ಭಾರತ ತಂಡಕ್ಕೆ ಮರಳುತ್ತೀರಾ ಎಂದು ಕೇಳಿದ್ದಕ್ಕೆ ಅಚ್ಚರಿಯ ಉತ್ತರ ನೀಡಿದ ವಿಜಯ್ ಶಂಕರ್!
ಗುಜರಾತ್ ಟೈಟನ್ಸ್ ತಂಡದ ಆಲ್‌ರೌಂಡರ್ ವಿಜಯ್ ಶಂಕರ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಸ್ಪೋಟಕ ಪ್ರದರ್ಶಣ ನೀಡುವಲ್ಲಿ ಯಶಸ್ವಿಯಾಗುತ್ತಿರುವ ವಿಜಯ್ ಶಂಕರ್ ತಂಡಕ್ಕೆ ಅನಿವಾರ್ಯ ಸಂದರ್ಭದಲ್ಲಿ ಆಪತ್ಬಾಂಧವನಾಗಿಯೂ ನೆರವಾಗಿದ್ದಾರೆ. ಆಡಿರುವ ಆರು ಪಂದ್ಯಗಳಲ್ಲಿ ವಿಜಯ್ ಶಂಕರ್ ಎರಡು ಅರ್ಧ ಶತಕ ಸಿಡಿಸಿದ್ದು 49.75 ಸರಾಸರಿ ಹೊಂದಿದ್ದಾರೆ. ಅಲ್ಲದೆ 165.83ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ.
ವಿಜಯ್ ಶಂಕರ್ ಅವರ ಈ ಪ್ರದರ್ಶನ ಅವರನ್ನು ಮತ್ತೆ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ನೆರವಾಗಲಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿದೆ. ಅಲ್ಲದೆ ಈ ವರ್ಷ ಏಕದಿನ ವಿಶ್ವಕಪ್ ಟೂರ್ನಿಯ ವರ್ಷವಾಗಿದ್ದು ಆಯ್ಕೆಗಾರರು ಮತ್ತೆ ತಮ್ಮತ್ತ ಚಿತ್ತಹರಿಸುವಂತೆ ಮಾಡುವಲ್ಲಿಯೂ ವಿಜಯ್ ಶಂಕರ್ ಯಶಸ್ವಿಯಾಗಿದ್ದಾರೆ ಎಂಬುದಲ್ಲಿ ಅಚ್ಚರಿಯಿಲ್ಲ. ಆದರೆ 2019ರ ಏಕದಿನ ವಿಶ್ವಕಪ್‌ನಲ್ಲಿ ವಿಜಯ್ ಶಂಕರ್‌ಗೆ ಅಚ್ಚರಿ ರೀತಿಯಲ್ಲಿ ಅವಕಾಶ ದೊರೆತು ಸಾಕಷ್ಟು ವಿವಾದವೂ ಉಂಟಾಗಿತ್ತು.

ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ವಿಜಯ್ ಶಂಕರ್ ಬಳಿ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ವಿಚಾರವಾಗಿ ಪ್ರಶ್ನೆ ಕೇಳಲಾಯಿತು. ಇದಕ್ಕೆ ವಿಜಯ್ ಶಂಕರ್ ಅಚ್ಚರಿಯ ಉತ್ತರವನ್ನು ನೀಡಿದ್ದಾರೆ. ತಾನೀಗ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಬಗ್ಗೆ ಯಾವುದೇ ಯೋಚನೆ ಹೊಂದಿಲ್ಲ ಎಂದಿದ್ದಾರೆ ಶಂಕರ್. ಅಲ್ಲದೆ ಈಗ ತನ್ನ ಮುಂದಿರುವುದು ಗುಜರಾತ್ ಟೈಟನ್ಸ್ ತಂಡದ ಪರವಾಗಿ ಅದ್ಭುತ ಪ್ರದರ್ಶಣ ನೀಡುವುದು ಮಾತ್ರವೇ ಆಗಿದೆ ಎಂದಿದ್ದಾರೆ.
"ನನ್ನ ಪ್ರಕಾರ ಅದು ಬಹಳ ದೂರದಲ್ಲಿದೆ. ಮಾನಸಿಕವಾಗಿ ನಾನು ಅದರ ಬಗ್ಗೆ ಯೋಚನೆಯನ್ನು ಕೂಡ ಮಾಡುತ್ತಿಲ್ಲ.ನನ್ನ ತಂಡಕ್ಕೆ ಪಂದ್ಯವನ್ನು ಗೆಲ್ಲಿಸಲು ಸಾಧ್ಯವಾದರೆ ಆ ತೃಪ್ತಿಯನ್ನು ಮಾಯತ್ರವೇ ನಾನು ಪಡೆದುಕೊಳ್ಳುತ್ತಿದ್ದೇನೆ" ಎಂದು ವಿಜಯ್ ಶಂಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
"ನನ್ನ ತಂಡ ಗೆಲ್ಲುವದಕ್ಕೆ ನಾನು ಕೊಡುಗೆ ನೀಡಲು ಸಾಧ್ಯವಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನಾವು ಅತಿ ಹೆಚ್ಚು ಪ್ರೀತಿಸುವುದು ಕ್ರಿಕೆಟನ್ನು. ಅದಕ್ಕೆ ಇನ್ನು ಕೂಡ ಆಡುವುದನ್ನು ಮುಂದುವರಿಸಿದ್ದೇನೆ. ಯಾವುದೇ ನಿರೀಕ್ಷೆಗಳು ಕೂಡ ಇಲ್ಲ. ನಾನು ನನ್ನ ಕ್ರಿಕೆಟನ್ನು ಆನಂದಿಸಲು ಮಾತ್ರವೇ ಬಯಸುತ್ತೇನೆ" ಎಂದಿದ್ದಾರೆ ಅನುಭವಿ ಕ್ರಿಕೆಟಿಗ ವಿಜಯ್ ಶಂಕರ್.
ಹಾಲಿ ಚಾಂಪಿಯನ್ ಆಗಿರುವ ಗುಜರಾತ್ ಟೈಟನ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿಯೂ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಸಾಕಷ್ಟು ಬಲಿಷ್ಠ ಆಟಗಾರರನ್ನು ಹೊಂದಿರುವ ತಂಡವಾಗಿದ್ದು ಮಧಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್ ಹಾಗೂ ವಿಜಯ್ ಶಂಕರ್ ಆಧಾರವಾಗಿದ್ದಾರೆ. ಹೀಗಾಗಿ ಸಂಕಷ್ಟದ ಸಂದರ್ಭದಲ್ಲಿಯೂ ಗುಜರಾತ್ ಟೈಟನ್ಸ್ ತಂಡ ಗೆಲುವು ಸಾಧ್ಯವಾಗುತ್ತಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ 7 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಜಿಟಿ ತಂಡ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications