
ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 50ನೇ ಪಂದ್ಯ ಇಂದು ( ಮೇ 6 ) ಜರುಗುತ್ತಿದ್ದು, ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ.
ಈ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟೂರ್ನಿಯಲ್ಲಿ ಇತ್ತಂಡಗಳು ಮುಖಾಮುಖಿಯಾಗಲಿರುವ ಎರಡನೇ ಪಂದ್ಯವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯಲ್ಲಿ 9 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಗೆದ್ದು 4 ಪಂದ್ಯಗಳಲ್ಲಿ ಸೋತು 10 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಲ್ಲಿ ಇಲ್ಲಿಯವರೆಗೂ 9 ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲಿ ಮಾತ್ರ ಗೆದ್ದು 6 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ.
ಹೀಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಹಾಗೂ ಕೊನೆಯ ಸ್ಥಾನದಲ್ಲಿ ಇರುವ ತಂಡಗಳ ನಡುವೆ ನಡೆಯುತ್ತಿರುವ ಪಂದ್ಯ ಇದಾಗಿದ್ದು, ಎರಡೂ ತಂಡಗಳು ಸಹ ಗೆಲ್ಲಲೇಬೇಕಾದ ಪಂದ್ಯ ಇದಾಗಿದೆ. ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ಲೇಆಫ್ ರೇಸ್‌ನಲ್ಲಿ ಪೈಪೋಟಿ ಹೆಚ್ಚಿದ್ದು, ತನ್ನ ಪ್ಲೇಆಫ್ ಹಾದಿಯನ್ನು ಸುಲಭಪಡಿಸಿಕೊಳ್ಳಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಪ್ಲೇಆಫ್ ರೇಸ್‌ನಿಂದ ದೂರ ಸರಿದಿದ್ದು ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.
ಇನ್ನು ಈ ಎರಡೂ ತಂಡಗಳೂ ಸಹ ತಮ್ಮ ಕೊನೆಯ ಪಂದ್ಯಗಳಲ್ಲಿ ಸಣ್ಣ ಮೊತ್ತ ಟಾರ್ಗೆಟ್ ನೀಡಿ ಗೆದ್ದಿವೆ. ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 126 ರನ್‌ಗಳ ಟಾರ್ಗೆಟ್ ಬಾರಿಸಲು ಬಿಡದೇ ಜಯ ಸಾಧಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ತಂಡವನ್ನು 130 ರನ್ ಬಾರಿಸಲು ಬಿಡದೇ ಗೆದ್ದುಕೊಂಡಿದೆ.
ಇತ್ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಕಲೆಹಾಕಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು 175 ರನ್‌ಗಳ ಗುರಿಯನ್ನು ನೀಡಿತ್ತು.
ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲಗೊಂಡ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 151 ರನ್ ಕಲೆಹಾಕಿತ್ತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ಸಾಧಿಸಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ರನ್ ಚೇಸ್ ಮಾಡುತ್ತಿದ್ದ ವೇಳೆ ವಿರಾಟ್ ಕೊಹ್ಲಿ ಡಗ್ ಔಟ್‌ನಲ್ಲಿ ಕುಳಿತಿದ್ದ ಸೌರವ್ ಗಂಗೂಲಿ ಅವರನ್ನು ಗುರಾಯಿಸಿದ್ದರು. ಇಬ್ಬರೂ ಪಂದ್ಯ ಮುಗಿದ ಬಳಿಕ ಪರಸ್ಪರ ಹ್ಯಾಂಡ್‌ಶೇಕ್ ನೀಡರಲಿಲ್ಲ. ಇದರ ಮೂಲಕ ಇಬ್ಬರ ನಡುವೆ ವೈಮನಸ್ಸು ಹಾಗೂ ದ್ವೇಷ ದೊಡ್ಡ ಮಟ್ಟದಲ್ಲಿದೆ ಎಂಬುದು ತಿಳಿದುಬಂದಿತ್ತು.
ಹೀಗೆ ದ್ವೇಷ ಹೊಂದಿರುವ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ಮತ್ತೊಮ್ಮೆ ಎದುರಾಗಲಿದ್ದಾರೆ ಎಂಬ ವಿಷಯಕ್ಕಾಗಿ ಈ ಪಂದ್ಯ ಮತ್ತಷ್ಟು ಕ್ರೇಜ್ ಪಡೆದುಕೊಂಡಿದ್ದು, ಇದೇ ವಿಷಯವನ್ನಿಟ್ಟುಕೊಂಡು ಭಾರತದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಬೋಲ್ಡ್ ಸ್ಟೇಟ್‌ಮೆಂಟ್ ಒಂದನ್ನು ನೀಡಿದ್ದಾರೆ.
"ಪಂದ್ಯದ ಸಂಖ್ಯೆ 50. ರಾಯಲ್ ಚಾಲೆಂಜರ್ಸ್ ಬೆಂಗಳೂರು ಜತೆ ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಡಲಿದ್ದು, ಇದು ಐಪಿಎಲ್‌ನ ಗೋಲ್ಡನ್ ಮ್ಯಾಚ್ ಆಗಿದೆ. ಇಲ್ಲಿ 3 ವಿಷಯಗಳು ಈ ಪಂದ್ಯದ ಮಹತ್ವವನ್ನು ಹೆಚ್ಚಿಸಿದೆ. ಮೊದಲಿಗೆ ಈ ವಿರಾಟ್ ಕೊಹ್ಲಿ vs ಡೇವಿಡ್ ವಾರ್ನರ್. ಈ ಪಂದ್ಯ ಥ್ರಿಲ್ಲರ್ ಆಗಿರಲಿದೆ. ಡೆಲ್ಲಿ ಕಳೆದ ಪಂದ್ಯದಲ್ಲಿ ಗೆದ್ದು ಕಮ್‌ಬ್ಯಾಕ್ ಮಾಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಚ್ಚು ಪಂದ್ಯಗಳನ್ನು ಗೆದ್ದು ಪ್ಲೇಆಫ್ ಕನಸು ಕಾಣ್ತಿದೆ. ಎರಡೂ ತಂಡಗಳಿಗೂ ಈ ಪಂದ್ಯ ಮುಖ್ಯವಾಗಿದೆ. ಎರಡನೆಯದಾಗಿ ನಾರ್ಕಿಯಾ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಬಲ್ಲರಾ ಎಂಬ ಕುತೂಹಲವಿದೆ" ಎಂದು ಶ್ರೀಶಾಂತ್ ತಿಳಿಸಿದರು.
ಇನ್ನೂ ಮುಂದುವರಿದು ಮಾತನಾಡಿದ ಶ್ರೀಶಾಂತ್ " ಮೂರನೇ ಅಂಶ ಇಂಟರೆಸ್ಟಿಂಗ್ ಆಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿರಾಟ್ ಕೊಹ್ಲಿ ಶತಕ ಬಾರಿಸಬೇಕು ಎಂದು ಇಚ್ಛಿಸುತ್ತೇನೆ. ಇದು ದಾದಾಗೆ ಒಂದೊಳ್ಳೆ ಟ್ರಿಬ್ಯೂಟ್ ಕೂಡ ಆಗಿರಲಿದೆ. ವಿರಾಟ್ ಹೋಗಿ.. ಸೆಂಚುರಿ ಬಾರಿಸಿ.. ರಾಯಲ್ ಚಾಲೆಂಜರ್ಸ್ ಬೆಂಗಳೂರಿಗಾಗಿ ಅದನ್ನು ಮಾಡಿ" ಎಂದು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಬೋಲ್ಡ್ ಆಗಿ ಹೇಳಿದ್ದಾರೆ.