಲು ಹೊಂದಿತ್ತು. ಅದೂ ತಂಡದ ಕೈಯ್ಯಲ್ಲಿ 9 ವಿಕೆಟ್‌ಗಳಿದ್ದರೂ ಈ ಗುರಿ ಬೆನ್ನಟ್ಟಲು ಸಾಧ್ಯವಾಗದೆ ಸೋಲು ಕಂಡಿದೆ.
ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋತ ರೀತಿಗೆ ಕ್ರಿಕೆಟ್ ಅಭಿಮಾನಿಗಳು ಆಘಾತವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಎಲ್‌ಎಸ್‌ಜಿ ತಂಡದ ಬ್ಯಾಟಿಂಗ್ ರೀತಿಯ ಬಗ್ಗೆ ವಿಶ್ಲೇಷಣೆಗಳು ನಡೆಯುತ್ತಿದ್ದು ಕ್ರಿಕೆಟ್ ಪಂಡಿತರು ತೀವ್ರ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಗಿರುವ ವೆಂಕಟೇಶ್ ಪ್ರಸಾದ್ ರಾಹುಲ್ ಪಡೆಯ ಬ್ಯಾಟಿಂಗ್ ಶೈಲಿಗೆ ತಮ್ಮದೇ ಶೈಲಿಯಲ್ಲಿ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.

ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ಟ್ವೀಟ್‌ನಲ್ಲಿ ವೆಂಕಟೇಶ್ ಪ್ರಸಾದ್ '35 ಎಸೆತಗಳಲ್ಲಿ 30 ರನ್ ಬೇಕಿದ್ದು 9 ವಿಕೆಟ್ ಇರುವಾಗ ಸ್ವಲ್ಪ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುವುದಷ್ಟೇ ಅಗತ್ಯವಾಗಿತ್ತು. 2020ರಲ್ಲಿ ಪಂಜಾಬ್ ಪರವಾಗಿಯೂ ಇಂಥದ್ದೇ ಕೆಲ ಪರಿಸ್ಥಿತಿಗಳುಂಟಾಗಿತ್ತು. ತೀರಾ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯಗಳಲ್ಲಿ ಕೂಡ ತಂಡ ಸೋಲು ಕಾಣುತ್ತಿತ್ತು. ಬೌಲಿಂಗ್‌ನಲ್ಲಿ ಗುಜರಾತ್ ಟೈಟಾನ್ಸ್ ಅದ್ಭುತ ಪ್ರದರ್ಶನ ನೀಡಿದ್ದು ಹಾರ್ದಿಕ್ ಪಾಂಡ್ಯ ನಾಯಕತ್ವವನ್ನು ಬುದ್ದಿವಂತಿಕೆಯಿಂದ ನಿಭಾಯಿಸಿದರು. ಎಲ್‌ಕೆಒ ಅವರಿಂದ ಮೂರ್ಖತನದ ಆಟ" ಎಂದಿದ್ದಾರೆ ವೆಂಕಟೇಶ್ ಪ್ರಸಾದ್.
ಕುತೂಹಲಕಾರಿ ವಿಚಾರವೆಂದರೆ ಈ ಟ್ವೀಟ್‌ನಲ್ಲಿ ಕೆಎಲ್ ರಾಹುಲ್ ಅವರ ಹೆಸರನ್ನು ನೇರವಾಗಿ ವೆಂಕಟೇಶ್ ಪ್ರಸಾದ್ ಉಲ್ಲೇಖಿಸಿಲ್ಲ. 'ಎಲ್‌ಕೆಒ' ಎಂದು ಉಲ್ಲೇಖಿಸಿ ವೆಂಕಟೇಶ್ ಪ್ರಸಾದ್ ಟೀಕಿಸಿದ್ದಾರೆ. ಕೆಎಲ್ ರಾಹುಲ್ ಈ ಪಂದ್ಯದಲ್ಲಿ ಕಡೇಯ ಹಂತದವರೆಗೂ ಕ್ರೀಸ್‌ನಲ್ಲಿದ್ದರು ಕೂಡ ರನ್ ವೇಗವನ್ನು ಹೆಚ್ಚಿಸುವ ಪ್ರಯತ್ನ ನಡೆಸಲಿಲ್ಲ. ಇತರ ಬ್ಯಾಟರ್‌ಗಳು ಕೂಡ ಟೈಟನ್ಸ್ ತಂಡದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ವಿಫಲವಾದರು.
ಇನ್ನು ವೀರೇಂದ್ರ ಸೆಹ್ವಾಗ್ ಕೂಡ ಎಲ್‌ಎಸ್‌ಜಿ ತಂಡದ ಬ್ಯಾಟಿಂಗ್ ಬಗ್ಗೆ ಕಟುವಾಗಿ ಟೀಕಿಸಿದ್ದಾರೆ. ಉಫ್, ಇದನ್ನು ಸೋಲಲು ಹೇಗೆ ಸಾಧ್ಯ? ಗುಜರಾತ್ ಟೈಟನ್ಸ್ ತಂಡದಿಂದ ಚಾಣಾಕ್ಷತನದ ಆಟ. ಇಂಥಾ ಮೊತ್ತವನ್ನು ರಕ್ಷಣೆ ಮಾಡಬೇಕಾದರೆ ಬೌಲಿಂಗ್ ಹಾಗೂ ನಾಯಕತ್ವದ ಪಾತ್ರ ಅತ್ಯಂತ ವಿಶೇಷವಾಗಿದೆ" ಎಂದಿದ್ದಾರೆ ವೀರೇಂದ್ರ ಸೆಹ್ವಾಗ್.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟನ್ಸ್ ತಂಡ 135 ರನ್‌ಗಳನ್ನು ಗಳಿಸಿ ಸುಲಭ ಸವಾಲು ಮುಂದಿಟ್ಟಿತ್ತು. ಈ ಮೊತ್ತವನ್ನು ಬೆನ್ನಟ್ಟಿಲು ಆರಂಭಿಸಿದ ಎಲ್‌ಎಸ್‌ಜಿ ತಂಡ 14.2 ಓವರ್‌ಗಳಲ್ಲಿ 106 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡು ಅತ್ಯಂತ ಸುಸ್ಥಿತಿಯಲ್ಲಿತ್ತು. ಅದಾದ ಬಳಿಕ ಎಲ್‌ಎಸ್‌ಜಿ ತಂಡ ನೀಡಿದ ಬ್ಯಾಟಿಂಗ್ ಪ್ರದರ್ಶನ ನಿಜಕ್ಕೂ ಆಘಾತಕಾರಿಯಾಗಿತ್ತು. ಕೊನೆಯ 12 ಎಸೆತಗಳಲ್ಲಿ 17 ರನ್‌ಗಳ ಅಗತ್ಯವಿದ್ದಾಗ ಶಮಿ 19ನೇ ಓವರ್‌ನಲ್ಲಿ ಕೇವಲ 5 ರನ್ ನೀಡಿ ಪಂದ್ಯವನ್ನು ರೋಚಕ ಅಂತಿಮ ಓವರ್‌ಗೆ ಕೊಂಡೊಯ್ದರು.
ಕೊನೆಯ ಓವರ್ ಎಸೆದ ಮೋಹಿತ್ ಶರ್ಮಾ ಕೆಎಲ್ ರಾಹುಲ್ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಅವರನ್ನು ಸತತ ಎರಡು ಎಸೆತಗಳಲ್ಲಿ ಔಟ್ ಮಾಡಿದರು. ನಾಲ್ಕು ಹಾಗೂ ಐದನೇ ಓವರ್‌ನಲ್ಲಿ ಜಿಟಿ ತಂಡ ಆಯುಶ್ ಬದೋನಿ ಹಾಗೂ ದೀಪಕ್ ಹೂಡಾ ಅವರನ್ನು ರನೌಟ್ ಮಾಡಿತು. ಈ ಮೂಲಕ 7 ರನ್‌ಗಳ ಅಂತರದ ರೋಚಕ ಗೆಲುವು ಸಾಧಿಸಿದೆ ಗುಜರಾತ್ ಟೈಟನ್ಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications