ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಆರ್‌ಸಿಬಿ ತಂಡ ಭಾನುವಾರ ನಡೆದ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಸತತ ಎರಡನೇ ಗೆಲುವು ಸಾಧಿಸಿದ ಆರ್‌ಸಿಬಿ ತಂಡ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಹಂಗಾಮಿ ನಾಯಕನಾಗಿ ವಿರಾಟ್ ಕೊಹ್ಲಿ ಜವಾಬ್ಧಾರಿ ವಹಿಸಿಕೊಂಡ ಎರಡು ಪಂದ್ಯದಲ್ಲಿಯೂ ಆರ್‌ಸಿಬಿ ಸರ್ವಾಂಗೀಣ ಪ್ರದರ್ಶನ ನೀಡಿ ಮಿಂಚಿದೆ. ಆದರೆ ಆರ್‌ಆರ್ ವಿರುದ್ಧದ ಈ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ ವಿರಾಟ್ ಕೊಹ್ಲಿಗೆ ಬರೊಬ್ಬರಿ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ ನಿಗದಿತ ಅವಧಿಯಲ್ಲಿ ಬೌಲಿಂಗ್ ಸಂಪೂರ್ಣಗೊಳಿಸಲು ವಿಫಲವಾಗಿತ್ತು. ಹೀಗಾಗಿ ಆರ್‌ಸಿಬಿ ನಾಯಕನಿಗೆ ಐಪಿಎಲ್ ದಂಡ ವಿಧಿಸಿದೆ. ತಂಡವನ್ನು ಮುನ್ನಡೆಸಿದ ವಿರಾಟ್ ಕೊಹ್ಲಿಗೆ ಈ ಪಂದ್ಯದಲ್ಲಿ 24 ಲಕ್ಷ ರೂಪಾಯಿ ದಂಡವಿಧಿಸಲಾಗಿದ್ದು ತಂಡದ ಇತರ ಆಟಗಾರರು ಕೂಡ ದಂಡದ ಶಿಕ್ಷೆಗೆ ಒಳಗಾಗಿದ್ದಾರೆ. ಆದರೆ ಅವರಿಗೆ ಕಡಿಮೆ ಪ್ರಮಾಣದ ದಂಡ ವಿಧಿಸಲಾಗಿದೆ.

ಈ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. "ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿಗೆ ನಿಧಾನಗತಿಯ ಬೌಲಿಂಗ್‌ನ ಕಾರಣಕ್ಕಾಗಿ 24 ಲಕ್ಷ ರೂಪಾಯಿಯ ದಂಡ ವಿಧಿಸಲಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 23ರಂದು ಈ ಪಂದ್ಯ ನಡೆದಿತ್ತು"
"ಈ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಎರಡನೇ ಬಾರಿಗೆ ಈ ತಪ್ಪು ಮಾಡಿದ್ದು ಇದು ಐಪಿಎಲ್‌ನ ನೀತಿಸಂಹಿತೆಯ ಆಧಾರದಲ್ಲಿ ವಿರಾಟ್ ಕೊಹ್ಲಿಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಅಲ್ಲದೆ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡ ಎಲ್ಲಾ ಆಟಗಾರರು ಹಾಗೂ ಇಂಪಾಕ್ಟ್ ಸಬ್‌ಸ್ಟಿಟ್ಯೂಟ್‌ಗೆ ಕೂಡ 6 ಲಕ್ಷ ರೂಪಾಯಿ ಅಥವಾ ಪಂದ್ಯದ ಸಂಭಾವನೆಯ 25 ಶೇಕಡಾ, ಯಾವುದು ಕಡಿಮೆ ಅದನ್ನು ದಂಡವಾಗಿ ಪಾವತಿಸಬೇಕಾಗುತ್ತದೆ" ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಒಂದು ಓವರ್‌ಗಳಷ್ಟು ನೊಧಾನವಾಗಿ ಬೌಲಿಂಗ್ ನಡೆಸಿತ್ತು. ಹೀಗಾಗಿ ಮಹತ್ವದ ಅಂತಿಮ ಓವರ್‌ನಲ್ಲಿ ಆರ್‌ಸಿಬಿ ತಂಡದ ಫೀಲ್ಡಿಂಗ್‌ನಲ್ಲಿ 30 ಯಾರ್ಡ್‌ಗಳ ಗೆರೆಯಾಚೆ ಕೇವಲ 4 ಆಟಗಾರರನ್ನು ಮಾತ್ರವೇ ನಿಲ್ಲಿಸುವ ಅವಕಾಶ ಹೊಂದಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಆರ್‌ಆರ್ ತಂಡಕ್ಕೆ ಕೊನೆಯ ಎರಡು ಓವರ್‌ಗಳಲ್ಲಿ 33 ರನ್‌ಗಳಿಸುವ ಸವಾಲು ಹೊಂದಿತ್ತು. ಸಿರಾಜ್ ಎಸೆದ 19ನೇ ಓವರ್‌ನಲ್ಲಿ ಆರ್‌ಆರ್ ದಾಂಡಿಗ ಧ್ರುವ್ ಜುರೆಲ್ ಒಂದು ಸಿಕ್ಸರ್ ಬಾರಿಸಿದ ಕಾರಣ 13 ರನ್‌ಗಳನ್ನು ಕಲೆಹಾಕಿತು.
ಹೀಗಾಗಿ ಆರ್‌ಸಿಬಿ ವಿರುದ್ಧ ಗೆಲ್ಲಲು ಆರ್ಆರ್ ತಂಡಕ್ಕೆ ಅಂತಿಮ ಓವರ್‌ನಲ್ಲಿ 20 ರನ್‌ಗಳ ಅಗತ್ಯವಿತ್ತು. ಹರ್ಷಲ್ ಪಟೇಲ್ ಎಸೆದ ಈ ಓವರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 12 ರನ್‌ಗಳನ್ನು ಗಳಿಸಲು ಮಾತ್ರವೇ ಶಕ್ತವಾಯಿತು. ಈ ಮೂಲಕ ಆರ್‌ಸಿಬಿ ತಂಡ ಈ ಪಂದ್ಯದಲ್ಲಿ 7 ರನ್‌ಗಳ ಅಂತರದ ಗೆಲುವು ಸಾಧಿಸಿದೆ.
ಇನ್ನು ಆರ್‌ಸಿಬಿ ತಂಡವನ್ನು ಕಳೆದ ಎರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿಯೇ ಮುನ್ನಡೆಸಿದ್ದಾರೆ. ಆರ್‌ಸಿಬಿ ತಂಡದ ಖಾಯಂ ನಾಯಕ ಫಾಫ್ ಡು ಪ್ಲೆಸಿಸ್ ಗಾಯದ ಕಾಣದಿಂದಾಗಿ ಫೀಲ್ಡಿಂಗ್ ಇಂಫಾಕ್ಟ್ ಸಬ್‌ಸ್ಟಿಟ್ಯೂಟ್ ಆಗಿ ಹೊರಗುಳಿಯುವ ಕಾರಣ ಕೊಹ್ಲಿ ಈ ಜವಾಬ್ಧಾರಿ ವಹಿಸಿಕೊಂಡಿದ್ದಾರೆ.